ಗಣಿ ಸಂಪತ್ತು ಲೂಟಿ ಮಾಡಲು ಬಿಡಲ್ಲ : ಸಿಎಂ

ನಗರದ ಪುಟ್ಟೇನಹಳ್ಳಿಯಲ್ಲಿ ಬಾಳೆಹೊನ್ನೂರು ಧರ್ಮಪೀಠ ನಿರ್ಮಿಸಿದ ಶ್ರೀ ಸೋಮೇಶ್ವರ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಾನು ಗಡಸಾಗಿ ಮಾತನಾಡುವುದನ್ನು ಕಡಿಮೆ ಮಾಡಿದ್ದೇನೆಂದು ಜನ ಭಾವಿಸಿದ್ದಾರೆ. ನಾನು ಮಾತನ್ನು ಮೃದುಗೊಳಿಸಿಲ್ಲ. ಆದರೆ, ನನ್ನ ಮಾತನ್ನು ಅಪಾರ್ಥ ಮಾಡಿಕೊಳ್ಳಬಾರದು ಎಂದು ಚಿಂತನೆ ಮಾಡಿ ಮಾತನಾಡಬೇಕಾಗಿ ಬಂದಿದೆ. ಪ್ರಸ್ತುತ ಅಗ್ನಿ ಪರೀಕ್ಷೆಯಿಂದ ನಾನು ಹೊರಬರಬೇಕು. ಈ ಸಂದರ್ಭವನ್ನು ಪ್ರಾಮಾಣಿಕವಾಗಿ ಎದುರಿಸಬೇಕು. ಆ ಪ್ರಯತ್ನದಲ್ಲಿ ನಾನಿದ್ದೇನೆ ಎಂದು ಹೇಳಿದರು.
ಜನ ಹಿತಕ್ಕಾಗಿ ದುಡಿಯುವವರ ಕಾಲೆಳೆಯುವುದು ನಿರಂತರವಾಗಿ ನಡೆದಿದೆ. ಅಭಿವೃದ್ಧಿಯನ್ನು ತಡೆಯುವ ವ್ಯವಸ್ಥಿತ ಷಡ್ಯಂತ್ರವನ್ನು ನೀವು ಗಮನಿಸುತ್ತಿದ್ದೀರಿ. ಜನ ಬೆಂಬಲ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ನಾನು ಚಿಂತಿಸುವ ಅಗತ್ಯವಿಲ್ಲ. ಕುರ್ಚಿ ಆಸೆಗೆ ಭಾಷೆ, ನೆಲ, ಜಲದ ವಿಚಾರಕ್ಕೆ ಧಕ್ಕೆ ಬರುವುದನ್ನು ನಾನು ಸಹಿಸುವುದಿಲ್ಲ. ಜನರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಕೆಲಸ ಮಾಡುತ್ತೇನೆ ಎಂದರು.
ಬಾಳೆ ಹೊನ್ನೂರು ಧರ್ಮಪೀಠದ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯಸ್ವಾಮೀಜಿ ಮಾತನಾಡಿ, ಆರೋಗ್ಯ ಪೂರ್ಣ ಸಾತ್ವಿಕ ಸಮಾಜ ನಿರ್ಮಾಣಕ್ಕೆ ಧರ್ಮಾಚರಣೆಯನ್ನು ಅಳವಡಿಸಿಕೊಳ್ಳಬೇಕು. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಶ್ವ ಬಂಧುತ್ವ, ಅಹಿಂಸೆ, ಧ್ಯಾನ ಮತ್ತಿತರ
ದಶಧರ್ಮ ಸೂತ್ರಗಳು ಸಕಲರಿಗೂ ದಾರಿದೀಪ ಎಂದು ತಿಳಿಸಿದರು. ಗೊತ್ತುಗುರಿ, ತತ್ವಸಿದ್ಧಾಂತಗಳಿಲ್ಲದೆ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿರುವ ಇಂದಿನ ಸಂದರ್ಭದಲ್ಲಿ ಮಠಾಧೀಶರು ಮತ್ತು ರಾಜಕೀಯ ಧುರೀಣರು ಏಕತೆ ಕಾಪಾಡಿಕೊಂಡು ಬರಬೇಕಿದೆ ಎಂದು ಸಲಹೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications