ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಕಿದ್ದರೂ ಬೇಡವಾದ ಬಿಬಿಎಂಪಿ ಚುನಾವಣೆ

By Prasad
|
Google Oneindia Kannada News

60 percent citizen stay away from voting
ಬೆಂಗಳೂರು, ಮಾ. 28 : ಬಿಬಿಎಂಪಿಗೆ ನಡೆದ ಪ್ರಥಮ ಚುನಾವಣೆಯಲ್ಲಿ ಮತದಾನದ ಪ್ರಮಾಣ ಬೆಂಗಳೂರಿನ ಇಂದಿನ ತಾಪಮಾನ 38 ಡಿಗ್ರಿ ಸೆಲ್ಶಿಯಸ್ ಕೂಡ ದಾಟಿಲ್ಲ. ಬೃಹತ್ ಬೆಂಗಳೂರಿನ ಅಧಿಕಾರ ಚುಕ್ಕಾಣಿ ಮತ್ತು ಮುಂದಿನ ಅಭಿವೃದ್ಧಿ ಕಾರ್ಯಗಳೆಲ್ಲ ರಾಜಕೀಯ ಪಕ್ಷಗಳಿಗೆ ಬಿಟ್ಟ ವ್ಯವಹಾರ, ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಶೇ. 60ರಷ್ಟು ನಾಗರಿಕರು ತಣ್ಣಗೆ ಮನೆಯಲ್ಲುಳಿದಿದ್ದಾರೆ.

ಏರುತ್ತಿರುವ ಬಿಸಿಲ ಝಳಕ್ಕೆ ಬೆದರಿದ ಜನತೆ ಮತ್ತು ಭಾನುವಾರದ ರಜಾ ಮಜಾದಲ್ಲಿರುವ ನಾಗರಿಕರು 9 ವರ್ಷಗಳ ನಂತರ ನಡೆದ ಪಾಲಿಕೆ ಚುನಾವಣೆಯಲ್ಲಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯಿಂದ ಹಿಂಜರಿದಿದ್ದಾರೆ. ಇದಕ್ಕೆ ಕಲಶವಿಟ್ಟಂತೆ ಮತಪಟ್ಟಿಯಲ್ಲಿ ಹೆಸರು ಇಲ್ಲದಿರುವುದು, ನಕಲಿ ಮತಪಟ್ಟಿ, ದೋಷಯುತ ಮತಯಂತ್ರ, ನಕಲಿ ಮತದಾನ, ಗುರುತಿನ ಚೀಟಿ ಇಲ್ಲದಿರುವುದು ಮತದಾನದ ಪ್ರಮಾಣ ಕುಸಿಯಲು ಕಾರಣವಾಗಿದೆ. ಬೆಳಗಿನ ಜಾವದಲ್ಲಿ ಅತ್ಯಂತ ಮಂದಗತಿಯಲ್ಲಿ ಸಾಗಿದ ಮತದಾನ ಮಧ್ಯಾಹ್ನವಾದರೂ ಚುರುಕಾಗಿರಲಿಲ್ಲ. ಸಾಯಂಕಾಲವಾಗುತ್ತಿದ್ದಂತೆ ಅಲ್ಪ ಏರುಮುಖ ಕಂಡರೂ ನಿರೀಕ್ಷಿತ ಮಟ್ಟ ತಲುಪಿಲ್ಲ.

ನಿಷ್ಕ್ರಿಯ ಪೊಲೀಸ್ : ಮತದಾನಕ್ಕೂ ಮೊದಲು ಸೀರೆ, ಬೆಳ್ಳಿ ನಾಣ್ಯ, ಕುಕ್ಕರ್, ಹೆಂಡದ ಹೊಳೆ ಹರಿಸಿದ್ದ ರಾಜಕೀಯ ಪಕ್ಷಗಳು ಅನೇಕ ಕಡೆಗಳಲ್ಲಿ ಮತದಾನದ ದಿನ ಕೂಡ ನೋಟುಗಳನ್ನು ಮತದಾರರ ಕೈಗೆ ದಾಟಿಸಿದ್ದಾರೆ. ಸುರಕ್ಷತೆಯ ಹೊಣೆ ಹೊತ್ತಿದ್ದ ಪೊಲೀಸರ ಸಮ್ಮುಖದಲ್ಲಿ ಹಣವನ್ನು ಮತದಾರರಿಗೆ ಅವ್ಯಾಹತವಾಗಿ ಹಂಚಲಾಗಿದೆ. ತಮ್ಮ ಕಣ್ಣ ಮುಂದೆಯೇ ಅಕ್ರಮಗಳು ನಡೆಯುತ್ತಿದ್ದರೂ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದು ಮಹಿಳೆಗೆ ಮೀಸಲಾಗಿರುವ ಯಲಹಂಕದ ಅಟ್ಟೂರು ವಾರ್ಡ್ ನಲ್ಲಿ ನಡೆದಿದೆ.

ಸುಂಕದಕಟ್ಟೆ ಮತ್ತು ಎಚ್ಎಮ್ ಟಿ ವಾರ್ಡುಗಳಲ್ಲಿ ಮತದಾರರಿಗೆ ಹಣ ಹಂಚಲಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಅಕ್ರಮ ತಡೆಯಲು ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಕ್ರಮ ನಡೆಯುತ್ತಿದ್ದರೂ ಮೂಕಪ್ರೇಕ್ಷಕರಂತೆ ಕುಳಿತಿದ್ದ ಪೊಲೀಸರು ಪರಿಸ್ಥಿತಿ ವಿಪರೀತಕ್ಕೆ ಹೋಗುತ್ತಿದ್ದಂತೆ ಜನರನ್ನು ಚೆದುರಿಸಲು ಲಾಠಿ ಪ್ರಹಾರ ಮಾಡಿದ್ದಾರೆ. ಇದನ್ನು ನಿರಾಕರಿಸಿರುವ ನಗರದ ಪೊಲೀಸ್ ಆಯುಕ್ತ ಶಂಕರ್ ಬಿದರಿ ಅವರು, ಪೊಲೀಸರು ಅತ್ಯಂತ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಕ್ರಮದಲ್ಲಿ ತೊಡಗಿದ್ದ 50ಕ್ಕೂ ಹೆಚ್ಚಿನ ದುಷ್ಟರನ್ನು ನಗರದಾದ್ಯಂತ ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಜೆಸಿ ನಗರದಲ್ಲಿ ಓರ್ವ ಮಹಿಳೆ ಸೇರಿದಂತೆ ನಕಲಿ ಮತದಾನ ಮಾಡುತ್ತಿದ್ದ ಆರು ಜನರನ್ನು ಬಂಧಿಸಲಾಗಿದೆ. ಅವರ ಬಳಿಯಿಂದ 1 ಲಕ್ಷ ರು., ಇಂಕ್ ರಿಮೂವರ್, 1 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರ್ ಟಿ ನಗರದಲ್ಲಿಯೂ ನಕಲಿ ಗುರುತಿನ ಚೀಟಿ ಮತ್ತು 1 ಲಕ್ಷ ರು. ಹೊಂದಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಂಬೇಗೌಡ ನಗರದಲ್ಲಿ ಪತ್ರಕರ್ತರೆಂದು ಹೇಳಿಕೊಂಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟಿನ ವೃಷಭಾವತಿ ವಾರ್ಡಿನಲ್ಲಿ ಮತಪಟ್ಟಿಯಲ್ಲಿ ಹೆಸರು ಕಾಣದ ಹಿರಿಯ ನಾಗರಿಕ ಕೆಂಪಯ್ಯ (65) ಎಂಬುವವರು ಹೃದಯಾಘಾತದಿಂದ ಅಸುನೀಗಿದ್ದಾರೆ.

ಸಿಂಗಸಂದ್ರದಲ್ಲಿ ಜಟಾಪಟಿ : ಅಕ್ರಮ ಮತದಾನ ನಡೆಸುವ ಉದ್ದೇಶದಿಂದ 400ಕ್ಕೂ ಹೆಚ್ಚಿನ ಅಪರಿಚಿತ ವ್ಯಕ್ತಿಗಳನ್ನು ಜಮಾವಣೆ ಮಾಡಿಸಲಾಗಿದೆ ಎಂದು ಬೊಮ್ಮನಹಳ್ಳಿ ಶಾಸಕ ಬಿಜೆಪಿಯ ಸತೀಶ್ ರೆಡ್ಡಿ ಅವರು ಕಾಂಗ್ರೆಸ್ ನಾಯಕ ಕುಪೇಂದ್ರ ರೆಡ್ಡಿ ಅವರ ವಿರುದ್ಧ ದೂರಿದ್ದಾರೆ. ಆನೇಕಲ್ ಕಡೆಯಿಂದ ಬಂದಿರುವ ರೌಡಿಗಳ ಬಳಿ ಗುರುತಿನ ಚೀಟಿಯೂ ಇಲ್ಲ ಎಂದು ಸತೀಶ್ ಹೇಳಿದ್ದಾರೆ. ನಮಗೂ ಆ ಜನರಿಗೂ ಸಂಬಂಧವಿಲ್ಲ, ನಮ್ಮ ಜನತೆಯ ಮೇಲೆ ಸತೀಶ್ ಕಡೆಯ ಜನ ಲಾಠಿಯಿಂದ ಹೊಡೆದಿದ್ದಾರೆ ಎಂದು ಕುಪೇಂದ್ರ ತಿರುಗೇಟು ನೀಡಿದ್ದಾರೆ. ಸತೀಶ್ ರೆಡ್ಡಿ ಮತ್ತು ಕುಪೇಂದ್ರ ರೆಡ್ಡಿ ಬೆಂಬಲಿಗರ ನಡುವೆ ಜಟಾಪಟಿ ನಡೆದಿದ್ದರಿಂದ ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಸಿನಿತಾರೆಯರ ಮತದಾನ : ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಹಿಂದೆ ಬಿದ್ದಿಲ್ಲ. ಪಾರ್ವತಮ್ಮ ರಾಜಕುಮಾರ್, ಪುನೀತ್, ದುನಿಯಾ ವಿಜಯ್, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ ಶೇಷಾದ್ರಿ, ಶರ್ಮಿಳಾ ಮಾಂಡ್ರೆ, ತಾರಾ, ವೇಣು ಮೊದಲಾದವರು ಮತ ಚಲಾಯಿಸಿದರು.

ಪ್ರತಿಷ್ಠಿತ ಕ್ಷೇತ್ರವಾಗಿರುವ ಬಸವನಗುಡಿ, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ಗಾಂಧಿನಗರ, ಚಿಕ್ಕಪೇಟೆ, ಪದ್ಮನಾಭನಗರ, ಕೆಂಗೇರಿ ವಾರ್ಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತ ಚಲಾಯಿಸಿದ್ದಾರೆ. ಈ ಕ್ಷೇತ್ರಗಳಲ್ಲಿ ಮತದಾನವೂ ಶಾಂತಿಯುತವಾಗಿ ನಡೆದಿದೆ. ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ 198 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಶೇ.40ರಷ್ಟು ಮಾತ್ರ ಮತ ಚಲಾಯಿಸಲಾಗಿದೆ. ಏಪ್ರಿಲ್ 5ರಂದು ಮತಎಣಿಕೆ ನಡೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X