ಕೆಎಂಎಫ್ ಗಾದಿಗೆ ರೆಡ್ಡಿ, ಡಿವಿಎಸ್ ಕಿತ್ತಾಟ?

ಸೋಮಶೇಖರ ರೆಡ್ಡಿ ಅವರ ಅಧಿಕಾರವಧಿ ಮುಗಿದಿದೆ ಸದ್ಯದಲ್ಲೇ ಅವರ ಸ್ಥಾನ ಬದಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿವಿ ಸದಾನಂದ ಗೌಡ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೆಡ್ಡಿ ಅವರು, "ನನಗೆ ಯಾವುದೇಸಚಿವ ಸ್ಥಾನದ ಮೇಲೆ ಆಸಕ್ತಿ ಇಲ್ಲ, ಕೆಎಂಎಫ್ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವುದು ನನ್ನ ಇಚ್ಛೆ. ಮೂರು ತಿಂಗಳ ನಂತರ ಸ್ಥಾನವನ್ನು ತ್ಯಜಿಸುವ ಬಗ್ಗೆ ಬಂದಿರುವ ಊಹಾಪೋಹಗಳಿಗೆ ಬೆಲೆ ಇಲ್ಲ" ಎಂದರು.
ಅವರು ಸೋಮವಾರ ನಗರದಲ್ಲಿ ದ.ಕ. ಹಾಲು ಒಕ್ಕೂಟ ಏರ್ಪಡಿಸಿದ್ದ 6 ಕೆಜಿ ನಂದಿನಿ ಮೊಸರು ಜಂಬೋ ಪ್ಯಾಕೆಟ್' ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇಲ್ಲಿನ ಹಾಲು ಒಕ್ಕೂಟದ ಸಮಗ್ರ ಅಭಿವೃದ್ಧಿಗೆ ಅನುದಾನದ ಅಗತ್ಯವನ್ನು ಮನಗಂಡಿದ್ದೇವೆ. ಮುಖ್ಯಮಂತ್ರಿಗಳು ಹಾಗೂ ಸಹೋದರರ ಜತೆ ಚರ್ಚಿಸಿ ದಕ್ಷಿಣ ಕನ್ನಡಕ್ಕೆ ರು.50 ಕೋಟಿ ಅನುದಾನ ಒದಗಿಸಲಾಗುವುದು ಎಂದು ರೆಡ್ಡಿ ನುಡಿದರು.
ಮೊಸರಿನ ಜಂಬೋ ಪ್ಯಾಕೆಟ್ ಬಿಡುಗಡೆ ಮಾಡಿ ಮಾತನಾಡಿದ ಮೂಳೆತಜ್ಞ ಡಾ.ಶಾಂತಾರಾಮ ಶೆಟ್ಟಿ, ಅಸ್ಥಿಗಳ ಬೆಳವಣಿಗೆಗೆ ಹಾಗೂ ಅವುಗಳ ಆರೋಗ್ಯ ಕಾಪಾಡಲು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅತ್ಯಗತ್ಯ. ಹಾಲಿನಲ್ಲಿ ಇವೆರಡು ಸತ್ವಗಳಿವೆ. ಹಾಗಾಗಿ ಎಲ್ಲರೂ ದಿನಕ್ಕೆ ಒಂದು ಲೋಟ ಹಾಲು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ತಾಯಂದಿರು ಮಕ್ಕಳಿಗೆ ದಿನಾಲು ಒಂದು ಲೋಟ ಹಾಲು ನೀಡಬೇಕು ಎಂದರು.
(ಏಜೆನ್ಸೀಸ್)











Click it and Unblock the Notifications