ಬಾಳಿ ಬದುಕಿದ ಅಮ್ಮನಿಗೆ ಇಂಥ ಸಾವೇ?

ಕೊಲೆಯಾದ ಅಜ್ಜಿಯ ಹೆಸರು ಗೌರಮ್ಮ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಆಕೆಗೆ ಆರು ಮಕ್ಕಳು. ಎಲ್ಲಾ ಮಕ್ಕಳು ಅವರವರ ಸಂಸಾರ ಸಮೇತ ಇದೇ ನಗರದ ವಿವಿಧ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಜ್ಜಿ ಮಾತ್ರ ತಾವೊಬ್ಬರೇ ಮನೆ ಮಾಡಿಕೊಂಡು ಕಾಲ ತಳ್ಳುತ್ತಿದ್ದರು. ಅಕ್ಕಪಕ್ಕದ ಜನ ಹೇಳುವ ಪ್ರಕಾರ ಅಜ್ಜಿಗೆ ಸ್ವಾಭಿಮಾನ ಜಾಸ್ತಿಯಿತ್ತಂತೆ. ಸ್ವಾಭಿಮಾನ ಸ್ವಾಗತಾರ್ಹವೇ ಆದರೆ, ನನಗೆ ಯಾರ ಹಂಗೂ ಬೇಡ ಒಬ್ಬಳೇ ಬದುಕನ್ನು ಹೇಗೋ ನಿಭಾಸಿಬಲ್ಲೆ ಎಂಬ ಹಠಮಾರಿತನ ಆಕೆಯ ಜೀವಕ್ಕೇ ಮುಳುವಾಯಿತು ಎನ್ನುವುದು ನೆರೆಹೊರೆಯವರ ಅಭಿಪ್ರಾಯವಾಗಿದೆ.
ಒಂಟಿ ಆಗಿರುವ ಮಹಿಳೆಯರ ಮನೆ ಮೇಲೆ ಆಕ್ರಮಣ, ಕೊಲೆ ಮತ್ತು ಸಂಪತ್ತು ದೋಚುವ ವಿದ್ಯಮಾನ ಬೆಂಗಳೂರಿಗೆ ಹೊಸದೇನಲ್ಲ. ಹಾಡುಹಗಲೇ ಅನೇಕ ವೃದ್ಧರ ಕೊಲೆಯಾಗಿರುವ ಘಟನೆಗಳು ನಗರದಿಂದ ಬೇಕಾದಷ್ಟು ವರದಿಯಾಗಿವೆ, ಆಗುತ್ತಿವೆ. ಇಂಥ ವರದಿಗಳನ್ನು ನೋಡಿ, ಕೇಳಿ, ಓದಿ ತಿಳಿದಿದ್ದರೂ ಕೆಲವರು ಮಾತ್ರ ಎಚ್ಚೆತ್ತುಕೊಳ್ಳುವುದಿಲ್ಲ. ದುರ್ಘಟನೆ ಆದಬಳಿಕ ಚಿಂತಿಸಿದರೆ, ಅತ್ತುಕರೆದು ಮಾಡಿದರೆ ಏನು ಪ್ರಯೋಜನ ?
ಅಪರಾಧ ತಡೆ, ಪೊಲೀಸರ ಕಣ್ಗಾವಲು ಮತ್ತು ಬಂದೋಬಸ್ತ್ ವಿಚಾರಗಳು ಒಂದು ಕಡೆಯಿರಲಿ. ದುರಂತ ಸಂಭವಿಸಿದ ನಂತರ ಹೇಗೂ ಪೋಲಿಸರು ಆಗಮಿಸುತ್ತಾರೆ. ಕಳ್ಳರನ್ನು, ಕೊಲೆಗಡುಕರನ್ನು ಪತ್ತೆ ಹಚ್ಚಲು ಆರಂಭಿಸುತ್ತಾರೆ. ಈ ಮಧ್ಯೆ ಮರಣೋತ್ತರ ಪರೀಕ್ಷೆಗಳು, ದುಖ ದುಮ್ಮಾನಗಳು ಕಣ್ಣೀರುಗಳು ಆನಂತರದ ಉತ್ತರ ಕ್ರಿಯಾದಿಗಳು ಶಾಸ್ತ್ರೋಕ್ತವಾಗಿ ನಡೆದುಗೋಗುತ್ತವೆ. ಆದರೆ, ನಾಗರೀಕ ಕುಟುಂಬಗಳು ತಮ್ಮ ತಮ್ಮ ರಕ್ಷಣೆ ಬಗ್ಗೆ ತಾವೇ ಒಂದಿಷ್ಟು ತಲೆಕೆಡಿಸಿಕೊಳ್ಳದಿದ್ದರೆ ಇಲ್ಲಿ ಉಳಿಗಾಲವಿಲ್ಲ. ತಾಯಿ ತಂದೆಯರು ಮಕ್ಕಳ ಜತೆಗೆ ಅಥವಾ ಮಕ್ಕಳ ಜತೆಗೆ ತಂದೆತಾಯಿಯರು ಹೇಗೋ ಹೊಂದಿಕೊಂಡು ಬಾಳುವ ಮಾರ್ಗಗಳನ್ನು ಅನುಸರಿಸಿದರೆ ಇಡೀ ಕುಟುಂಬಕ್ಕೆ ಮತ್ತು ಅವರ ಮನೆತನಗಳಿಗೆ ಒಟ್ಟಾರೆ ದೃಷ್ಟಿಯಿಂದ ಒಳ್ಳೆಯದಾಗದಿದ್ದರೂ ಈ ಬಗೆಯ ಕೆಡಕಂತೂ ಆಗುವುದಿಲ್ಲ.
ವೃದ್ಧರು, ರೋಗಿಗಳು ಒಂಟಿಯಾಗಿ ಬದುಕುವಂತಾಗುವುದು ದುರಂತ. ಆತ್ಮರಕ್ಷಣೆಯ ಸಾಹಸ ಬೇಡ, ಕಡೆಯಪಕ್ಷ ಮನೆಗೆ ಬೆಕ್ಕು ನುಗ್ಗಿದರೆ ಅದನ್ನು ಹೊರಗೆ ಓಡಿಸುವಷ್ಟು ಶಕ್ತಿಯಿಲ್ಲದ ನಿತ್ರಾಣ ಸ್ಥಿತಿಯಲ್ಲಿ ಅವರ ಬದುಕಿನ ಬಂಡಿ ಚಲಿಸುತ್ತಿರುತ್ತದೆ. ಇದು ಒಬ್ಬ ಗೌರಮ್ಮನ ಅಥವಾ ಗೌರಪ್ಪನ ಕತೆಯಲ್ಲ. ಬೃಹತ್ ಬೆಂಗಳೂರು ನಗರದಲ್ಲಿ ಒಂಟಿ ಬದುಕು ಸವೆಸುತ್ತಿರುವ ಅನೇಕ ಹಿರಿಯ ಜೀವಗಳಿವೆ. ಒಂದು ವೇಳೆ ಮಗ ಸೊಸೆ ಅಥವಾ ಮಗಳು ಅಳಿಯಂದಿರ ಜತೆಗೆ ಒಂದೇ ಮನೆಯಲ್ಲಿ ಇರಲು ಸಾಧ್ಯವಾಗದಿದ್ದರೆ ವೃದ್ಧರು ಜೋಪಾನವಾದ, ಅಕ್ಕಪಕ್ಕ ಭದ್ರತೆಯ ವಾತಾವರಣ, ನಂಬಲರ್ಹ ನೆರೆಹೊರೆಯವರ ವಠಾರಗಳಲ್ಲಿ ಮನೆ ಮಾಡಿಕೊಂಡು ಇರುವುದು ಕ್ಷೇಮಕರ. ಅದೂ ಸಾಧ್ಯವಾಗದಿದ್ದರೆ ಯಾವುದಾದರೂ ವೃದ್ಧಾಶ್ರಮಕ್ಕೆ ಹೋಗಿ ಭರ್ತಿಯಾಗುವುದು ಬೆಟರ್ ಎಂದು ನಮಗೆ ತೋಚುತ್ತದೆ.











Click it and Unblock the Notifications