ಬಂದ್ ಹಿಂದೆ ವಿರೋಧಿಗಳ ಪಿತೂರಿ : ಬಿಎಸ್ ವೈ

ರಾಜ್ಯದ ಆಸ್ತಿಪಾಸ್ತಿ ಹಾನಿ ಮಾಡುವ ಗಲಭೆಕೋರರನ್ನು ಮುಲಾಜಿಲ್ಲದೆ ಬಂಧಿಸಿ ಎಂದು ಪೊಲೀಸ್ ಇಲಾಖೆಗೆ ಯಡಿಯೂರಪ್ಪ ಆದೇಶಿಸಿದ್ದಾರೆ. ಯಾವುದೇ ಕಾರಣಕ್ಕೂ ಬಂದ್ ಯಶಸ್ವಿಯಾಗಲು ಬಿಡುವುದಿಲ್ಲ. ಉತ್ತಮ ಆಡಳಿತ ನೀಡುತ್ತಿರುವ ಬಿಜೆಪಿ ಸರಕಾರಕ್ಕೆ ಕೆಟ್ಟ ಹೆಸರು ತರಲೆಂದೇ ವಿರೋಧಿಗಳು ಬಂದ್ ಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಸಿಟ್ಟು ಹೊರಹಾಕಿದರು.
ಶನಿವಾರ ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರೇಮಯುದ್ಧ ಎಂಬ ಸಂವಾದದಲ್ಲಿ ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ ಮುಖಕ್ಕೆ ಇಬ್ಬರು ಯುವಕರು ಮಸಿ ಬಳಿದಿದ್ದರು ಮತ್ತು ಅವರಿಬ್ಬರು ಕಾಂಗ್ರೆಸ್ ಯುವ ಕಾರ್ಯಕರ್ತರು ಎಂಬ ಅಂಶ ಬೆಳಕಿಗೆ ಬಂದಿತ್ತು. ಪ್ರಮೋದ್ ನೀಡಿರುವ ಬಂದ್ ಕರೆಯ ಹಿಂದೆ ವಿರೋಧ ಪಕ್ಷದ ಪಿತೂರಿ ಇದೆ ಎಂದು ಯಡಿಯೂರಪ್ಪ ಆರೋಪಿಸಿದರು.
ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ತೋರಿಸುವುದು ವಿರೋಧಿಗಳಿಗೆ ಬೇಕಾಗಿದೆ. ಹಿಂದೆ ಚರ್ಚ್ ದಾಳಿ ನಡೆದಾಗಲೂ ಇದೇ ರೀತಿ ಪಿತೂರಿ ನಡೆದಿತ್ತು ಎಂದು ಅವರು ದೂರಿದರು. ಬಜೆಟ್ ಮಂಡನೆ ಸನ್ನಿಹಿತವಾಗಿರುವುದರಿಂದ ಬಿಜೆಪಿಗೆ ಕೆಟ್ಟ ಹೆಸರು ತರುವುದೇ ವಿರೋಧಿಗಳ ಉದ್ದೇಶ ಎಂದು ಅವರು ಕಿಡಿಕಾರಿದರು.
ಸೇನೆ ಕಾರ್ಯಕರ್ತರ ಬಂಧನ : ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮುನ್ನೆಚ್ಚರಿಕೆಯಾಗಿ 300ಕ್ಕೂ ಹೆಚ್ಚು ಶ್ರೀರಾಮಸೇನೆ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ಅಜಯಕುಮಾರ್ ಸಿಂಗ್ ಹೇಳಿದ್ದಾರೆ. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಬಂದ್ ಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ ಭದ್ರತೆಗಾಗಿ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಿಲಾಗಿದೆ. ಮಂಗಳೂರು, ಉಡುಪಿ ಮತ್ತು ಬಾಗಲಕೋಟೆ ಹೊರತುಪಡಿಸಿದರೆ ಬಂದ್ ಹೆಚ್ಚೂಕಡಿಮೆ ಶಾಂತಯುತವಾಗಿದೆ. ಮುತಾಲಿಕ್ ತವರೂರಾದ ಬೆಳಗಾವಿಯಲ್ಲಿಯೂ ಬಂದ್ ಶಾಂತಿಯುತವಾಗಿದೆ.
ಹುಬ್ಬಳ್ಳಿಯಲ್ಲಿ ಬಿಗಿ ಬೇದೋಬಸ್ತ್ : ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಹುಬ್ಬಳ್ಳಿಯಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿಯಲ್ಲಿ 48 ಸೇನೆ ಕಾರ್ಯಕರ್ತರನ್ನು ಬಂದಿಸಲಾಗಿದೆ. ಫೆಬ್ರವರಿ 15ರವರೆಗೆ ಗಲಭೆ ನಡೆಸಲು ಯಾವುದೇ ಅವಕಾಶ ನೀಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಔರಾದಕರ್ ಹೇಳಿದ್ದಾರೆ.












Click it and Unblock the Notifications