ಪುನರ್ವಸತಿ ಶಿಬಿರದಲ್ಲಿ ಶೋಭಾ

ಬಿಜೆಪಿ ಸರಕಾರದಲ್ಲಿ ಉತ್ತಮ ಕೆಲಸ ಮಾಡಿದವರಲ್ಲಿ ಶೋಭಾ ಕೂಡಾ ಒಬ್ಬರು ಎನ್ನುವುದು ಒಪ್ಪುವ ಮಾತೇ, ಇದನ್ನು ವರಿಷ್ಠರು ಗಮನಿಸಿದ್ದಾರೆ ಕೂಡಾ. ಆದರೆ, ಸರಕಾರ ಉಳಿಯಬೇಕು ಎಂಬ ಏಕೈಕ ಕಾರಣದಿಂದ ಶೋಭಾ ಅವರನ್ನು ಕೈಬಿಡುವಂತೆ ಅಂದಿನ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಇದೀಗ ಮತ್ತೆ ಶೋಭಾ ಸುದ್ದಿಯಲ್ಲಿದ್ದು, ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಅನೇಕ ರೆಕ್ಕೆ ಪುಕ್ಕಗಳು ಹುಟ್ಟಿಕೊಳ್ಳಲು ಕಾರಣವಾಗಿದೆ.
ಶೋಭಾ ಮತ್ತೆ ಸಂಪುಟದಲ್ಲಿ ಸ್ಥಾನ ಪಡೆಯುತ್ತಾರಾ? ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಾರಾ? ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಗುತ್ತಾರಾ ಅಥವಾ ಯಾವುದಾದರೊಂದು ರಾಜ್ಯದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರಾ? ಇಂತಹ ಅನೇಕ ಉಹಾಪೋಹಗಳು ಸೃಷ್ಟಿಯಾಗಿವೆ. ಕಳೆದ ವರ್ಷ ನವೆಂಬರ್ ನಲ್ಲಿ ತಲೆದೋರಿದ್ದ ಬಿಜೆಪಿ ಬಿಕ್ಕಟ್ಟಿನಲ್ಲಿ ರೆಡ್ಡಿಗಳ ಬೆದರಿಕೆಗೆ ಮಣಿದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಲ್ಲದ ಮನಸ್ಸಿನಿಂದ ಶೋಭಾ ಅವರ ರಾಜೀನಾಮೆ ಪಡೆದುಕೊಂಡಿದ್ದರು.
ಸಂಪುಟದಲ್ಲಿ ಸ್ಥಾನ ಪಡೆಯುಲು ಅಸಾಧ್ಯ. ಅದಕ್ಕೆ ಸ್ಪಷ್ಟ ಕಾರಣ ರೆಡ್ಡಿ ಪಡೆಯ ವಿರೋಧ. ಜೊತೆಗೆ ಪಕ್ಷದಲ್ಲಿರುವ ಮೂಲ ಬಿಜೆಪಿ ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಶಂಕರಲಿಂಗೇಗೌಡ, ರಾಮದಾಸ್, ಆನೇಕಲ್ ನಾರಾಯಣಸ್ವಾಮಿ, ಸಿಟಿ ರವಿ, ಎಸ್ ಕೆ ಬೆಳ್ಳುಬ್ಬಿ, ಎಸ್ ಐ ಚಿಕ್ಕನಗೌಡರ್ ಅವರುಗಳು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೇ ಮಾರ್ಚ್ ನಲ್ಲಿ ಸಂಪುಟ ಪುನಾರಚನೆಯಲ್ಲಿ ಪ್ರಸ್ತುತ ಸಂಪುಟದಲ್ಲಿರುವ ಹತ್ತು ಮಂದಿಯನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆಯನ್ನು ಇತ್ತೀಚೆಗೆ ನಡೆದ ಶಾಸಕಾಂಗ ಸಭೆ ಮಂಡಿಸಿದ್ದಾರೆ. ರಾಜ್ಯಾಧ್ಯಕ್ಷರಾಗುವುದು ಕೂಡಾ ಆಗದ ಮಾತು.
ಅತ್ತ ಪರಿಷತ್ ಸದಸ್ಯೆ ವಿಮಲಾಗೌಡ ಕೂಡಾ ನಾನು ಮಂತ್ರಿ ಆಗುವೆ ಎಂದು ಓಡಾಡತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಭಾ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಹುದ್ದೆ ನೀಡುವುದು ಬಿಜೆಪಿಗೆ ಕಷ್ಟವೇನೂ ಆಗುವುದಿಲ್ಲ. ಈ ಮೂಲಕ ಸಂಪುಟದಿಂದ ಕೈಬಿಟ್ಟು ರಾಜ್ಯ ಬಿಜೆಪಿ ಮಹಿಳೆಯರ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳಬಹುದು ಎನ್ನುವುದು ವರಿಷ್ಠರ ಲೆಕ್ಕಾಚಾರವಾಗಿದೆ.
ಇತ್ತೀಚೆಗೆ ದೆಹಲಿಯಲ್ಲಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದ ಶೋಭಾ ಕರಂದ್ಲಾಜೆ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ ಕಳೆದ ನವೆಂಬರ್ ತಿಂಗಳಿಂದ ರಾಜ್ಯದಲ್ಲಿ ಆಗಿರುವ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದೆ, ಮುಂದಿನ ಕ್ರಮಗಳನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ಅಲ್ಲದೇ ರೆಡ್ಡಿಗಳ ತಾಯಿ ಎಂದೇ ಬಿಂಬಿತರಾಗಿರುವ ಹಾಗೂ ಶೋಭಾ ಅವರನ್ನು ಸಂಪುಟದಿಂದ ಕೈಬಿಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿರುವ ಶೋಭಾ, ಅವರೊಂದಿಗೂ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸುಷ್ಮಾ ಅವರು ಶೋಭಾ ಪರ ಅನುಕಂಪದ ಮಾತನಾಡಿದ್ದು, ಈ ಉಪಾಪೋಹಗಳಿಗೆ ಪುಷ್ಟಿ ಸಿಕ್ಕಿದೆ. ಇಷ್ಟರಲ್ಲಿ ಶೋಭಾ ಪಕ್ಷದಲ್ಲಿ ಉನ್ನತ ಮಟ್ಟದ ಅಧಿಕಾರ ವಹಿಸುವುದು ಉತ್ತರಾಯಣ ಪುಣ್ಯಕಾಲ ಆರಂಭವಾದ ನಂತರ ಗೊತ್ತಾಗುತ್ತದೆ.












Click it and Unblock the Notifications