ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆಗೆ ಒತ್ತು

ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ತಾಲೂಕಾ ವೈದ್ಯಾಧಿಕಾರಿ ಡಾ. ಮಂಜುನಾಥ್ ಶೆಟ್ಟಿ, ಹದಿಹರೆಯಕ್ಕೆ ಬಂದವರು ಬಹಳಷ್ಟು ಸಮಸ್ಯೆಗಳಿಂದ ತೊಳಲಾಡುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಸೂಕ್ತವಾದ ಆಪ್ತ ಸಮಾಲೋಚನೆಯನ್ನು ಕೈಗೊಂಡರೆ ಅವರು ಅದರಿಂದ ಹೊರಬರಲು ಸಾಧ್ಯವಾಗಬಹುದು. ಹದೆಹರೆಯದವರು ಬಹುತೇಕವಾಗಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳೇ ಆಗಿರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಆಪ್ತ ಸಮಾಲೋಚನೆ ಕೈಗೊಂಡು ಅವರ ವಿಚಲಿತ ಮನಸನ್ನು ಗೊಂದಲಗಳಿಂದ ದೂರಮಾಡಬೇಕು ಎಂದರು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದ ಶಿರಾಲಿ ಹಿರಿಯ ಆರೋಗ್ಯ ಸಹಾಯಕ ಈರಯ್ಯ ಎನ್. ದೇವಾಡಿಗ ಅವರು, ಹದಿಹರೆಯದವರಲ್ಲಾಗುವ ಬದಲಾವಣೆ, ವೈಯಕ್ತಿಕ ಸ್ವಚ್ಛತೆ, ಜೀವನ ಕೌಶಲ್ಯ, ಹೆಣ್ಣು ಮಕ್ಕಳ ಸಮಸ್ಯೆ, ಗರ್ಭಧಾರಣೆ, ಪ್ರಸವಪೂರ್ವ ಆಪತ್ತು, ಗರ್ಭಧಾರಣೆಯನ್ನು ತಡೆಗಟ್ಟುವ ವಿಧಾನ ಮುಂತಾದ ಆರೋಗ್ಯ ವಿಷಯದ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿದರು.
ಈ ದೇಶದಲ್ಲಿ ಪ್ರತಿವರ್ಷ ಒಂದು ಲಕ್ಷ ಮಹಿಳೆಯರು ತಾಯ್ತನದ ಸಮಸ್ಯೆಯಿಂದ ಸಾವನ್ನಪುತ್ತಿದ್ದು ಹುಟ್ಟುವ ಜೀವಂತ ಮಗುವಿನ ಪ್ರತಿ ಸಾವಿರಕ್ಕೆ 50 ಶಿಶುಗಳು ಮರಣವನ್ನಪ್ಪುತ್ತಿವೆ. ಇದನ್ನು ಸಂಪೂರ್ಣವಾಗಿ ಹತೋಟಿಗೆ ತರುವುದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಮುಖ್ಯ ಗುರಿಗಳಲ್ಲಿ ಒಂದಾಗಿದ್ದು, ಈ ಕುರಿತು ಸಮುದಾಯದಲ್ಲಿ ವ್ಯಾಪಕ ಅರಿವು ಮೂಡಿಸಿದಾಗ ಮಾತ್ರ ಇದು ಸಾಧ್ಯವಾಗಬಲ್ಲದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹರಡುತ್ತಿರುವ ಸಾಂಕ್ರಮಿಕ ರೋಗಗಳನ್ನು ತಡೆಯುವುದು, ಕ್ಷಯ ರೋಗವನ್ನು ಹತೋಟಿಗೆ ತರುವುದು, ಹಾಗೂ ನಮ್ಮ ದಿನ ನಿತ್ಯದ ಜೀವನಶೈಲಿಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾಗಿ ಎಂ.ಡಿ.ನಾಯ್ಕ, ಪ್ರಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರವಿರಾಜ್ ಕೆ.ಶೇಟ್, ಆಯುರ್ವೇದ ವೈದ್ಯ ಡಾ. ರೋಹಿಣಿ ನಾಯ್ಕ ಡಾ. ಪ್ರಕಾಶ ಕಾಮತ್ ಉಪಸ್ಥಿತರಿದ್ದರು.












Click it and Unblock the Notifications