ಭಾರತದ ಸುತ್ತ ಕೋಟೆ ಕಟ್ಟುತ್ತಿರುವ ದುಷ್ಟಕೂಟ

* ಎಚ್. ಆನಂದರಾಮ ಶಾಸ್ತ್ರೀ
5 ಸೆಪ್ಟೆಂಬರ್ 2009. ಮುಖ್ಯಮಂತ್ರಿ ಯಡಿಯೂರಪ್ಪನವರು ಚೀನಾದ ಶಾಂಘೈನಲ್ಲಿ ಅಡ್ಡಾಡುತ್ತ ಕರ್ನಾಟಕಕ್ಕೆ ಚೀನೀ ಬಂಡವಾಳ ಆಕರ್ಷಿಸುವ ಪ್ರಯತ್ನ ನಡೆಸಿದ್ದರು. ಅದೇ ವೇಳೆ ಚೀನಾ ದೇಶದ ಸೈನಿಕರು ಭಾರತದ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ರಿಮ್‌ಖಿಮ್ ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಬಿಸ್ಕತ್ ಕವರ್ ಮತ್ತು ಸಿಗರೇಟ್‌ಗಳನ್ನು ಎಸೆದುಹೋಗಿದ್ದರು!
ಅದೇ ಸಮಯದಲ್ಲೇ ಲಡಾಕ್ ವಲಯದ ಮೌಂಟ್ ಗಯಾ ಸಮೀಪದಲ್ಲಿ ಒಂದೂವರೆ ಕಿಲೋಮೀಟರ್‌ನಷ್ಟು ಭಾರತದ ಗಡಿಯೊಳಗೆ ನುಸುಳಿ ಬಂದಿದ್ದ ಚೀನೀ ಸೈನಿಕರು ಅಲ್ಲಿನ ಕಲ್ಲುಬಂಡೆಗಳು ಮತ್ತು ಮರಗಳ ಮೇಲೆ ಕೆಂಪು ಪೇಂಟ್‌ನಿಂದ "ಚೀನಾ" ಎಂದು ಬರೆದುಹೋಗಿದ್ದರು! ಭಾರತೀಯ ಸೇನಾಧಿಕಾರಿಗಳಿಗೆ ಚೀನಾದ ಈ ಅತಿಕ್ರಮಣದ ವಿಷಯ ತಿಳಿದೇ ಇರಲಿಲ್ಲ! ಸ್ಥಳೀಯರು ತಿಳಿಸಿದ ಬಳಿಕವಷ್ಟೇ ನಮ್ಮ ಸೇನಾಧಿಕಾರಿಗಳಿಗೆ ಈ ವಿಷಯ ಗೊತ್ತಾದದ್ದು. ಇದಕ್ಕೆ ಒಂದು ವಾರ ಮೊದಲಷ್ಟೇ ಜಮ್ಮು ಮತ್ತು ಕಾಶ್ಮೀರದ ಚುಮರ್ ಪ್ರಾಂತ್ಯದಲ್ಲಿ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಚೀನಾದ ಹೆಲಿಕಾಪ್ಟರ್‌ಗಳು ಭಾರತದ ವಾಯುಪ್ರದೇಶದೊಳಕ್ಕೆ ಬಂದಿದ್ದವು.
ಇಷ್ಟೆಲ್ಲ ಆದಮೇಲೂ, ನಮ್ಮ "ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್"ನ ಉನ್ನತಾಧಿಕಾರಿ ಸಂಜಯ್ ಸಿಂಘಾಲ್ ಅವರು ಸೆಪ್ಟೆಂಬರ್ 13ರಂದು ಹೇಳಿಕೆಯೊಂದನ್ನು ನೀಡಿ, ಚೀನಾದಿಂದ ಅತಿಕ್ರಮಣ ಆಗಿಯೇ ಇಲ್ಲವೆಂದಿದ್ದಾರೆ. ಆದರೆ, ಅದೇ ದಿನ ನಮ್ಮ ಟಿವಿ ವಾರ್ತೆಗಳಲ್ಲಿ, ಚೀನೀ ಸೈನಿಕರು ಭಾರತದ ಪ್ರದೇಶದಲ್ಲಿ ಕಲ್ಲಿನಮೇಲೆ "ಚೀನಾ" ಎಂದು (ತಮ್ಮ ಲಿಪಿಯಲ್ಲಿ) ಬರೆದಿರುವ ಚಿತ್ರ ಪ್ರಸಾರವಾಗಿದೆ.
1962ರಲ್ಲೂ ಹೀಗೇ ಆಯಿತು
1962ರಲ್ಲೂ ಹೀಗೇ ಆಯಿತು. ನಮ್ಮ ಸೈನ್ಯದ ಸನ್ನದ್ಧತೆಯನ್ನು ಪರೀಕ್ಷಿಸಲು ಚೀನಾ ನಮ್ಮ ಗಡಿಯೊಳಕ್ಕೆ ಆಗಾಗ ನುಗ್ಗಿಬರತೊಡಗಿತು. "ಚೀನಾದ ವಿರುದ್ಧ ಯುದ್ಧದ ಸಾಧ್ಯತೆ ಸದ್ಯಕ್ಕಂತೂ ಇಲ್ಲ" ಎಂದು ಆಗಸ್ಟ್ ತಿಂಗಳಲ್ಲಿ ನಮ್ಮ ಬ್ರಿಗೇಡಿಯರ್ ಡಿ.ಕೆ.ಪಲಿತ್ ಹೇಳಿದ್ದರು. ಆದರೆ ಅದಾಗಲೇ ಚೀನಾವು ಯುದ್ಧಕ್ಕೆ ಬೀಜಾಂಕುರ ಮಾಡಿ ಆಗಿತ್ತು. ಸೆಪ್ಟೆಂಬರ್‌ನಲ್ಲಿ ಯುದ್ಧವು ತೀವ್ರಗತಿಗೇರತೊಡಗಿದ್ದಾಗ ನಮ್ಮ ಮೇಜರ್ ಜನರಲ್ ಜೆ.ಎಸ್.ಧಿಲ್ಲಾನ್ ಅವರು, "ಭಾರತದ ಸೈನ್ಯವು ಕೆಲವು ಸುತ್ತು ಗುಂಡು ಹಾರಿಸಿದರೆ ಸಾಕು, ಚೀನಾ ಸೈನಿಕರು ಓಡಿಹೋಗುತ್ತಾರೆ", ಎಂದು ಹೇಳಿಕೆ ನೀಡಿದರು! ಆದರೆ ಆ ಯುದ್ಧವನ್ನು ಭಾರತ ಸೋತಿತು!
1954ರಲ್ಲಿ ಚೀನಾದೊಡನೆ ಮಾಡಿಕೊಂಡಿದ್ದ "ಪಂಚಶೀಲ" ಒಪ್ಪಂದವನ್ನು ನಂಬಿಕೊಂಡು, "ಹಿಂದೀ-ಚೀನೀ ಭಾಯ್ ಭಾಯ್", ಎನ್ನುತ್ತ ಕುಳಿತಿದ್ದ ನಮ್ಮ ಪ್ರಧಾನಿ ನೆಹರೂ ಅವರು ಅವಶ್ಯಕ ಪರಿಜ್ಞಾನ, ಮುಂದಾಲೋಚನೆ, ಪೂರ್ವಸಿದ್ಧತೆ ಮತ್ತು ದೃಢನಿರ್ಧಾರಗಳ ಕೊರತೆಯಿಂದಾಗಿ ಭಾರತದ ಸೋಲಿಗೆ ಮತ್ತು ಜಮ್ಮು-ಕಾಶ್ಮೀರದ ಭಾಗವಾಗಿದ್ದ ಅಕ್ಸಾಯ್ ಚಿನ್ ಪ್ರಾಂತ್ಯವು ಚೀನಾದ ತೆಕ್ಕೆಗೆ ಸೇರಲಿಕ್ಕೆ ಕಾರಣರಾದರು.
1962ರ ಭಾರತ-ಚೀನಾ ಯುದ್ಧದ ದಿನಗಳಲ್ಲಿ ಮಾಧ್ಯಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ನಾನು ಪಡಿತರ ಅಂಗಡಿಯಲ್ಲಿ ಸರತಿಯಲ್ಲಿ ನಿಂತು ಬಿದಿರಕ್ಕಿ ಮತ್ತು ಗೋವಿನ ಜೋಳ ಖರೀದಿಸಿ ತಂದು ಬಿದಿರಕ್ಕಿ ಅನ್ನ ಮತ್ತು ಗೋವಿನ ಜೋಳದ ರೊಟ್ಟಿ ತಿಂದದ್ದು ಹಾಗೂ ಪರಿಹಾರ ನಿಧಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕೊಟ್ಟದ್ದು ಚೆನ್ನಾಗಿ ನೆನಪಿದೆ.
ಭಾಗ : 1 2 3 »












Click it and Unblock the Notifications