ಅಂಬೇಡ್ಕರ್ ಗೆ ಅಪಮಾನ, ಯುಆರ್ಎ ಖಂಡನೆ

Dr BR Ambedkar photo, Hampi
ಬಳ್ಳಾರಿ.ಏ. 13 : ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಜಯಂತಿ ಆಚರಣೆಯ ಮುನ್ನಾದಿನವೇ, 'ಕನ್ನಡ ನಾಡು ಮತ್ತು ಕನ್ನಡ ವಿಶ್ವವಿದ್ಯಾಲಯ ಮುನ್ನೋಟ' ಸಮಾಲೋಚನ ಕಾರ್ಯಾಗಾರ ನಡೆಯುವಾಗಲೇ ಈ ಇಬ್ಬರು ಮಹನೀಯರ ಭಾವಚಿತ್ರಕ್ಕೆ ದುಷ್ಕರ್ಮಿಗಳು ಮಸಿ ಬಳಿದಿರುವುದು ಷಡ್ಯಂತ್ರ ಎಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಲೇಖಕ ಡಾ. ಯು.ಆರ್. ಆನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಹಂಪೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಸಮಾಲೋಚನ ಕಾರ್ಯಾಗಾರ ನಡೆಯುತ್ತಿರುವಾಗಲೇ ದಲಿತ ಹೋರಾಟಗಾರರಿಗೆ ಸ್ಪಂದಿಸಿ, ಘಟನಾ ಸ್ಥಳವಾದ ಪರಿಶಿಷ್ಟಜಾತಿ, ಪಂಗಡದ ವಿದ್ಯಾರ್ಥಿ ವಸತಿ ನಿಲಯಕ್ಕೆ ತೆರಳಿದ ಯು.ಆರ್. ಅನಂತಮೂರ್ತಿ, ಹೋರಾಟಕ್ಕೆ ಬೆಂಬಲಿಸಿ, ಇದರ ಹಿಂದಿರುವ ಹುನ್ನಾರವನ್ನು ಅರ್ಥ ಮಾಡಿಕೊಳ್ಳಬೇಕು. ಎದುರಾಳಿಗಳನ್ನು ನೈತಿಕ ಹೋರಾಟದ ಮೂಲಕ, ವಿವೇಕದ ಮೂಲಕ ಸೋಲಿಸಬೇಕು ಎಂದು ಕರೆ ನೀಡಿದರು.

ಹಂಪೆ ಕನ್ನಡ ವಿಶ್ವವಿದ್ಯಾಲಯದ 80 ಎಕರೆ ಭೂಮಿ ಉಳಿಸಿಕೊಳ್ಳುವ ಹೋರಾಟಕ್ಕೂ, ಒಂದು ದಿನ ಪತ್ರಿಕೆಯಲ್ಲಿ ವಿಶ್ವವಿದ್ಯಾಲಯದ ಬಗ್ಗೆ ಬಂದ ವರದಿಗೂ ಹಾಗೂ ಸಮಾಲೋಚನಾ ಕಾರ್ಯಾಗಾರವನ್ನು ತಡೆಯಬೇಕೆಂಬ ಪ್ರಯತ್ನಕ್ಕೂ ಎಲ್ಲದಕ್ಕೂ ಈ ಘಟನೆ ಸಂಬಂಧಿಸಿದ್ದೇ ಆಗಿದೆ. ಇಡೀ ಘಟನೆಯನ್ನು ಖಂಡಿಸಿ, ನಿರ್ಣಯ ತೆಗೆದುಕೊಂಡು ಸಮಾಲೋಚನಾ ಕಾರ್ಯಾಗಾರವನ್ನು ಮುಂದುವರೆಸುತ್ತೇವೆ. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ದಿನಾಚರಣೆಯನ್ನು ಉತ್ಸಾಹದಿಂದ ಆಚರಿಸುವ ಮೂಲಕ ದುಷ್ಕರ್ಮಿಗಳಿಗೆ ಉತ್ತರ ನೀಡಬೇಕು ಎಂದರು.

ವಿಶ್ರಾಂತ ಕುಲಪತಿ ಡಾ. ಚಂದ್ರಶೇಖರ ಕಂಬಾರ ಈ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿ, ಇದು ಕೈಲಾಗದವರ ಹೇಯ ಕೃತ್ಯ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹೋರಾಟಕ್ಕೆ ತಮ್ಮ ಬೆಂಬಲ ಇದೆ ಎಂದರು. ಚಿಂತಕ ಜಿ.ಕೆ. ಗೋವಿಂದರಾವ್ ಮಾತನಾಡಿ, ಇದು ಸರ್ಕಾರಕ್ಕೆ ಆಗಿರುವ ಅವಮಾನವಲ್ಲ, ಶೋಷಿತ ಜನರಿಗೆ ಆಗಿರುವ ಅಪಮಾನ ಎಂದು ಟೀಕಿಸಿದರು.

ವಿಶ್ರಾಂತ ಕುಲಪತಿ ಡಾ. ಎಚ್.ಜಿ. ಲಕ್ಕಪ್ಪಗೌಡ, ಕುಲಸಚಿವ ಮಂಜುನಾಥ ಬೇವಿನಕಟ್ಟಿ, ಲೇಖಕರಾದ ಡಾ. ಮೊಗಳ್ಳಿ ಗಣೇಶ್, ಡಾ. ರಹಮತ್ ತರಿಕೆರೆ, ಉಷಾ, ಡಾ. ಹಿ.ಚಿ.ಬೋರಲಿಂಗಯ್ಯ, ಡಾ. ಕರೀಗೌಡ ಬೀಚನಹಳ್ಳಿ ಸೇರಿದಂತೆ ಅನೇಕ ಅಧ್ಯಾಪಕರು, ಪ್ರಾಧ್ಯಾಪಕರು ಹೋರಾಟಕ್ಕೆ ಬೆಂಬಲಿಸಿದರು.

ಘಟನೆ ಹಿನ್ನೆಲೆ : ಹಂಪೆ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಭಾವಚಿತ್ರಗಳಿಗೆ ಸೋಮವಾರ ರಾತ್ರಿ ದುಷ್ಕರ್ಮಿಗಳು ಮಸಿ ಬಳಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟಜಾತಿ ನೌಕರರ ಸಂಘಟನೆಯ ನೌಕರರು, ಕುಲಪತಿ ಮತ್ತು ಕುಲಸಚಿವರನ್ನು ಭೇಟಿ ಮಾಡಿ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಡಿವೈಎಸ್‌ಪಿ ಜಗದೀಶ್ ಗೆ ಮನವಿ ಸಲ್ಲಿಸಿದರು. ಗ್ಯಾನಪ್ಪ ಬಡಿಗೇರ ಈ ಹೋರಾಟದ ನೇತೃತ್ವವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+