• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಜರಾತ್‌ನಲ್ಲಿ ಮುಸ್ಲಿಮರಿಗೆ ಭಯ ಎಂಬ ಬೊಬ್ಬೆ ಬೇಡ

|
ಗುಜರಾತ್‌ನಲ್ಲಿ ಮುಸ್ಲಿಮರು ಭಯದ ನೆರಳಲ್ಲಿ ದಿನ ದೂಡುತ್ತಿದ್ದಾರೆಂದು ಕರ್ನಾಟಕದ ಕೆಲವು ಬುದ್ಧಿವಂತರು ಕಾಲಕಾಲಕ್ಕೆ ಹುಯ್ಯಲೆಬ್ಬಿಸುತ್ತಲೇ ಇರುವುದನ್ನು ಮಾಧ್ಯಮಗಳಲ್ಲಿ ನಾವು ಕಾಣುತ್ತಿದ್ದೇವೆ. ಅವರು ಯಾರೂ ಗುಜರಾತ್‌ಗೆ ಹೋಗಿ ನೋಡಿದವರಲ್ಲ. ತಮಗೆ ಬೇಕಾದ ಪತ್ರಿಕೆಗಳನ್ನು ಓದಿ ಮತ್ತು ತಮ್ಮ ಮನೋಭಾವಕ್ಕೆ ಅನುಗುಣವಾದ ಟಿವಿ ಚಾನೆಲ್‌ಗಳನ್ನು ನೋಡಿ ಅದಕ್ಕೊಂದಷ್ಟು ತಮ್ಮ ಕಲ್ಪನೆ, ಉತ್ಪ್ರೇಕ್ಷೆ, ರೋಷ, ಆವೇಶಗಳನ್ನು ಬೆರೆಸಿ ಬೊಬ್ಬೆಹಾಕುವವರು ಅವರು. ಈ ರೀತಿ ಮಾಡುವ ಮೂಲಕ ಅಂಥವರು ಕರ್ನಾಟಕದಲ್ಲಿ ಸುಮ್ಮಸುಮ್ಮನೆ ಹಿಂದು-ಮುಸ್ಲಿಂ ಕೋಮುಗಳ ಮಧ್ಯೆ ಕಂದಕ ಸೃಷ್ಟಿಸುತ್ತಿದ್ದಾರೆಂದು ವಿಷಾದದಿಂದ ಹೇಳಬೇಕಾಗಿದೆ.

ನಾನು ಗುಜರಾತ್‌ನ ಕಛ್ ಪ್ರಾಂತ್ಯದಲ್ಲಿ ಮತ್ತು ದಕ್ಷಿಣ ಗುಜರಾತ್‌ನಲ್ಲಿ ಮೂರು ವರ್ಷಗಳ ಕಾಲ ವಾಸವಾಗಿದ್ದು ಈಚೆಗಷ್ಟೇ ಬೆಂಗಳೂರಿಗೆ ವಾಪಸ್ ಬಂದು ನೆಲೆಸಿದವನು. ರಾಷ್ಟ್ರೀಕೃತ ಬ್ಯಾಂಕ್ ಒಂದರ ಮೇನೇಜರ್ ಆಗಿ ಅಲ್ಲಿದ್ದ ನನಗೆ ಆ ಮೂರು ವರ್ಷಗಳಲ್ಲಿ ಸಹಜವಾಗಿಯೇ ಬ್ಯಾಂಕ್‌ನ ಒಳಗೂ ಹೊರಗೂ ಸಾಕಷ್ಟು ಹಿಂದು-ಮುಸ್ಲಿಂ ಗ್ರಾಹಕರ ಒಡನಾಟ ಲಭ್ಯವಾಗಿತ್ತು. ಗುಜರಾತ್‌ನಲ್ಲಿದ್ದೇ ಕನ್ನಡದ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದ ನಾನು ಆ ಸಂಬಂಧವಾಗಿಯೂ ಅಲ್ಲಿ ಎಲ್ಲ ಕೋಮಿನ ಮತ್ತು ಎಲ್ಲ ವರ್ಗಗಳ ಜನರೊಂದಿಗೆ ಬೆರೆತಿದ್ದೇನೆ. ಪ್ರೌಢಶಾಲಾ ಮಕ್ಕಳಿಗೆ ಉಚಿತ ತರಗತಿ ತೆಗೆದುಕೊಳ್ಳುವ ಹವ್ಯಾಸ ಬೆಳೆಸಿಕೊಂಡಿರುವ ನಾನು ಗುಜರಾತ್‌ನಲ್ಲಿಯೂ ಮಕ್ಕಳಿಗೆ ಉಚಿತ ತರಗತಿ ತೆಗೆದುಕೊಂಡಿದ್ದು ಆ ಸಂದರ್ಭದಲ್ಲಿ ಅಲ್ಲಿನ ಮಕ್ಕಳೊಡನೆ, ಶಿಕ್ಷಕರೊಡನೆ ಹಾಗೂ ಪೋಷಕರೊಡನೆ ಸಾಕಷ್ಟು ವಿಚಾರ ವಿನಿಮಯ ಮಾಡಿಕೊಂಡಿದ್ದೇನೆ. ಸಾಂಸ್ಕೃತಿಕ ಸಂಘಟನೆಯ ಪದಾಧಿಕಾರಿಯಾಗಿ ವರ್ಷಗಳ ಕಾಲ ಗುಜರಾತ್‌ನ ಸಾರ್ವಜನಿಕ ವಲಯದಲ್ಲಿ ದುಡಿದಿದ್ದೇನೆ. ಇದೀಗ ಬೆಂಗಳೂರಿಗೆ ವಾಪಸಾದಮೇಲೂ ನನಗೆ ಗುಜರಾತ್‌ನ ನನ್ನ ಪರಿಚಿತರಿಂದ ಮಾಹಿತಿಗಳು ಬರುತ್ತಿವೆ. ಈ ಎಲ್ಲ ಕಾಣ್ಕೆ ಮತ್ತು ಅನುಭವಗಳಿಂದ ಹೇಳುತ್ತಿದ್ದೇನೆ, ಗುಜರಾತ್‌ನಲ್ಲಿ ಮುಸ್ಲಿಮರು ಯಾವ ಭಯದ ನೆರಳಿನಲ್ಲಿಯೂ ಬದುಕುತ್ತಿಲ್ಲ. ಹಿಂದೂಗಳಂತೆ ಮುಸ್ಲಿಮರೂ ಅಲ್ಲಿ ಸುಖ-ಸ್ವಾತಂತ್ರ್ಯ-ಸಹಕಾರ-ಭದ್ರತೆ-ಪ್ರಗತಿ ಸೌಲಭ್ಯ ಎಲ್ಲವನ್ನೂ ಹೊಂದಿಯೇ ಜೀವಿಸುತ್ತಿದ್ದಾರೆ.

ಗುಜರಾತಿಗಳು ಸ್ವಭಾವತಃ ಶಾಂತಿಪ್ರಿಯರು. ಅಲ್ಲಿನ ಮುಸ್ಲಿಮರೂ ಈ ಮಾತಿಗೆ ಹೊರತಲ್ಲ. 'ನಾವೂ ಸುಖವಾಗಿ ಬಾಳುತ್ತೇವೆ, ನೀವೂ ಸುಖವಾಗಿ ಬಾಳಿರಿ', ಎಂಬುದು ಎಲ್ಲ ಗುಜರಾತಿಗಳ ಜೀವನಧ್ಯೇಯ. ಮೇಲಾಗಿ, ಗುಜರಾತಿಗಳು ಸ್ನೇಹಶೀಲರು. ಮಾರವಾಡಿಗಳಂತೆ ದೇಶದಲ್ಲಿ ಎಲ್ಲೇ ಹೋಗಲಿ ತಮ್ಮದೇ ಕೋಟೆ ಕಟ್ಟಿಕೊಂಡು ಜೀವಿಸುವವರಲ್ಲ. ಗುಜರಾತ್‌ನ ಪ್ರತಿ ಅಂಗಡಿಯಲ್ಲಿಯೂ ಪ್ರತಿ ಮನೆಯಲ್ಲಿಯೂ ಈ ಸ್ನೇಹ ಸೌಹಾರ್ದವನ್ನು ಕಾಣಬಹುದು. ಅಲ್ಲಿ ನನ್ನ ಬ್ಯಾಂಕ್ ಶಾಖೆಗೆ ಬಂದ ಅದೆಷ್ಟೋ ಹಿಂದು ಗ್ರಾಹಕರು ತಮ್ಮ ಪರಿಚಯದ ಮುಸ್ಲಿಮರಿಗೆ ಸಾಲ ಸೌಲಭ್ಯ ನೀಡುವಂತೆ ನನ್ನನ್ನು ಕೇಳಿಕೊಂಡಿದ್ದಾರೆ. ನಾನಿದ್ದ ಗಾಂಧಿಧಾಮ್, ಕಾಂಡ್ಲಾ ಮೊದಲಾದ ಕಛ್ ಪ್ರದೇಶದಲ್ಲಿ ಹಿಂದು-ಮುಸ್ಲಿಮರು ಮಾತ್ರವಲ್ಲ, ಭಾರತದ ನಾನಾ ರಾಜ್ಯಗಳಿಂದ ಬಂದು ನೆಲಸಿದ ಜನರೆಲ್ಲ ಒಬ್ಬರು ಇನ್ನೊಬ್ಬರ ಸುಖ-ಕಷ್ಟಗಳಿಗಾಗುತ್ತ ಒಂದೇ ಮನೆಯವರಂತೆ ಬಾಳುವುದನ್ನು ಕಣ್ಣಾರೆ ಕಂಡಿದ್ದೇನೆ. ನಾನಿದ್ದ ಇನ್ನೊಂದು ಊರಾದ ವಲ್‌ಸಡ್‌ನಲ್ಲಿ ನನ್ನ ಮನೆಯ ಸಮೀಪದಲ್ಲಿ ಮುಸ್ಲಿಂ ಒಬ್ಬ ಮೃತಪಟ್ಟಾಗ ಅಕ್ಕಪಕ್ಕದ ಮನೆಗಳ ಹಿಂದೂಗಳು ಆ ಮುಸ್ಲಿಮನ ಅಂತ್ಯಯಾತ್ರೆಯಲ್ಲಿ ಪಾಲ್ಗೊಂಡಿದ್ದನ್ನು ನಾನು ಕಂಡೆನಲ್ಲದೆ ಅಪರಿಚಿತನಾಗಿದ್ದರೂ ನಾನೂ ಹೋಗಿ ಪಾಲ್ಗೊಂಡೆ. ಅಲ್ಲಿ ಶೋಭಿಸುತ್ತಿದ್ದ ಮತೀಯ ಸಾಮರಸ್ಯ ಭಾವ ನನ್ನನ್ನು ಆ ಮಟ್ಟದಲ್ಲಿ ಆಕರ್ಷಿಸಿತ್ತು.

ಹಿಂದೂ ಉತ್ಸವಗಳಲ್ಲಿ ಮುಸ್ಲಿಮರು ಬೆರೆಯುವುದನ್ನು ಮತ್ತು ಆರೆಸ್ಸೆಸ್ಸ್ ಶಾಖೆಗಳಿಗೆ ಹೋಗುವ ಹಿಂದೂ ಹುಡುಗರು ಮುಸ್ಲಿಂ ಹಬ್ಬಗಳಲ್ಲಿ ಮುಸ್ಲಿಮರೊಡನೆ ಖುಷಿ ಹಂಚಿಕೊಳ್ಳುವುದನ್ನು ನಾನು ಗುಜರಾತ್‌ನಲ್ಲಿ ಗಮನಿಸಿದ್ದೇನೆ. ನರೇಂದ್ರ ಮೋದಿ ಮುಖ್ಯಮಂತ್ರಿಯಾದಮೇಲೆ ಮುಸ್ಲಿಮರೇನೂ ಮೂಲೆಗುಂಪಾಗಿಲ್ಲ. ಎಂದಿನ ಸ್ನೇಹ-ಸೌಹಾರ್ದಗಳಿಂದಲೇ ಬಾಳುತ್ತಿದ್ದಾರೆ, ಸುಖ-ಸೌಲಭ್ಯಗಳನ್ನು ಮೊದಲಿಗಿಂತ ಹೆಚ್ಚಿನ ಮಟ್ಟದಲ್ಲಿ ಹೊಂದುತ್ತಿದ್ದಾರೆ.

ಜನಸಮುದಾಯದ ಉತ್ಥಾನಕ್ಕಾಗಿ ಮೋದಿ ಹಮ್ಮಿಕೊಂಡಿರುವ ಯೋಜನೆಗಳ ಪ್ರಯೋಜನವನ್ನು ಮುಸ್ಲಿಮರೂ ದಲಿತ ಕ್ರಿಶ್ಚಿಯನ್ನರೂ ನಿರಾತಂಕವಾಗಿ ಪಡೆಯುತ್ತಿದ್ದಾರೆ. ರೋಗಗ್ರಸ್ತ ಉದ್ಯಮಗಳ ಪುನಶ್ಚೇತನ, ಹೊಸ ಉದ್ಯಮಗಳಿಗೆ ಪ್ರೋತ್ಸಾಹ, ಸಾಲ ಯೋಜನೆಗಳು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳತ್ತ ವಿಶೇಷ ಗಮನ, ವಿದ್ಯುತ್ ಸಮಸ್ಯೆ ನಿವಾರಣೆ, ಮೂಲಭೂತ ಸೌಕರ್ಯಗಳು, ಮುಸ್ಲಿಮರಿಗೂ ಸಮಾನ ಅವಕಾಶಗಳು ಇಂಥ ಹಲವು ಕ್ರಮಗಳಿಂದಾಗಿ ಗುಜರಾತಿನ ಜನರು ಹಿಂದೆಂದಿಗಿಂತಲೂ ಸುಖಿಗಳಾಗಿದ್ದಾರೆ. ಉದ್ಯಮಗಳು ಹೊಸ ಹುರುಪು ಪಡೆದುಕೊಂಡಿವೆ. ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯಮ, ನೌಕರಿಗಳು ದೊರೆತಿವೆ. ಕೆಳಮಧ್ಯಮ ಮತ್ತು ಬಡ ವರ್ಗದ ಜನರು, ಅದರಲ್ಲೂ ವಿಶೇಷವಾಗಿ ಬಡ ಮುಸ್ಲಿಮರೇ ಈ ಯೋಜನೆಗಳಿಂದ ವಿಶೇಷ ಲಾಭ ಹೊಂದಿದ್ದಾರೆ. ಸಹಸ್ರಾರು ಬಡ ಮುಸ್ಲಿಂ ಕುಟುಂಬಗಳಿಗೆ ಜೀವನೋಪಾಯಕ್ಕೆ ಮಾರ್ಗವಾಗಿದೆ. ಉತ್ತಮ ಜೀವನ ಸೌಲಭ್ಯಗಳಿಂದ ಇದುವರೆಗೂ ವಂಚಿತರಾಗಿದ್ದ ಅಸಂಖ್ಯಾತ ಬಡ ಮುಸ್ಲಿಮರಿಗೆ ಈಗ ಉದ್ಯೋಗ, ಶಿಕ್ಷಣ, ಆರೋಗ್ಯ ದೊರೆಯುತ್ತಿದೆ. ಪರಿಣಾಮ, ಹಿಂದೂಗಳೂ ಮುಸ್ಲಿಮರೂ ಅತ್ಯಂತ ಸೌಹಾರ್ದದಿಂದ ಬಾಳುತ್ತಿದ್ದಾರೆ.

ಗೌರಿ ಉವಾಚ

ಗೌರಿ ತ್ರಿವೇದಿಯವರ ಹೆಸರನ್ನು ನೀವೆಲ್ಲ ಕೇಳಿರಬಹುದು. ದಶಕಗಳ ಕೆಳಗೆ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿ ಆ ಜಿಲ್ಲೆಯ ಸ್ವರೂಪವನ್ನೇ ಬದಲಾಯಿಸಿದ ಮಹಿಳೆ ಈಕೆ. ಮತಭೇದವಿಲ್ಲದೆ ಎಲ್ಲ ದೀನ ದಲಿತರ, ಬಡಜನರ, ಶೋಷಿತರ ಏಳಿಗೆಗಾಗಿ ಅಹರ್ನಿಶಿ ಶ್ರಮಿಸಿದಾಕೆ. ಪಟ್ಟಭದ್ರ ಹಿತಾಸಕ್ತಿಗಳ ಹಾಗೂ ಕೊಳಕು ರಾಜಕಾರಣಿಗಳ ಬೆದರಿಕೆಗಳಿಗೆ ಸೊಪ್ಪುಹಾಕದೆ ಅನೇಕ ಜನಪರ ನಿರ್ಧಾರಗಳನ್ನು ಕೈಕೊಂಡು ಬಳ್ಳಾರಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದಾಕೆ. ಭ್ರಷ್ಟಾಚಾರದ ಸೋಂಕೂ ಇಲ್ಲದ ಶುದ್ಧಹಸ್ತೆ. ಬಳ್ಳಾರಿಯ ನಂತರ ರಾಜ್ಯದ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿ, ರಾಜ್ಯಪಾಲ ಟಿ.ಎನ್.ಚತುರ್ವೇದಿಯವರ ಪ್ರಧಾನ ಕಾರ್ಯದರ್ಶಿಯಾಗಿ, ಉನ್ನತ ಸ್ಥಾನಗಳನ್ನು ಅಲಂಕರಿಸಿ ಆ ಸ್ಥಾನಗಳಿಗೆ ಶೋಭೆ ತಂದುಕೊಟ್ಟ ಹಿರಿಯ ಐಎಎಸ್ ಅಧಿಕಾರಿ. ಗುಜರಾತ್‌ನವರಾದ ಈಕೆ ಸ್ವಯಂ ನಿವೃತ್ತಿ ಪಡೆದು ಇದೀಗ ಗುಜರಾತ್‌ನಲ್ಲಿ ಮಧ್ಯಮ ವರ್ಗದ ನಾಗರಿಕ ಜೀವನ ಸಾಗಿಸುತ್ತಿದ್ದಾರೆ. ಅವರು ನನಗೆ ಬರೆದ ಮಿಂಚಂಚೆ ಪತ್ರವೊಂದರ ಕೆಲ ಸಾಲುಗಳ ಯಥಾನುವಾದ ಹೀಗಿದೆ:

'ನಮ್ಮ ಮುಖ್ಯಮಂತ್ರಿ (ನರೇಂದ್ರ ಮೋದಿ) ಓರ್ವ ಅದ್ಭುತ, ಆದರೆ ತಪ್ಪಾಗಿ ಅರ್ಥೈಸಲ್ಪಟ್ಟಿರುವ ಮತ್ತು ತಪ್ಪಾಗಿ ತೀರ್ಮಾನಿಸಲ್ಪಟ್ಟಿರುವ ವ್ಯಕ್ತಿ. ಆತ ಕ್ರಿಯಾಶೀಲ. ಒಳ್ಳೆಯ ಆಡಳಿತ ನೀಡುವ ಮೂಲಕ ಆತ ಗುಜರಾತ್‌ನ ಸ್ವರೂಪವನ್ನೇ ಬದಲಿಸಿದ್ದಾನೆ. ಮೋದಿ ಶುದ್ಧಹಸ್ತದ ವ್ಯಕ್ತಿ, ಮಾತ್ರವಲ್ಲ, ಭ್ರಷ್ಟಾಚಾರವನ್ನಾಗಲೀ ಅದಕ್ಷತೆಯನ್ನಾಗಲೀ ಎಂದೂ ಸಹಿಸುವವನಲ್ಲ. ಮೋದಿಯಲ್ಲೇನಾದರೂ ಕೊರತೆಯಿದ್ದರೆ ಅದು 'ಮಾಧ್ಯಮ ವ್ಯಕ್ತಿತ್ವ'ದ ಕೊರತೆ ಮತ್ತು ರಾಷ್ಟ್ರೀಯ ಪರಿಕಲ್ಪನೆಯ ಕೊರತೆ. ಇದೂ ಸಹ, ರಾಷ್ಟ್ರೀಯ ಹಾಗೂ ಪಾಶ್ಚಾತ್ಯ ಮಾಧ್ಯಮಗಳನುಸಾರ! ಮೋದಿಗೆ ಶ್ರೀಸಾಮಾನ್ಯನ, ಮಹಿಳೆಯರ ಮತ್ತು ಯುವಕರ ಬೆಂಬಲ ಇರುವುದರಿಂದ, ಈ 'ಕೊರತೆ ಸಾರುವ ಸನ್ನಿವೇಶ'ವೂ ಬದಲಾಗುವುದೆಂಬ ವಿಶ್ವಾಸ ನನ್ನದಾಗಿದೆ. ಹಲವು ವರ್ಷಗಳಿಂದ ಮುಸ್ಲಿಮರಿಂದ ಉಪದ್ರವಕ್ಕೊಳಗಾಗಿದ್ದ ಗುಜರಾತಿಗಳಲ್ಲಿ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯಗಳನ್ನು ಒಡಮೂಡಿಸುವಲ್ಲಿ ಮೋದಿ ಯಶಸ್ವಿಯಾಗಿದ್ದಾನೆ. ಆತ ನಮಗೆ (ಗುಜರಾತ್‌ಗೆ) ಉತ್ತಮ ಮೂಲಭೂತ ಸೌಕರ್ಯಗಳನ್ನೂ ಸಾಕಷ್ಟು ವಿದ್ಯುಚ್ಛಕ್ತಿಯನ್ನೂ ಕೊಟ್ಟಿದ್ದಾನೆ.'

ಹೀಗೆ ಶ್ರೀಮತಿ ಗೌರಿ ತ್ರಿವೇದಿಯವರ ಪತ್ರ ಮುಂದುವರಿಯುತ್ತದೆ. ನರೇಂದ್ರ ಮೋದಿ ಆಡಳಿತದ ಮತ್ತು ಗುಜರಾತ್‌ನ ಪ್ರಸ್ತುತ ವಸ್ತುಸ್ಥಿತಿ ಹೀಗಿರುವಾಗ, ಕರ್ನಾಟಕದ ಕೆಲವು ಬುದ್ಧಿವಂತರು ನಮ್ಮ ಕೆಲವು ಪೂರ್ವಗ್ರಹಪೀಡಿತ ಅಥವಾ ಅನ್ಯೋದ್ದೇಶಭರಿತ ಮಾಧ್ಯಮ ಸಂಸ್ಥೆಗಳ, ಅದರಲ್ಲೂ ಅಂಥ ಕೆಲವು ಆಂಗ್ಲ ಮತ್ತು ಹಿಂದಿ ಟಿ.ವಿ. ಚಾನೆಲ್‌ಗಳ ವರದಿಗಳನ್ನು ನಂಬಿ (ಅಥವಾ ನಂಬಿದಂತೆ ನಟಿಸಿ), 'ಗುಜರಾತ್‌ನಲ್ಲಿ ಮುಸ್ಲಿಮರು ಭಯದ ನೆರಳಲ್ಲಿ ದಿನ ದೂಡುತ್ತಿದ್ದಾರೆ', ಎಂದು ಹುಯ್ಯಲೆಬ್ಬಿಸುತ್ತಿದ್ದರೆ ಅದನ್ನು ಕಂಡು ಸುಮ್ಮನಿರಲು ಸಾಧ್ಯವೆ? ಸುಮ್ಮನಿದ್ದರೆ ಅದರಿಂದಾಗಿ ಕರ್ನಾಟಕದ ಮತೀಯ ಸಾಮರಸ್ಯಕ್ಕೇ ಧಕ್ಕೆ ತಾನೆ? ಎಂದೇ ಈ ತಿಳಿವಳಿಕೆ ನೀಡುವ ಲೇಖನ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more