ವಿದ್ಯಾರ್ಥಿ ಭವನ್ ಹಾಲ್ ಆಫ್ ಫೇಮ್ಗೆ ಯಡ್ಡಿ

ಅಲ್ಲಿಗೆ ಯಾವಾಗ ಹೋದರೂ ರಶ್ಶು. ನಿನ್ನೆ ಇನ್ನೂ ಸಖತ್ ರಶ್ಶಿತ್ತು. ಯಾರೋ ವಿಐಪಿ ಬಂದಿದ್ದರು ಕಾಣತ್ತೆ, ಹೋಟೆಲ್ ಬಿಡಿ, ಮೇನ್ ರೋಡಿನಲ್ಲೇ ಕಾಲಿಡಕ್ಕೆ ಜಾಗ ಇರಲಿಲ್ಲ, ದೋಸೆ ತಿನ್ನದೆ ಹಾಗೇ ವಾಪಸ್ಸು ಬಂದ್ವಿ ಎಂದು ಜರಗನಹಳ್ಳಿಯ ರಂಗಸ್ವಾಮಿ ಫೋನಿನಲ್ಲಿ ಬೇಜಾರು ಮಾಡಿಕೊಳ್ಳುತ್ತಿದ್ದರು.
ಆ ಹೋಟೆಲಿಗೆ ಗಣ್ಯರೇ ಹೋಗುತ್ತಾರೆ ಅಥವಾ ಹೋದವರೆಲ್ಲ ಗಣ್ಯರೇ ಆಗುತ್ತಾರೆ ಬಿಡ್ರೀ ಅದರಲ್ಲೇನಿದೆ ರಂಗಸ್ವಾಮಿಗಳೇ ಎಂದು ಹೇಳಿ ಅವರನ್ನು ಸಮಾಧಾನಿಸಿದೆ. ನಾನು ಮಾತ್ರ ನನ್ನ ಪಾಡಿಗೆ ಅನ್ನ ಜೀರಿಗೆ ಸಾರು ತಿಂದುಕೊಂಡು ಮನೆಯಲ್ಲಿ ಹಾಯಾಗಿದ್ದೆ.
ಇವತ್ತು ಬೆಳಗ್ಗೆ ಎದ್ದು ವಿಜಯ ಕರ್ನಾಟಕ ತಿರುವುಹಾಕಿದಾಗ ಸುದ್ದಿ ಖಚಿತವಾಯಿತು. ನಾಲಕ್ಕನೇ ಪುಟದಲ್ಲಿ ಬಿಎಸ್ ವೈ ಖಾರಾ ಬಾತ್ ತಿನ್ನುವುದನ್ನು ನಿಲ್ಲಿಸಿ ಛಾಯಾಗ್ರಾಹಕರಿಗೆ ಫೋಸು ಕೊಡುತ್ತಿರುವ ದೃಶ್ಯ ಕಣ್ಣಗೆ ಬಿತ್ತು. ಸರಿ ಬಿಡು ಎಂದುಕೊಂಡು ಕಚೇರಿಗೆ ಬಂದು ಯಥಾಪ್ರಕಾರ ಚುರುಮುರಿ ವೆಬ್ ಸೈಟಿಗೆ ಹೋದರೆ ಅಲ್ಲೂ ಖಾರಾ ಬಾತ್ ಕೇಸರಿ ಬಾತು ಸಮಾಚಾರ !
ಕರ್ನಾಟಕದ ಮಾನ್ಯ ಮುಖ್ಯಮಂತ್ರಿ, ಸಸ್ಯಾಹಾರಿ ಬಿಎಸ್ ಯಡಿಯೂರಪ್ಪ ಅವರು ನಿನ್ನೆ ಭಾನುವಾರ ಗಾಂಧೀಬಜಾರಿನ ವಿದ್ಯಾರ್ಥಿ ಭವನದಲ್ಲಿ ಖಾರಾ ಬಾತ್ ಕೇಸರಿ ಬಾತ್ ತಿಂದರೆಂತಲೂ, ಅವರ ಜತೆಯಲ್ಲಿ ಅವರ ಮಗನೂ ಹಾಗೂ ಲೋಕಸಭಾ ಸದಸ್ಯ ಪಿ ಸಿ ಮೋಹನ್ ಇದ್ದರೆಂತಲೂ ಚುರುಮುರಿಯವರು ವರದಿ ಹಾಕಿದ್ದರು. ಅಂತೂ, ನಿನ್ನೆ ಸಂಜೆಯತನಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಸುಳಿದಾಡುತ್ತಿದ್ದ ಈ ಸುದ್ದಿ ಸೋಮವಾರ ಬೆಳಗ್ಗೆ ಲೋಕಾರ್ಪಣೆಯಾಯಿತು.
ಸದ್ಯದಲ್ಲೇ ಅಂಕಿತ ಪ್ರಕಾಶನಕ್ಕೆ ಹೋಗುವ ಕೆಲಸ ಇಟ್ಟುಕೊಂಡಿದ್ದೇನೆ. ಹೋದಾಗ ಖಂಡಿತ ವಿದ್ಯಾರ್ಥಿ ಭವನಕ್ಕೆ ಹೋಗಿ ಬರುತ್ತೇನೆ. ಡಾ ರಾಜ್ ಕುಮಾರ್ ರವರು ದೋಸೆ ತಿನ್ನುತ್ತಿರುವ ಫೋಟೋ ಮತ್ತು ಈಗ ವಿದೇಶಾಂಗ ಖಾತೆ ಸಚಿವರಾಗಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ದೋಸೆ ಮುರಿಯುತ್ತಿರುವ ಫೋಟೋಗಳು ಹೋಟೆಲ್ ಗೋಡೆಯ ಮೇಲೆ ರಾರಾಜಿಸುತ್ತಿದ್ದುದು ನೆನಪಿದೆ. ವಿದ್ಯಾರ್ಥಿ ಭವನ್ ಹಾಲ್ ಆಫ್ ಫೇಮ್ ನಲ್ಲಿ ಯಡಿಯೂರಪ್ಪನವರು ಖಾರಾ ಬಾತ್ ಪ್ಲೇಟಿನ ಮುಂದೆ ಕುಳಿತಿರುವ ಫೋಟೋವನ್ನು ಕೂಡಾ ಹೋಟೆಲ್ ಮ್ಯಾನೇಜ್ ಮೆಂಟಿನವರು ಗೋಡೆ ಮೇಲೆ ಹಾಕಿರುತ್ತಾರಾ?ಎನ್ನುವುದು ನನ್ನ ಕುತೂಹಲ.
ಗ್ಯಾಲರಿ: ವಿದ್ಯಾರ್ಥಿ ಭವನ ಮಾಣಿ ಜತೆ ಸಿಎಂ












Click it and Unblock the Notifications