• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಡದಿಯಿಂದ ಗುಜರಾತಿಗೆ ಬಾಹುಬಲಿ ಪ್ರಯಾಣ

By * ಪೂರ್ಣಚಂದ್ರ ಮಾಗಡಿ,
|

ರವಿ ಕಾಣದ್ದನ್ನ ಕವಿ ಕಂಡ, ಕವಿ ಕಾಣದ್ದನ್ನ ಕಲಾವಿದ ಕಂಡ ಎಂಬ ಮಾತಿದೆ. ಕಲ್ಪನಾಲೋಕದಲ್ಲಿ ಸದಾ ವಿಹರಿಸುತ್ತಿರುವ ಕಲಾವಿದ ತನ್ನ ಕುಂಚದಲ್ಲಿ ಅರಳುವ ಕಲೆಗೆ ಜೀವ ತುಂಬುವ ಅಸಾಮಾನ್ಯ ಶಕ್ತಿ ಕಲಾವಿದನಿಗಿರುತ್ತದೆ. ಆದ್ದರಿಂದಲೇ ರಾಜ ಮಹಾರಾಜರುಗಳ ಕಾಲದಲ್ಲಿ ಕಲಾವಿದರಿಗೆ ವಿಶೇಷ ಸ್ಥಾನಮಾನಗಳಿದ್ದವು. ಚಾವುಂಡರಾಯ ತನ್ನ ನೆಚ್ಚಿನ ಶಿಲ್ಪಿ ಅರಿಷ್ಟನೇಮಿ ಮೂಲಕ ವಿಶ್ವವಿಖ್ಯಾತ ಬಾಹುಬಲಿ ಮೂರ್ತಿಯನ್ನ ಕೆತ್ತನೆಗೊಳಿಸಿ ಶ್ರವಣಬೆಳಗೊಳದಲ್ಲಿ ಪ್ರತಿಷ್ಠಾಪಿಸಿದ್ದಾನೆ.

ಏಕಶಿಲಾಬೆಟ್ಟದಲ್ಲಿ ಕೆತ್ತನೆಗೊಳಿಸಿರುವ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯಂತೆ ಎರಡನೇ ಅತೀದೊಡ್ಡ ಸುಮಾರು 41 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನ ಇಂದಿನ ಪೀಳಿಗೆಯ ಶಿಲ್ಪಿ ಅಶೋಕ್ ಗುಡಿಕಾರ್‌ರವರು ಕೆತ್ತನೆ ಮಾಡಿದ್ದಾರೆ. ಜೈನರ ಪವಿತ್ರಸ್ಥಳವಾದ ಗುಜರಾತ್‌ನ ಸೋನ್‌ಘಡ್ ಪವಿತ್ರ ಕ್ಷೇತ್ರಕ್ಕಾಗಿ ಜೈನಸಮುದಾಯದ ಆಸೆಯಂತೆ ಅಶೋಕ್ ಗುಡಿಕಾರ್‌ರವರು ಬಾಹುಬಲಿ ಮೂರ್ತಿಗೆ ಜೀವಂತಿಕೆ ತುಂಬಿ ಕಲಾವಿದನಲ್ಲಿರುವ ಅಸಾಮಾನ್ಯ ಶಕ್ತಿಯನ್ನ ತೋರ್ಪಡಿಸಿದ್ದಾರೆ.

ಧರ್ಮಚಕ್ರದ ಸೂಚನೆಯಂತೆ ಭರತ ಬಾಹುಬಲಿಯ ನಡುವೆ ಯುದ್ದ ನಡೆದು ಸೋಲಿನ ಸುಳಿಗೆ ಸಿಲುಕಿದ್ದ ಸೋದರ ಭರತನಿಗೆ ರಾಜ್ಯವನ್ನ ದಾನ ಮಾಡಿ ಸರ್ವಸಂಗ ಪರಿತ್ಯಾಗಿಯಾದ ಬಾಹುಬಲಿ ಇತಿಹಾಸದ ಪುಟ ಸೇರಿದ್ದಾನೆ. ಅಹಿಂಸಾತತ್ವವನ್ನ ಜಗತ್ತಿಗೆ ಸಾರಿ ತ್ಯಾಗಮೂರ್ತಿಯೆನಿಸಿರುವ ಬಾಹುಬಲಿಯನ್ನ ಇಂದಿಗೂ ದೈವಿಕ ಭಾವನೆಯಿಂದ ಪೂಜಿಸುತ್ತಾರೆ.

ಜೈನಸಮುದಾಯದಾಯ ತತ್ವ ನೀತಿಯನ್ನ ಅನುಸರಿಸುತ್ತಿದ್ದ ದೊರೆ ಚಾವುಂಡರಾಯ ತನ್ನ ಆಸ್ಥಾನ ಶಿಲ್ಪಿ ಅರಿಷ್ಟನೇಮಿ ಏಕಶಿಲೆ ಬಳಸಿ ಬಾಹುಬಲಿಯ ಮೂರ್ತಿಯನ್ನು ಕೆತ್ತನೆಗೊಳಿಸಿ ಶ್ರವಣಬೆಳಗೊಳದಲ್ಲಿ ಪ್ರತಿಷ್ಠಾಪಿಸಿದ್ದಾನೆ. ಕಲ್ಲಿನಲ್ಲಿ ಬಾಹುಬಲಿಗೆ ಜೀವಂತಿಕೆ ತುಂಬಿದಂತಹ ಅಸಾಮಾನ್ಯ ಶಕ್ತಿ ಅಂದಿನ ಪ್ರಖ್ಯಾತ ಶಿಲ್ಪಿ ಅರಿಷ್ಟನೇಮಿಗಿತ್ತು ಎಂಬುದು ಸಾಬೀತಾಗಿದೆ. ಅದೇ ರೀತಿ ಗುಜರಾತ್‌ನ ಭಾವನಗರ ಜಿಲ್ಲೆಯ ಸೋನ್‌ಘಡ್ ಎಂಬ ಜೈನರ ಪವಿತ್ರ ಕ್ಷೇತ್ರದಲ್ಲಿ ಶ್ರವಣಬೆಳಗೊಳ ಬಾಹುಬಲಿಯ ಮಾದರಿಯಲ್ಲಿ ಬಾಹುಬಲಿ ಮೂರ್ತಿಯನ್ನ ಪ್ರತಿಷ್ಠಾಪಿಸಲು ಜೈನಸಮುದಾಯ ಬಾಂಧವರು ಮುಂದಾಗಿದ್ದಾರೆ.

ಜೈನಬಾಂಧವರು ಮೂರ್ತಿಯ್ನ ಪ್ರತಿಷ್ಠಾಪಿಸುವ ಸಲುವಾಗಿ ರಾಮನಗರದ ಬಿಡದಿಯ ಶಿಲ್ಪಿ ಅಶೋಕ್ ಗುಡಿಕಾರ್‌ರನ್ನ ಸಂಪರ್ಕಿಸಿ ಮೂರ್ತಿ ಕೆತ್ತನೆಯ ಗುತ್ತಿಗೆ ನೀಡಿದ್ದರು. ಗುತ್ತಿಗೆ ಪಡೆದ ಅಶೋಕ್ ಗುಡಿಕಾರ್‌ರವರು ಏಕಶಿಲಾ ಬೆಟ್ಟದಲ್ಲಿ ಸುಮಾರು 41 ಅಡಿ ಎತ್ತರದ ವಿಶ್ವದ ಎರಡನೇ ಅತಿ ದೊಡ್ಡ ಬಾಹುಬಲಿ ಮೂರ್ತಿಯನ್ನ ಸುಂದರವಾಗಿ ಕೆತ್ತನೆಗೊಳಿಸಿದ್ದಾರೆ. ಜೈನಸಮುದಾಯದವರ ಬೇಡಿಕೆಯಂತೆ ಶ್ರವಣಬೆಳಗೊಳದಲ್ಲಿನ ಬಾಹುಬಲಿಯನ್ನ ಮಾಡೆಲ್ ಮಾಡಿಕೊಂಡು ಸತತ 15 ತಿಂಗಳ ಕಾಲ 14 ಮಂದಿ ಕಲಾವಿದರ ಸಹಕಾರದೊಂದಿಗೆ ಬಾಹುಬಲಿ ಮೂರ್ತಿಯನ್ನ ಕೆತ್ತನೆಗೊಳಿಸಿದ್ದಾರೆ. ಸುಮಾರು 440 ಟನ್‌ನಷ್ಟಿದ್ದ ಕಚ್ಚಾ ಕ್ವಾರಾಗ್ರಾನೈಟ್ ಕಲ್ಲನ್ನ ಕೆತ್ತನೆಗೊಳಿಸಿ 200 ಟನ್‌ಗಿಳಿಸಿದ್ದಾರೆ.

ಮಲೆನಾಡಿನ ಗುಡಿಕಾರರು: ತಲೆತಲಾಂತರಗಳಿಂದ ಕಲೆಯನ್ನೇ ಉಸಿರಾಗಿಸಿಕೊಂಡು ಬಂದಿರುವ ಮಲೆನಾಡಿನ ಗುಡಿಕಾರ್ ಕುಟುಂಬದ ಕುಡಿಯಾಗಿರುವ ಅಶೋಕ್ ಗುಡಿಕಾರ್‌ರವರು ಚಿಕ್ಕಂದಿನಿಂದಲೇ ಕೆತ್ತನೆಯನ್ನೇ ಜೀವಾಳವನ್ನಾಗಿಸಿಕೊಂಡಿದ್ದಾರೆ. ಗಂಧದ ಮರದಲ್ಲಿ ಕುಸುರಿ ಕೆಲಸ ಮಾಡುತ್ತಿದ್ದ ಅಶೋಕ್ ಗುಡಿಕಾರ್‌ರ ಪೂರ್ವಿಕರು ನಂತರ ಕಲ್ಲಿನಲ್ಲಿ ಮೂರ್ತಿ ಕೆತ್ತನೆ ಮಾಡುತ್ತಿದ್ದರು.

ನಂತರ ಹೆಚ್ಚಿನ ಕಲಾಭ್ಯಾಸಕ್ಕಾಗಿ ಬೆಂಗಳೂರಿನ ಖ್ಯಾತ ಶಿಲ್ಪಿ ವಾದಿರಾಜರಿಂದ ಸಲಹೆ ಮಾರ್ಗದರ್ಶನ ಪಡೆದ ಅಶೋಕ್ ಗುಡಿಕಾರ್‌ರವರು ಮೂರ್ತಿ ಕೆತ್ತನೆಯಲ್ಲಿ ನಿಪುಣತೆಯನ್ನ ಸಾಧಿಸಿದ್ದಾರೆ. ಸುಮಾರು 200 ಟನ್‌ನಷ್ಟು ಭಾರವಿರುವ ಎರಡನೇ ಅತೀ ದೊಡ್ಡ ಬಾಹುಬಲಿ ವಿಗ್ರಹ ಭಾನುವಾರ(ಮೇ.30)ದಂದು ಗುಜರಾತ್‌ನ ಸೋನ್‌ಘಡ್‌ಗೆ ಪ್ರಯಾಣ ಬೆಳೆಸಲಿದೆ. 140 ಚಕ್ರಗಳ ಅತ್ಯಾಧುನಿಕ ಹೈಡ್ರಾಲಿಕ್ ಟ್ರಕ್ ಈಗಾಗಲೇ ಬಾಹುಬಲಿ ವಿಗ್ರಹವನ್ನ ಸಾಗಿಸಲು ಸಜ್ಜಾಗಿದೆ. ಬಾಹುಬಲಿ ಮೂರ್ತಿ ಸಾಗಾಣಿಕೆ ಸಂಧರ್ಭದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲಾ ಸಿದ್ದತೆಗಳನ್ನ ಟ್ರಕ್‌ನ ಸಿಬ್ಬಂದಿಗಳು ಮಾಡುತ್ತಿದ್ದಾರೆ.

ಅಪ್ರತಿಮ ಮೂರ್ತಿ:ಕಲ್ಲಿನಲ್ಲಿ ಯಾವುದೇ ಮೂರ್ತಿಗೆ ಅಂದಕೊಟ್ಟು ಜೀವಂತಿಕೆ ಬರುವ ರೀತಿಯಲ್ಲಿ ಕೆತ್ತನೆ ಮಾಡುವಲ್ಲಿ ಅಸಾಮಾನ್ಯ ಶಕ್ತಿಯನ್ನ ಹೊಂದಿರಬೇಕಾಗುತ್ತದೆ. ಆ ಅಸಾಮಾನ್ಯ ಶಕ್ತಿಯನ್ನ ಶಿಲ್ಪಿ ಅಶೋಕ್ ಗುಡಿಕಾರ್‌ರವರು ಬಾಹುಬಲಿಯ ಎಲ್ಲಾ ಅಂಗಗಳನ್ನ ಶ್ರವಣಬೆಳಗೊಳದ ಬಾಹುಬಲಿಯ ಆಕಾರದಲ್ಲಿ ಕೆತ್ತನೆ ಮಾಡಿದ್ದಾರೆ. ಶ್ರವಣಬೆಳಗೊಳದ ಬಾಹುಬಲಿಯ ಪ್ರತಿಬಿಂಬದಂತಿರುವ ಈ ಬಾಹುಬಲಿಯ ಮೂರ್ತಿಯನ್ನ ಮತ್ತೊಮ್ಮೆ ಚಾವುಂಡರಾಯನೇ ಕೆತ್ತನೇ ಮಾಡಿದ್ದಾನೆಂದು ಭಾಸವಾಗುತ್ತಿದೆ. 21ನೇ ಶತಮಾನದಲ್ಲು ಕಲಾವಂತಿಕೆ ಜೀವಂತವಾಗಿದೆ ಎಂಬುದಕ್ಕೆ ಅಶೋಕ್ ಗುಡಿಕಾರ್‌ರವರ ಕುಂಚದಲ್ಲಿ ಅರಳಿರುವ ಈ ಬಾಹುಬಲಿ ಮೂರ್ತಿಯೇ ಸಾಕ್ಷಿಯಾಗಿದೆ ಎಂದು ಭೇಟಿ ನೀಡಿದ್ದ ಇಸ್ರೋ ಉದ್ಯೋಗಿ ಬೆಂಗಳೂರಿನ ವಿಜಯ್‌ಕುಮಾರ್ ಅಭಿಪ್ರಾಯಪಟ್ಟರು.

ಬಾಹುಬಲಿಯ ಪ್ರತಿರೂಪವಾಗಿರುವ ಈ ಮೂರ್ತಿ ಭಾನುವಾರದಂದು ಸ್ಥಳಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧೆಡೆಗಳಿಂದ ಜೈನ ಬಾಂಧವರು ಬಂದು ವೀಕ್ಷಿಸುತ್ತಿದ್ದಾರೆ. ದೇಶದಲ್ಲಿರುವ ಎಲ್ಲಾ ಬಾಹುಬಲಿ ಮೂರ್ತಿಗಳಿಗಿಂತ ಶ್ರವಣಬೆಳಗೊಳ ಬಾಹುಬಲಿ ಮೂರ್ತಿಯ ನಂತರದ ಸೌಂದರ್ಯ ಈ ಮೂರ್ತಿಯಲ್ಲಿ ಅಡಗುವಂತೆ ಅಶೋಕ್ ಗುಡಿಕಾರ್ ತಮ್ಮ ಕಲೆಯಲ್ಲಿ ಅರಳಿಸಿದ್ದಾರೆ. ಕಲ್ಲಿಗೆ ಜೀವ ನೀಡುವ ಕಲಾವಿದನಿಗೆ ಕಲಾಪ್ರಿಯರು ನೋಡಿ ಸೌಂದರ್ಯವನ್ನ ವರ್ಣಿಸಿದಾಗ ಮಾತ್ರ ಕಲಾವಿದನಿಗೆ ತನ್ನ ಕೆಲಸದಲ್ಲಿ ಸಾರ್ಥಕತೆ ಮೂಡಲು ಸಾಧ್ಯವಾಗುತ್ತದೆಂದು ಮಂಡ್ಯದ ನಿವೃತ್ತ ಪ್ರಾಧ್ಯಾಪಕ ಜೈನಸಮುದಾಯದ ಪಾಪಣ್ಣ ದಂಪತಿಗಳು ಶಿಲ್ಪಿ ಅಶೋಕ್‌ರ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾನುವಾರ(ಮೇ.30)ದಂದು ಗುಜರಾತ್‌ನ ಸೋನಾಘಡ್‌ಗೆ 140 ಚಕ್ರದ ಡಬ್ಬಲ್ ಎಂಜಿನ್ ಟ್ರಕ್‌ನಲ್ಲಿ ಪ್ರಯಾಣ ಬೆಳಸಲಿರುವ ಬಾಹುಬಲಿ ಮೂರ್ತಿ ಸುಮಾರು 45 ದಿನಗಳ ನಂತರ ತಲುಪಲಿದೆ. ಜೈನಸಮುದಾಯದವರು ಸುಮಾರು 40 ಲಕ್ಷಕ್ಕೂ ಹೆಚ್ಚು ವೆಚ್ಛ ಮಾಡಿ ಅಶೋಕ್ ಗುಡಿಕಾರ್‌ರವರ ಕೈಯಿಂದಲೇ ಮೂರ್ತಿಯನ್ನ ಕೆತ್ತನೆಗೊಳಿಸಿದ್ದಾರೆ. ಈಗಾಗಲೇ ಅರ್ಜುನ್ ಸರ್ಜಾರವರ ಹನುಮ ವಿಗ್ರಹವನ್ನ ಕೆತ್ತನೆ ಮಾಡಿರುವ ಅಶೋಕ್‌ರವರು ಹರಿದ್ವಾರದ 38 ಅಡಿ ಹನುಮಾನ್ ವಿಗ್ರಹ, ಕುಕ್ಕೆ ಸುಬ್ರಮಣ್ಯದ 21 ಅಡಿಯ ವಿನಾಯಕನ ಮೂರ್ತಿಯನ್ನ ಕೆತ್ತನೆ ಮಾಡಿದ್ದಾರೆ. ತಮ್ಮ ಅದ್ಭುತ ಕಲಾನೈಪುಣ್ಯದಿಂದ 1992ರಲ್ಲಿ ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿಯನ್ನ ರಾಷ್ಟ್ರಪತಿ ಶಂಕರ್ ದಯಾಳಶರ್ಮಾರವರಿಂದ ಪಡೆದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X