ಕ್ರಿಕೆಟ್: ಮುಂಬೈನಲ್ಲಿ ಸೆಹ್ವಾಗ್ ಸ್ಫೋಟ

168 ಎಸೆತಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಅತಿ ವೇಗದ ದ್ವಿಶತಕ ಗಳಿಸಿದ ಹೆಗ್ಗಳಿಗೆ ಅವರು ಪಾತ್ರರಾಗಿದ್ದಾರೆ. ಅಂತಿಮ ಟೆಸ್ಟ್ ನ ಎರಡನೇ ದಿನ ಅಂತ್ಯಕ್ಕೆ ಧೋನಿ ಪಡೆ 443 ರನ್ ಗೆ ಒಂದು ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ಪೇರಿಸುವತ್ತ ಹೆಜ್ಜೆ ಇರಿಸಿದೆ. ಐದು ದ್ವಿಶತಕ ಗಳಿಸಿದ್ದ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ವೀರೇಂದ್ರ ಸೆಹ್ವಾಗ್ ಮುರಿದು ಆರು ದ್ವಿಶತಕ ದಾಖಲಿಸಿದರು.
ಇಲ್ಲಿನ ಬ್ರೇಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ನಲ್ಲಿ ಸಿಂಹಳೀಯರು ತಮ್ಮ ಪ್ರಥಮ ಇನ್ನಿಂಗ್ಸ್ ನಲ್ಲಿ 393 ರನ್ ಗಳ ಗೌರಯುತ ಮೊತ್ತವನ್ನೇ ಗಳಿಸಿದ್ದರು. ಇದಕ್ಕೆ ಪ್ರತಿಯಾಗಿ ಮೈದಾನಕ್ಕಿಳಿದ ಭಾರತೀಯ ದಾಂಡಿಗರು ಲಂಕನ್ ಬೌಲರ್ ಗಳ ಬೆವರಿಳಿಸಿದರು. ಆರಂಭಿಕ ಆಟಗಾರ ನಜಾಫ್ ಗಢ್ ದ ಮಹಾರಾಜ ವೀರೇಂದ್ರ ಸೆಹ್ವಾಗ್ ಹಾಗೂ ಮುರಳಿ ವಿಜಯ್ ಭಾರತ ತಂಡಕ್ಕೆ ಭದ್ರ ಅಡಿಪಾಯವನ್ನೇ ಹಾಕಿದರು.
ವೀರೇಂದ್ರ ಸೆಹ್ವಾಗ್ ಅಬ್ಬರಿಸಿದ ರೀತಿ ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಮನರಂಜನೆ ಒದಗಿಸಿದರೆ, ಅತ್ತ ಸಂಗಕ್ಕಾರ್ ಪಡೆಗೆ ಕೈಕೈ ಹಿಸುಕಿಕೊಳ್ಳುವ ಸರದಿ. ವೇಗಿಗಳು ಕೈಚೆಲ್ಲಿದರೆ, ಅನುಭವಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕೂಡಾ ಸೆಹ್ವಾಗ್ ಸಿಡಿಲಬ್ಬರಕ್ಕೆ ಕಕ್ಕಾಬಿಕ್ಕಿಯಾದರು. ಸೆಹ್ವಾಗ್ ಆರಂಭದಿಂದಲೇ ಆಕ್ರಮಣ ಆಟಕ್ಕಿಳಿದಿದ್ದಲ್ಲದೇ, ಟೆಸ್ಟ್ ಪಂದ್ಯ ಎನ್ನುವುದನ್ನೇ ಮರೆತು ಏಕದಿನ ಪಂದ್ಯದ ರೀತಿಯಲ್ಲಿ ರನ್ ಪೇರಿಸತೊಡಗಿದರು.
ವೀರೇಂದ್ರ ಸೆಹ್ವಾಗ್ ದಿನದ ಅಂತ್ಯಕ್ಕೆ ನಾಟ್ ಔಟ್ ಆಗಿ ಉಳಿದಿದ್ದು, ಕೇವಲ 239 ಬೌಲ್ ಗಳಲ್ಲಿ 284 ರನ್ ಗಳನ್ನು ಗಳಿಸಿದ್ದಾರೆ. ಈ ಮೊತ್ತದಲ್ಲಿ 40 ಬೌಂಡರಿಗಳು, 7 ಸಿಕ್ಸರ್ ಗಳು ಸೇರಿವೆ. ಇನ್ನೊಬ್ಬ ಆರಂಭಿಕ ಆಟಗಾರ ಮುರಳಿ ವಿಜಯ್ ಟೆಸ್ಟ್ ನಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು 212 ಬೌಲ್ ಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಮೇತ 87 ರನ್ ಗಳನ್ನು ಗಳಿಸಿದರು. ಸೆಹ್ವಾಗ್ ಅವರಿಗೆ ಉತ್ತಮ ಬೆಂಬಲ ನೀಡಿರುವ ರಾಹುಲ್ ದ್ರಾವಿಡ್ 5 ಬೌಂಡರಿಗಳೊಂದಿಗೆ 62 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದಿದ್ದಾರೆ.
ಇದುವರೆಗಿನ ಐದು ಅತಿ ವೇಗದ ದ್ವಿಶತಕಗಳ ಪಟ್ಟಿ :
* ನಾಥನ್ ಅಸ್ಲೇ 153 ಎಸೆತಗಳಲ್ಲಿ 222 ರನ್, ಇಂಗ್ಲೆಂಡ್ ವಿರುದ್ದ 2001 /02
* ವೀರೇಂದ್ರ ಸೆಹ್ವಾಗ್, 168 ಎಸೆತಗಳಲ್ಲಿ 200 ರನ್, ಶ್ರೀಲಂಕಾ ವಿರುದ್ದ 2009 /10
* ಹರ್ಷೆಲ್ ಗಿಬ್ಸ್, 211 ಎಸೆತಗಳಲ್ಲಿ 228 ರನ್, ಪಾಕಿಸ್ತಾನದ ವಿರುದ್ದ, 2002 /03
* ಆಡಂ ಗಿಲ್ ಕ್ರಿಸ್ಟ್, 212 ಎಸೆತಗಳಲ್ಲಿ 204 ರನ್, ದಕ್ಷಿಣಾ ಆಫ್ರಿಕಾ ವಿರುದ್ದ, 2001 /02
* ಇಯಾನ್ ಬೊಥಮ್, 220 ಎಸೆತಗಳಲ್ಲಿ 208 ರನ್, ಭಾರತದ ವಿರುದ್ದ, 1982 /83
(ಏಜನ್ಸೀಸ್)












Click it and Unblock the Notifications