ಕಾಂಗ್ರೆಸ್‌ಗೆ ಮರುಜನ್ಮ ನೀಡಲು ಮೋಟಮ್ಮ ಕರೆ

ಗ್ರಾಮ ಪಂಚಾಯ್ತಿ ಚುನಾವಣೆಯ ಕಾರ್ಯತಂತ್ರ ರೂಪಿಸುವ ಸಲುವಾಗಿ ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಎಲ್ಲಾ ಭರವಸೆಗಳು ಹುಸಿಯಾಗಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಯಾವುದೇ ಅಭಿವೃದ್ಧಿಯ ಕೆಲಸವೂ ಆಗಿಲ್ಲ. ಕೇವಲ ಹುಸಿ ಭರವಸೆಗಳನ್ನು ನೀಡುವುದರೊಂದಿಗೆ ಮಗ್ನರಾಗಿದ್ದಾರೆಂದು ಗಂಭೀರವಾಗಿ ಆರೋಪ ಮಾಡಿದರು.
ಎಸ್.ಎಂ.ಕೃಷ್ಣ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾಗ ಪ್ರತಿ ಗ್ರಾ.ಪಂ.ಗೆ 5ಲಕ್ಷ ರೂ. ಅನುದಾನ ನೀಡಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರದಲ್ಲಿ ಇದುವರೆಗೂ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಟೀಕಿಸಿದರಲ್ಲದೆ, ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ತಮ್ಮದೇ ಎಂದು ಬಿಂಬಿಸುತ್ತಾ ವ್ಯಾಪಕ ಭ್ರಷ್ಟಾಚಾರವನ್ನು ನಡೆಸುತ್ತಿದ್ದಾರೆ. ಅಲ್ಲದೆ ಬಿಜೆಪಿಯ ಶಾಸಕರುಗಳು, ಮಂತ್ರಿಗಳು, ಉದ್ಯೋಗ ಖಾತ್ರಿ ಯೋಜನೆಯಲ್ಲಿಯೂ ಸಾಕಷ್ಟು ಭ್ರಷ್ಟಾಚಾರ ಎಸಗಿದ್ದು, ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರುಗಳು ಗ್ರಾಮೀಣ ಪ್ರದೇಶ ಜನರಿಗೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ ಎಂದರು.
ಆರೋಗ್ಯ ಕವಚ ಹಾಗೂ ರಾಜೀವಗಾಂಧಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಯೋಜನೆಗಳು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಾಗಿದ್ದರೂ, ಆರೋಗ್ಯ ಕವಚ ವಾಹನದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ನಾಚಿಕೆ ಬಿಟ್ಟು ತಮ್ಮ ಫೋಟೋಗಳನ್ನು ವಾಹನಗಳ ಮೇಲೆ ಹಾಕಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಅಭಿವೃದ್ಧಿ ಕಾರ್ಯಗಳಿಗಾಗಿ ಎಲ್ಲಾ ಶಾಸಕರುಗಳಿಗೆ 50ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕಾಗಿತ್ತು. ಇದುವರೆಗೂ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಏಕೆಂದರೆ ಸರ್ಕಾರದ ಖಜಾನೆ ಸಂಪೂರ್ಣ ಬರಿದಾಗಿದ್ದು, ಅನುದಾನ ನೀಡಲು ಹಣವೇ ಇಲ್ಲ ಎಂದು ಆರೋಪ ಮಾಡಿದರು.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಅವರು ಮಾಡಿರುವಂತಹ ಅಭಿವೃದ್ಧಿ ಕೆಲಸದಿಂದಲ್ಲ. ಚುನಾವಣೆಯಲ್ಲಿ ಮತದಾರರಿಗೆ ನೋಟು ನೀಡುವುದರ ಮೂಲಕ ಓಟು ಪಡೆದು ಗೆಲವು ಸಾಧಿಸಿದ್ದಾರೆ. ಯಾರು ಅಭಿವೃದ್ಧಿ ಕೆಲಸವನ್ನು ನೋಡಿ ಮತ ಹಾಕಿಲ್ಲ ಎಂದರು.
ಸಭೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಧಿಕಾರ ಸಿಗಲು ಕಾರ್ಯತಂತ್ರ ರೂಪಿಸಬೇಕು. ಗ್ರಾ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪೈಪೋಟಿ ಏರ್ಪಟ್ಟಿದ್ದಲ್ಲಿ ಅದನ್ನು ತಪ್ಪಿಸಲು ತಾಲ್ಲೂಕು ಮುಖಂಡರುಗಳು ಶ್ರಮ ವಹಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಜಿ.ಡಿ.ನಾರಾಯಣಪ್ಪ, ಕುಮಾರಬಂಗಾರಪ್ಪ, ಶಾಸಕ ಕಿಮ್ಮನೆ ರತ್ನಾಕರ್, ಮೀರ್‌ಅಜೀಜ್‌ಅಹಮ್ಮದ್, ಮಧುಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications