• search

ಜನ ರೊಚ್ಚಿಗೇಳುವ ಮೊದಲೇ ನೀರು ಕೊಡಿ

By * ತಿಲಕ್‌ರಾಜ್ ಡಿ.ಟಿ.
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Acute drinking water shortage in Channapattana
  ಚನ್ನಪಟ್ಟಣ, ಫೆ. 25 : ಬೇಸಿಗೆ ಮನೆ ಬಾಗಿಲಲ್ಲಿ ಇಣುಕುವ ಮೊದಲೇ ತಾಲೂಕಿನ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ದಿನದಿಂದ ದಿನಕ್ಕೆ ಈ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದು ನಾಗರಿಕರನ್ನ ಆತಂಕಕ್ಕೀಡುಮಾಡಿದೆ.

  ಪಾತಾಳಕ್ಕಿಳಿದ ಅಂತರ್ಜಲ ಮಟ್ಟ, ವಿದ್ಯುತ್ ಕಣ್ಣಾಮುಚ್ಚಾಲೆ, ವಾಟರ್‌ಮೆನ್‌ಗಳ ಅಸಮರ್ಪಕ ನಿರ್ವಹಣೆ, ಕಳಪೆ ಪೈಪ್‌ಲೈನ್, ಪದೇ ಪದೇ ಕೆಟ್ಟು ನಿಲ್ಲುವ ಮೋಟಾರುಗಳಿಂದಾಗಿ ನೀರಿನ ಸಮಸ್ಯೆ ತೀವ್ರತೆ ಪಡೆದುಕೊಂಡಿದ್ದರೂ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

  ಇವೆಲ್ಲವನ್ನೂ ನಿರ್ವಹಿಸಬೇಕಾದ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಸರೇಗಾ ಬಾಲ ಹಿಡಿದು ಹೊರಟವರು ಇನ್ನೂ ಹಿಂದಿರುಗಿಲ್ಲವಾದ್ದರಿಂದ ನೀರಿನ ಸಮಸ್ಯೆ ಆಲಿಸುವವರು ಯಾರೂ ಇಲ್ಲದಂತಾಗಿದೆ. ಬೇಸಿಗೆ ಬಾಗಿಲಿಗೆ ಎಡತಾಕಿದ್ದರೂ ತಾಲೂಕು ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಪರಿಸ್ಥಿತಿ ಕೈತಪ್ಪುವ ಮುನ್ನ ಜನತೆಯ ದಾಹ ತಣಿಸುವತ್ತ ಕಾರ್ಯೋನ್ಮುಖವಾಗಬೇಕಾಗಿದೆ. ತಾಲೂಕಿನ ನಾಗವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗವಾರ ಗ್ರಾಮದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಗ್ರಾಮದವರು ಕೆಲಸ ಕಾರ್ಯ ಬಿಟ್ಟು ನೀರು ಹರಿಸುವುದನ್ನೇ ಕಾಯ್ದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

  ಇಲ್ಲಿ ಕಳೆದ ಆರೇಳು ವರ್ಷಗಳ ಹಿಂದೆಯೇ ಮಿನಿ ಟ್ಯಾಂಕ್ ನಿರ್ಮಿಸಿ, ಪೈಪ್ ಲೈನ್ ಅಳವಡಿಸಲಾಗಿದೆಯಾದರೂ ಸಂಪರ್ಕದ ಭಾಗ್ಯ ಮಾತ್ರ ಇನ್ನೂ ಕೂಡಿಬಂದಿಲ್ಲ. ಇದೇ ಪಂಚಾಯಿತಿ ವ್ಯಾಪ್ತಿಯ ಎಚ್.ಮೊಗೇನಹಳ್ಳಿ ಗ್ರಾಮದಲ್ಲಿಯೂ ಸಹ ನೀರಿನ ಸಮಸ್ಯೆ ತೀವ್ರವಾಗಿದ್ದು, 5 ದಿನಗಳಿಗೊಮ್ಮೆ ನಲ್ಲಿಯಲ್ಲಿ ನೀರು ಇಣುಕುತ್ತಿದೆ. ಇನ್ನು ತಾಲೂಕಿನ ಮತ್ತೀಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಹ ನೀರಿನ ಅಭಾವ ಎದುರಾಗಿದ್ದು, ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿ ಸರೇಗಾ ಹಿಂದೆ ಬಿದ್ದಿರುವುದರಿಂದ ನಿರ್ವಹಣೆ ಇಲ್ಲದೆ ಜನತೆ ಪರಿತಾಪ ಎದುರಿಸುತ್ತಿದ್ದಾರೆ.

  ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿ, ಹೊಸೂರುದೊಡ್ಡಿ, ಮತ್ತೀಕೆರೆ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ನೀರಿಗೆ ಬರ ಬಂದಿದ್ದು, ಈ ಭಾಗದಲ್ಲಿ ಕೇವಲ 3 ಗಂಟೆ ವಿದ್ಯುತ್ ವಿತರಣೆಯಾಗುತ್ತಿರುವುದರಿಂದ ನೀರಿನ ಸಮಸ್ಯೆ ಜಟಿಲವಾಗಿದೆ. ಸುಳ್ಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನೀರಿಗಾಗಿ ತಾತ್ವಾರ ಎದುರಾಗಿದ್ದು, ಇದರ ವ್ಯಾಪ್ತಿಯ ಗ್ರಾಮಗಳಾದ ಎ.ವಿ.ಹಳ್ಳಿ, ಚಕ್ಕಲೂರು, ಕೃಷ್ಣಾಪುರಗಳಲ್ಲಿ ನೀರಿಗಾಗಿ ಜನ ಬವಣೆ ಅನುಭವಿಸುತ್ತಿದ್ದಾರೆ. ಜಾನುವಾರುಗಳಿಗೂ ಸಹ ನೀರು ಸಾಲದೆ ಜನತೆ ಆತಂಕಕ್ಕೀಡಾಗಿದ್ದಾರೆ.

  ಹಾಗೆಯೇ ಬಾಣಗಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಾಡಹಳ್ಳಿ ಹಾಗೂ ನಾಗಾಪುರ ಗ್ರಾಮಗಳಲ್ಲಿ ನೀರಿಗಾಗಿ ಜನ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗಾಪುರದಲ್ಲಿ ನೀರಿಗಾಗಿ ಕೊಳವೆ ಬಾವಿ ಕೊರೆದರೂ ನೀರು ಸಿಗದಿರುವುದು ಜನತೆ ಗುಟುಕು ನೀರಿಗೂ ಪರಿತಪಿಸುವಂತಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಅಂಬಾಡಹಳ್ಳಿಯಲ್ಲಿ ನೀರಿಗಾಗಿ ಅಕ್ಕಪಕ್ಕದ ತೋಟಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೂರು ಗ್ರಾ.ಪಂ. ವ್ಯಾಪ್ತಿಯ ಬೈರಾಪಟ್ಟಣ, ಕೋಟಮಾರನಹಳ್ಳಿಗಳಲ್ಲೂ ಸಹ ನೀರಿನ ಸಮಸ್ಯೆ ಹೊರತಾಗಿಲ್ಲ. ಬೈರಾಪಟ್ಟಣ ಗ್ರಾಮದಲ್ಲಿ ಮೂರ್‍ನಾಲ್ಕು ದಿನಗಳೊಗೊಮ್ಮೆ ನೀರು ಸರಬರಾಜಾಗುತ್ತಿದ್ದು, ಸರಿಯಾಗಿ ನಿರ್ವಹಣೆ ಮಾಡದಿರುವುದೇ ನೀರಿನ ಅಭಾವಕ್ಕೆ ಕಾರಣವಾಗಿದೆ.

  ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೋಡಂಬಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ನೀರಿನ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿಗಾಗಿ ಜನ ನಲ್ಲಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ. ಪಂಚಾಯಿತಿ ವ್ಯಾಪ್ತಿಯ ಶಾನುಬೋಗನಹಳ್ಳಿ, ಕೊಂಡಾಪುರ, ಶ್ರವಣಯ್ಯನತೋಪು ಗ್ರಾಮಗಳಲ್ಲಿ ನೀರಿಗೆ ಜನ ವಿಪರೀತ ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆಗೆ ಮೊದಲೇ ಕೆಲವೆಡೆ ಕೊಳವೆ ಭಾವಿಗಳ ವೈಪಲ್ಯವಾಗಿರುವುದು ಸಹ ಈ ಸಮಸ್ಯೆಗೆ ಕಾರಣವಾಗಿದೆ.

  ಕೋಡಂಬಹಳ್ಳಿ ಗ್ರಾಮದಲ್ಲಿಯೂ ನೀರಿನ ಸಮಸ್ಯೆ ಭೀಕರವಾಗಿದ್ದು, ನೀರಿಗಾಗಿ ಜನತೆ ಪಕ್ಕದ ತೋಟಗಳಿಗೆ ಬಿಂದಿಗೆ ಹಿಡಿದು ತೆರಳಬೇಕಾಗಿದೆ. ತೋಟಗಳ ಮಾಲೀಕರ ಬೈಗುಳ ಕೇಳಿಕೊಂಡು ನೀರು ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ಸಮಸ್ಯೆ ಬೇಸಿಗೆಯಲ್ಲಿ ಇನ್ನಷ್ಟು ಬಿಗಡಾಯಿಸಲಿದೆ. ಇವುಗಳಲ್ಲದೆ ತಾಲೂಕಿನ ನಾನಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿಗೆ ಬರ ಎದುರಾಗಿದ್ದು, ಇವೆಲ್ಲವನ್ನೂ ನಿರ್ವಹಿಸಬೇಕಾದ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.

  ಬೇಸಿಗೆ ಬರುವ ಮೊದಲೇ ಈ ಪರಿತಾಪ ಎದುರಾಗಿದ್ದು, ಇನ್ನು ಬೇಸಿಗೆ ಪ್ರವೇಶಿಸಿದರೆ ಇನ್ನೆಷ್ಟು ಸಮಸ್ಯೆ ಬಿಗಡಾಯಿಸಬಹುದು ಎಂಬುದನ್ನು ಊಹಿಸಲಸಾಧ್ಯವಾಗಿರುವುದರಿಂದ ಸಂಬಂಧಿಸಿದವರು ಈಗಲೇ ಗಮನಹರಿಸಿ ಮುಂದಿನ ದಿನಗಳಲ್ಲಿ ನೀರಿನ ದಾಹ ತಣಿಸಬೇಕಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more