ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿದಲ್ಲಿ ರೇಣುಕಾ ಮಹಾತ್ಮೆ ಮತ್ತೆ ಆರಂಭ

By Staff
|
Google Oneindia Kannada News

Honnali MLA Renukacharya
ಬೆಂಗಳೂರು, ಡಿ. 14 : ಭಾರತೀಯ ಜನತಾಪಕ್ಷದ ಪಾಳೆಯದಲ್ಲಿ ಉದ್ಭವಿಸಿದ್ದ, ಇನ್ನೇನು ಸರಕಾರವೇ ಬಿದ್ದು ಹೋಗುತ್ತದೆ ಎಂಬಂತಹ ಭಿನ್ನಮತದ ಜ್ವಾಲೆ ಮೇಲ್ನೋಟಕ್ಕೆ ತಣ್ಣಗಾಗಿರಬಹುದು. ಆದರೆ, ಅಸಮಾಧಾನ ಅತೃಪ್ತಿಯ ಹೊಗೆ ಆರಿಲ್ಲ. ಆರುವ ಲಕ್ಷಣಗಳೂ ಇಲ್ಲ.

ಭಿನ್ನಮತದ ಮಹಾ ದಂಡನಾಯಕ ಜನಾರ್ದನ ರೆಡ್ಡಿ ಅವರು ಅಕ್ರಮ ಗಣಿಗಾರಿಕೆ ವಿರುದ್ಧದ ಸಿಬಿಐ ತನಿಖೆಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡ ನಂತರ, ಭಿನ್ನಮತದ ಬಾವುಟವನ್ನು ಹಾರಿಸುವ ಜವಾಬ್ದಾರಿ ಹೊನ್ನಾಳಿಯ ಶಾಸಕ ರೇಣುಕಾಚಾರ್ಯ ಅವರ ತಲೆ ಮೇಲೆ ಬಿದ್ದಿದೆ. ಅವರು ಆ ಕೆಲಸವನ್ನು ಆನಂದದಿಂದಲೇ ಮಾಡಿಕೊಂಡು ಬರುತ್ತಿದ್ದಾರೆ.

ಇಂದು ಮತ್ತೆ ಭಿನ್ನಮತೀಯ ಶಾಸಕರ ಗುಪ್ತ ಸಭೆ ನಡೆಸುವಲ್ಲಿ ರೇಣುಕಾ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಹೊರವಲಯದ ಸಿಲ್ವರ್ ಓಕ್ ರೆಸಾರ್ಟ್ ನಲ್ಲಿ ಅತೃಪ್ತ ಶಾಸಕರ ಸಭೆ ನಡೆಸಿ ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರಿಗೆ ತಮ್ಮ ಇರುವನ್ನೂ ಹಾಗೂ ಈಡೇರದ ಬೇಡಿಕೆಗಳ ಪಟ್ಟಿಯನ್ನು ನೆನಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ರೆಡ್ಡಿ ಮತ್ತು ಯಡ್ಡಿ ನಡುವಿನ ಜಗಳ ಕೇಂದ್ರ ನಾಯಕರ ಮಧ್ಯಸ್ಥಿಕೆಯಿಂದ ತಣ್ಣಗಾದರೂ ಸ್ಥಾನ ಮಾನ ಸಿಗದೆ ಕಂಗಾಲಾಗಿರುವ ಇತರ ಬಿಜೆಪಿ ಶಾಸಕರ ಬಂಡಾಯದ ಕಾವು ಮತ್ತೆ ಏರತೊಡಗಿದೆ. ಮಂಡಳಿ, ನಿಗಮಗಳಿಗೆ ನೇಮಕ ಹಾಗೂ ಮಂತ್ರಿಗಿರಿಯನ್ನು ಆಶಿಸಿ ರೆಡ್ಡಿಗಳ ಜತೆಗೆ ಕೈಜೋಡಿಸಿದ್ದ ಸುಮಾರು ಎರಡು ಡಜನ್ ಶಾಸಕರಿಗೆ ಇತ್ತ ರೆಡ್ಡಿಯೂ ಇಲ್ಲ ಅತ್ತ ಅಧಿಕಾರವೂ ಇಲ್ಲದಂತಾಗಿರುವುದು ನುಂಗಲಾರದ ತುತ್ತಾಗಿದೆ.

ಇದೇ ಕಾರಣಕ್ಕೆ ಮತ್ತೆ ರೆಸಾರ್ಟ್ ಮೀಟಿಂಗಿಗೆ ಶಾಸಕರು ಶರಣಾಗಿದ್ದಾರೆ. ಆದರೆ ಈ ಬಾರಿ ಹೈದರಾಬಾದು ಅಲ್ಲ, ಬೆಂಗಳೂರು ಎನ್ನುವುದು ನೆನಪಿರಲಿ. ಸಿಲ್ವರ್ ಓಕ್ ರೆಸಾರ್ಟು ಅಂಥ ಭಾರೀ ರೇಟಿನ ಹೋಟೆಲು ಏನಲ್ಲ. ಇಂದಿನ ಭಿನ್ನಮತೀಯ ಸಭೆಯಲ್ಲಿ ಕನಿಷ್ಠ 28 ಮಂದಿ ಶಾಸಕರು ಸೇರಿದ್ದಾರೆಂದು ಗೊತ್ತಾಗಿದೆ. ಆದರೆ ಈ ಸಭೆಯಲ್ಲಿ ಕೆಲವು ಮಂತ್ರಿಗಳೂ ಇದ್ದರೆಂಬ ಸುದ್ದಿ ದಟ್ಟವಾಗಿದ್ದು ಆ ಮಂತ್ರಿಗಳು ಯಾರೆಂಬುದು ರಾಜಕೀಯ ಆಸಕ್ತಿಯ ಜಾಣ ಓದುಗರಿಗೆ ಕಷ್ಟವಾಗಲಾರದು.

ರೆಸಾರ್ಟಿಗೆ ಬಂದದ್ದು ರಾಜಕೀಯ ಮಾಡುವುದಕ್ಕೆ ಅಲ್ಲ, ಊಟ ಮಾಡುವುದಕ್ಕೆ ಎಂದಿದ್ದಾರೆ ನರ್ಸ್ ಜಯಲಕ್ಷ್ಮಿ ಜತೆಗೆ ಸರಸವಾಡಿದ ಖ್ಯಾತಿಯ ಶಾಸಕ ರೇಣುಕಾ. ಇವರ ಈ ಮಾತುಗಳನ್ನು ಯಡ್ಡಿಹಾಗಿರಲಿ, ನೀವೂ ನಂಬುವುದಿಲ್ಲ. ದಿಲ್ಲಿಯಲ್ಲಿ ರೆಡ್ಡಿ ಯಡ್ಡಿ ಜಗಳ ತಾರಕಕ್ಕೇರಿದಾಗ ರೇಣುಕಾಚಾರ್ಯ ಅವರ ಶಾಸಕರ ಗ್ಯಾಂಗು ಹೈದರಾಬಾದಿನಲ್ಲಿ ಬೀಡುಬಿಟ್ಟಿತ್ತು. ದಿಲ್ಲಿಯಲ್ಲಿ ಕದನ ವಿರಾಮ ಘೋಷಣೆ ಆದನಂತರ ನಂತರ ರೇಣುಕಾಚಾರ್ಯ ಸುದ್ದಿಗಾರರೊಂದಿದೆ ಮಾತನಾಡುತ್ತಾ ತಮ್ಮ ಹೈದರಾಬಾದ್ ಭೇಟಿ ಉದ್ದೇಶವನ್ನು ಹೀಗೆ ಬಣ್ಣಿಸಿದ್ದರು:

"ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ನೆರೆಹಾವಳಿಯನ್ನು ನಿಭಾಯಿಸುವುದು ಹೇಗೆ ಎಂದು ಅಧ್ಯಯನ ಮಾಡಲು ನಾವೊಂದಿಷ್ಟು ಜನ ಶಾಸಕರು ಹೈದರಾಬಾದಿಗೆ ಹೋಗಿದ್ದೆವು, ಅಷ್ಟೆ. ಇದರಲ್ಲಿ ರಾಜಕೀಯ ಏನಿಲ್ಲ"

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X