ಕರ್ನಾಟಕದ ಹಣಕಾಸು ಪರಿಸ್ಥಿತಿ ಸುಭದ್ರ
ಬೆಂಗಳೂರು,ಅ. 30 : ಕರ್ನಾಟಕವು 2004-05 ನೇ ಸಾಲಿನಿಂದ ಇಲ್ಲಿಯವರೆವಿಗೂ ಉತ್ತಮವಾದ ಆದಾಯವನ್ನು ಹೊಂದಿದೆ. ಬಿಎಸ್‌ಬಿಪಿ ಆಧಾರಿತ ವಿತ್ತೀಯ ಕೊರತೆ, ಸಾಲ ಬಾಕಿ ಮತ್ತು ಬಡ್ಡಿ ಪಾವತಿಯ ಅನುಪಾತವು ರೆವಿನ್ಯೂ ಆದಾಯದ ಶೇಕಡಾವಾರು ಹಿನ್ನೆಲೆಯಲ್ಲಿ ನಿಗದಿತ ಮಿತಿಯೊಳಗೇ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಭಾರತ ಸರ್ಕಾರದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ ಅವರೊಂದಿಗೆ ನಡೆದ ಸಭೆಯಲ್ಲಿ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ವಿವರಿಸುತ್ತಾ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ಕಂಟ್ರೋಲರ್ ಜನರಲ್ ವಿನೋದ್‌ರಾಯ್ ಅವರು ಇದಕ್ಕೆ ಉತ್ತರವಾಗಿ ಮಾತನಾಡಿ, ಅಭಿವೃದ್ಧಿ ಮತ್ತು ಮೂಲಭೂತ ಹಣಕಾಸಿನ ಉತ್ತಮ ನಿರ್ವಹಣೆಯ ಶ್ರೀಮಂತ ಪರಂಪರೆಯನ್ನು ಕನಾಟಕವು ಹೊಂದಿದೆ. ಕಳೆದ ವರ್ಷದಿಂದ ಜಗತ್ತು ಎದುರಿಸುತ್ತಿರುವ ಆರ್ಥಿಕ ಹಿನ್ನಡೆ ಪರಿಸ್ಥಿತಿಯ ಸವಾಲನ್ನು ರಾಜ್ಯವು ಸಮರ್ಥವಾಗಿ ಎದುರಿಸಿದೆ. ಮುಂದಿನ ಒಂದು ವರ್ಷದಲ್ಲಿ ಸಹಜಸ್ಥಿತಿಗೆ ರಾಜ್ಯ ಮರಳುವ ಎಲ್ಲ ಭರವಸೆಯೂ ಕಂಡುಬರುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಸಂಭವಿಸಿದ ಅತಿವೃಷ್ಠಿ ಮತ್ತು ನೆರೆಹಾವಳಿಯ ಸಂಕಷ್ಟ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಜಿಲ್ಲಾ ಆಡಳಿತಗಳು ಮತ್ತು ರಾಜ್ಯದ ಸಮರ್ಥ ನಾಯಕತ್ವವನ್ನು ಅವರು ಪ್ರಶಂಸಿಸಿದರು. ಸಾರ್ವಜನಿಕ ಉದ್ದಿಮೆಗಳಿಗೆ ಸರ್ಕಾರವು ನೀಡುವ ಅನುದಾನವು ಬಳಕೆಯಾಗದೆ ಎಲ್ಲೆಲ್ಲಿ ಫಿಕ್ಸ್ಡ್ ಡಿಪಾಸಿಟ್‌ನಲ್ಲಿ ಉಳಿದಿದೆಯೋ ಅಂತಹ ಮೊತ್ತವನ್ನು ಇನ್ನಿತರ ಅಗತ್ಯ ಹಾಗೂ ಆದ್ಯ ಕಾರ್ಯಕ್ರಮಗಳಿಗೆ ಬಳಸುವುದು ಉತ್ತಮವೆಂದು ತಿಳಿಸಿದರು. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡುವ ಭರವಸೆಯನ್ನೂ ಅವರು ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications