ರೆಡ್ಡಿಗಳನ್ನು ಕಿತ್ತೆಸೆಯಿರಿ : ಅನಂತಮೂರ್ತಿ

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೊದಲು ತೆಗೆದುಕೊಂಡ ನಿಲುವುಗಳಿಂದ ಅವರ ಬಗ್ಗೆ ಒಂದಿಷ್ಟು ಒಳ್ಳೆಯ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆ. ಆದರೆ, ಅಧಿಕಾರದ ಆಸೆಗಾಗಿ ಬಳ್ಳಾರಿ ರೆಡ್ಡಿ ಸಹೋದರರಿಗೆ ಶರಣಾಗಿ ನಾಮಾಕಾವಸ್ಥೆ ಮುಖ್ಯಮಂತ್ರಿಯಾಗಿರುವುದು ವಿಪರ್ಯಾಸ ಎಂದರು.
ಇನ್ನೂ ಕಾಲ ಮಿಂಚಿಲ್ಲ, ಮುಖ್ಯಮಂತ್ರಿ ದಿಟ್ಟತನ ಪ್ರದರ್ಶಿಸಬೇಕು. ಅಧಿಕಾರದ ಆಸೆಗೆ ಯಾರೋ ಒಬ್ಬರಿಗೆ ರಾಜ್ಯವನ್ನು ಒತ್ತೆಯಿಡುವುದು ಸರಿಯಲ್ಲ. ಈ ಕೂಡಲೇ ಅವರನ್ನು ಸಂಪುಟದಿಂದ ಕಿತ್ತೆಸೆಯಬೇಕು. ಹೀಗಾದಾಗ ಇತಿಹಾಸದಲ್ಲಿ ಅವರಿಗೊಂದು ಒಳ್ಳೆ ಹೆಸರು ಬರುತ್ತದೆ. ರಾಜ್ಯದ ಸಂಪತ್ತು ಕಾಪಾಡಿದ ಹಿರಿಮೆ ಇರುತ್ತದೆ ಎಂದು ಅನಂತಮೂರ್ತಿ ಹೇಳಿದರು.
ಬಿಜೆಪಿ ಹೈಕಮಾಂಡ್ ಇಂದು ಹಣಬಲ, ತೋಳ್ಬಲ ಇರುವವರ ಕಡೆಗೆ ಇದೆ ಎಂಬುದು ಮೊನ್ನೆಯ ಬಿಕ್ಕಟ್ಟಿನ ಶಮನದಿಂದ ಸಾಬೀತಾಗಿದೆ. ದೇಶದ ಆಡಳಿತ ವ್ಯವಸ್ಥೆಯನ್ನು ಬಿಜೆಪಿ ಕೈಗೆ ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕ ಉದಾಹರಣೆ ಎಂದು ಅವರು ಟೀಕಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications