ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಸಿದ್ಧರಾಗಿ : ತಲವಾರ

ಅವರು ನಗರದ ಕಮಲಾ ನೆಹರು ಮಹಿಳಾ ಕಾಲೇಜಿನ ಕುವೆಂಪು ಗ್ರಂಥಾಲಯ ಆಯೋಜಿಸಿದ್ದ 'ಬದಲಾಗುತ್ತಿರುವ ತಂತ್ರಜ್ಞಾನದಲ್ಲಿ ಶೈಕ್ಷಣಿಕ ಗ್ರಂಥಪಾಲಕರ ಸವಾಲುಗಳು' ಎಂಬ ವಿಷಯದ ಕುರಿತ ಯು.ಜಿ.ಸಿ.ಪ್ರಾಯೋಜಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಶನಿವಾರ ಮಾತನಾಡುತ್ತಿದ್ದರು.
1980-90ರ ದಶಕದಲ್ಲಿ ದೇಶದಲ್ಲಿ ಉನ್ನತ ಶಿಕ್ಷಣವನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳೆರಡೂ ತೀವ್ರವಾಗಿ ನಿರ್ಲಕ್ಷಿಸಿದ್ದವು. ಇದರ ಪರಿಣಾಮ ಪ್ರಪಂಚದ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ತೀರಾ ಕಡಿಮೆ ಎಂದು ಅವರು ವಿಷಾದ ವ್ಯಕ್ತಪಡಿಸಿ, ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉನ್ನತ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಸಮಾಧಾನದ ಸಂಗತಿ ಎಂದು ತಿಳಿಸಿದರು.
2005ರಲ್ಲಿ ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಪ್ರಮಾಣ ಕೇವಲ ಶೇ.11ರಷ್ಟಿತ್ತು. ಆದರೆ ಇದನ್ನು 2020ರ ಹೊತ್ತಿಗೆ ಕನಿಷ್ಟ ಶೇ.27ಕ್ಕೆ ಏರಿಸಬೇಕೆಂಬ ಆಶಯ ಕೇಂದ್ರ ಸರಕಾರದ್ದಾಗಿದೆ. ಆ ನಿಟ್ಟಿನಲ್ಲಿ ಸರಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಕೇಂದ್ರ ಸರಕಾರ ಖಾಸಗಿ ಸಹಭಾಗಿತ್ವದಲ್ಲಿ ದೇಶದಲ್ಲಿ ಅನೇಕ ವಿಶ್ವವಿದ್ಯಾಲಯಗಳನ್ನು ತೆರೆಯಲು ಉದ್ಧೇಶಿಸದೆ. ಆ ಮೂಲಕ ವಿದೇಶಿ ವಿವಿ.ಗಳನ್ನು ಎದುರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಿದೆ. ರಾಜ್ಯ ಸರಕಾರ ಈಗಾಗಲೇ ಎರಡು ಖಾಸಗಿ ವಿ.ವಿ.ತೆರೆಯಲು ಅನುಮತಿ ನೀಡಿದೆ ಎಂದ ಅವರು ಕೇಂದ್ರ ಸರಕಾರ ದೇಶದಲ್ಲಿ 40 ಕೇಂದ್ರೀಯ ವಿ.ವಿ.ತೆರೆಯಲು ನಿರ್ಧರಿಸಿದೆ ಎಂದರು.
ಉನ್ನತ ಶಿಕ್ಷಣದ ಸುಧಾರಣೆಗಾಗಿ ಕೇಂದ್ರ ಸರಕಾರ ನ್ಯಾಷನಲ್ ನಾಲೆಡ್ಜ್ ಕಮಿಷನ್ ರಚಿಸಿದ್ದು ಅದರ ವರದಿಯನ್ನಾಧರಿಸಿ ಉನ್ನತ ಶಿಕ್ಷಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಇತ್ತೀಚೆಗೆ ದೇಶದ ಎಲ್ಲಾ ವಿ.ವಿ.ಗಳ ಕುಲಪತಿಗಳ ಸಭೆ ಕರೆದು ಅಲ್ಲಿ ಇದರ ಕುರಿತು ಚರ್ಚಿಸಿದ್ದಾರೆಂದು ಅವರು ತಿಳಿಸಿದರು.
ಭಾರತದಲ್ಲಿನ ಯುವ ಶಕ್ತಿಯೂ ವಿದೇಶಿ ವಿ.ವಿ. ನಮ್ಮ ದೇಶ ಪ್ರವೇಶಿಸಲು ಕಾರಣ ಎಂದ ಅವರು ಭಾರತದ ಯುವ ಸಂಪನ್ಮೂಲವನ್ನು ಕೊಳ್ಳೆ ಹೊಡೆಯುವ ಸಂಚು ಇದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಆದರೆ ನಮ್ಮ ಯುವ ಜನತೆ ವಿದೇಶಿ ವಿ.ವಿ.ವ್ಯಾಮೋಹಕ್ಕೆ ಒಳಗಾಗದೆ ದೇಶದ ಅಭಿವೃದ್ದಿ ಕಡೆ ಗಮನ ಹರಿಸಬೇಕೇಂದು ಅವರು ಕಿವಿ ಮಾತು ಹೇಳಿದರು.
ದೇಶದ ಶೈಕ್ಷಣಿಕ ಹಾಗೂ ಆರ್ಥಿಕಾಭಿವೃದ್ಧಿಯಲ್ಲಿ ಗ್ರಂಥಪಾಲಕರ ಜವಾಬ್ದಾರಿ ಬಹಳ ಇದೆ ಎಂದ ಅವರು ಗ್ರಂಥಪಾಲಕರು ಶಿಕ್ಷಣದ ಮುಖ್ಯ ವಾಹಿನಿಗೆ ಬರುವುದು ಅಗತ್ಯವಾಗಿದೆ. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಿಗೂ ಉನ್ನತ ಶಿಕ್ಷಣ ನೀಡುವುದು ಉನ್ನತ ಶಿಕ್ಷಣ ನೂತನ ನೀತಿಯ ಪ್ರಮುಖ ಉದ್ದೇಶವಾಗಿದೆ ಎಂದು ಪ್ರೊ.ತಲವಾರ ತಿಳಿಸಿದರು.
ಕುವೆಂಪು ವಿ.ವಿ.ಗ್ರಂಥಪಾಲಕ ಡಾ.ಕೃಷ್ಣೇಗೌಡ ಆಶಯ ಭಾಷಣ ಮಾಡಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ.ತಿಮ್ಮಯ್ಯ, ಎ.ಟಿ.ಎನ್.ಸಿ.ಸಿ. ಪ್ರಾಂಶುಪಾಲ ಪ್ರೊ.ಎನ್.ಬಿ.ತುಳಜಪ್ಪ, ಎನ್.ಇ.ಎಸ್.ಖಜಾಂಚಿ ಅಶ್ವತ್ಥನಾರಾಯಣ, ಡಾ.ಬಸವರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ.ಎಚ್.ಎನ್.ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಕಮಲಾ ನೆಹರು ಕಾಲೇಜು ಗ್ರಂಥಪಾಲಕ ಜಗದೀಶ ಕಮಲಾಕರ ಸ್ವಾಗತಿಸಿದರು.












Click it and Unblock the Notifications