ಶಿವಮೊಗ್ಗ : ಕೊನೆಗೂ ಶರಣಾದ ಹಾಲಪ್ಪ

ಸಿಐಡಿ ಪೊಲೀಸರು ಮೇ 10 ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ಹಾಲಪ್ಪ ಅವರಿಗೆ ನೋಟಿಸ್ ನೀಡಿದ್ದರು. ಇದರಿಂದ ಇಂದು ಹಾಲಪ್ಪ ಅವರು ಸಿಐಡಿ ಪೊಲೀಸರ ಎದುರು ಹಾಜರಾಗಲಿದ್ದಾರೆ ಎಂಬುದನ್ನು ನಿರೀಕ್ಷಿಸಲಾಗಿತ್ತು. ಅದರಂತೆ ತಮ್ಮ ವಕೀಲರಾದ ಅಶೋಕ್ ಭಟ್ ಮತ್ತು ರಮೇಶ್ ಚಂದ್ರ ಅವರೊಂದಿಗೆ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಖಾಸಗಿ ಸ್ಕೋಡಾ ಕಾರಿನಲ್ಲಿ ಎಸ್ಪಿ ಕಚೇರಿಗೆ ಬಂದಿಳಿದ ನಂತರ ನೇರವಾಗಿ ಎಸ್ಪಿ ಮುರುಗನ್ ಅವರ ಮುಂದೆ ಹಾಜರಾದರು.
ಎಸ್ಪಿ ಮುರುಗನ್ ಸಮ್ಮುಖದಲ್ಲಿ ಸಿಐಡಿ ಡಿಐಜಿ ಚರಣ್ ರೆಡ್ಡಿ, ಎಸ್ಪಿ ಲೋಕೇಶ್ ಕುಮಾರ್ ಅವರುಗಳು ಹಾಲಪ್ಪ ಅವರನ್ನು ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ. ಅಲ್ಲದೇ, ನಗರದ ಬಸವನಗುಡಿ ಪ್ರದೇಶದಲ್ಲಿರುವ ನ್ಯಾಯಾಧೀಶರ ಮನೆಗೆ ಹಾಲಪ್ಪ ಅವರನ್ನು ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ. ತನಿಖೆ ರಾತ್ರಿವರೆಗೂ ನಡೆಯುವ ಸಾಧ್ಯತೆಗಳಿವೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
ನಗರದ ವಿನೋಬಾ ನಗರದಲ್ಲಿರುವ ಸ್ನೇಹಿತ ವೆಂಕಟೇಶ್ ಮೂರ್ತಿ ಅವರ ಪತ್ನಿ ಚಂದ್ರಾವತಿ ಅವರ ಮೇಲೆ ಹಾಲಪ್ಪ ಅವರು ಅತ್ಯಾಚಾರ ಮಾಡಿದ್ದಾರೆ ಎಂಬುದು ಹಾಲಪ್ಪ ಮೇಲಿರುವ ಗಂಭೀರ ಆರೋಪ. ವೆಂಕಟೇಶ್ ಮೂರ್ತಿ ಮತ್ತು ಚಂದ್ರಾವತಿ ಅವರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಶಿವಮೊಗ್ಗ ವಿನೋಬಾ ನಗರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣವನ್ನು ಸರಕಾರ ಸಿಐಡಿಗೆ ವಹಿಸಿದೆ. ಸಿಐಡಿ ಮೇ 10 ರೊಳಗೆ ವಿಚಾರಣೆಗೆ ಹಾಜರಾಗುವಂತೆ ಹಾಲಪ್ಪ ಅವರಿಗೆ ಸೂಚಿಸಿತ್ತು.












Click it and Unblock the Notifications