ವೃದ್ಧ ತಂದೆ ತಾಯಿಗೆ ಮನೆಯಿಂದ ಅರ್ಧಚಂದ್ರ

ಚನ್ನಪಟ್ಟಣ, ಅ. 6 : ಹುಟ್ಟಿದಂದಿನಿಂದ ನಮ್ಮನ್ನು ಸಾಕಿ, ಸಲಹಿದ ಹೆತ್ತವರನ್ನು ಅವರ ಮುಪ್ಪಿನಲ್ಲಿ ನಾವು ಸಲಹಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಎಂದು ಭರತಖಂಡ ನಂಬುತ್ತದೆ. ಹಿಂದಿನಿಂದಲೂ ಈ ಸಂಸ್ಕೃತಿ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಆದರೆ ಕಾಲ ಬದಲಾದಂತೆ, ನಮ್ಮ ಸಂಸ್ಕೃತಿ ಎನ್ನುವುದಕ್ಕಿಂತಲೂ ನಮ್ಮ ಕರ್ತವ್ಯವನ್ನು ನಾವು ಮರೆಯುವತ್ತ ಸಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಮ್ಮನ್ನು ಪಾಲನೆ ಮಾಡಿದ ಹೆತ್ತವರನ್ನು ವೃದ್ದಾಪ್ಯದಲ್ಲಿ ಮರೆತು ಅಮಾನವೀಯತೆಯಿಂದ ನಡೆದುಕೊಳ್ಳುತ್ತಿರುವ ಉದಾಹರಣೆಗಳು ಇತ್ತೀಚೆಗೆ ತುಸು ಹೆಚ್ಚಾಗಿಯೇ ಕಂಡುಬರುತ್ತಿದೆ.
ಪಾಶ್ಚಿಮಾತ್ಯ ದೇಶಗಳೇ ನಮ್ಮ ಸಂಸ್ಕೃತಿಯನ್ನು ಮೆಚ್ಚಿ, ನಮ್ಮನ್ನು ಅನುಸರಿಸುತ್ತಿರುವಾಗ ನಾವೇ ಆ ಸಂಸ್ಕೃತಿಯನ್ನು ಮರೆತರೆ ಹೇಗೆ? ತಮ್ಮ ಜೀವನಪೂರ್ತಿ ಮಕ್ಕಳ ಶ್ರೇಯೋಭಿವೃದ್ದಿಗಾಗಿಯೇ ಶ್ರಮಿಸುವ ತಂದೆ-ತಾಯಿಯರನ್ನು ನಾವು ಎಷ್ಟರ ಮಟ್ಟಿಗೆ ಇಂದಿನ ದಿನಗಳಲ್ಲಿ ನಡೆಸಿಕೊಳ್ಳುತ್ತಿದ್ದೇವೆ ಎಂಬುದನ್ನು ಖಂಡಿತವಾಗಿಯೂ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಸಿನಿಮಾಗಳಲ್ಲಿ ಬಿತ್ತರಗೊಳ್ಳುವ ಇಂಥಹ ಕಥೆಗಳನ್ನು ನೋಡಿ ಅನುಕಂಪ ವ್ಯಕ್ತಪಡಿಸುವ ನಾವು, ನಿಜ ಜೀವನದಲ್ಲಿ ತಂದೆ ತಾಯಿಯರ ಬಗ್ಗೆ ಎಷ್ಟು ಮುತುವರ್ಜಿ ವಹಿಸುತ್ತೇವೆ ಎಂಬುದನ್ನು ನಾವೇ ಮನನ ಮಾಡಿಕೊಳ್ಳುವ ಅಗತ್ಯವಿದೆ.
ಈ ಜಿಜ್ಞಾಸೆಗೆ ಕಾರಣವಾಗಿದ್ದು, ಮೂವರು ಗಂಡು ಮಕ್ಕಳು, ನಾಲ್ವರು ಹೆಣ್ಣುಮಕ್ಕಳು, 25 ಮೊಮ್ಮಕ್ಕಳ ತುಂಬು ಕುಟುಂಬವಿದ್ದೂ ಅವರಾರ ಆಶ್ರಯವೂ ದೊರೆಯದೇ ದೇವಸ್ಥಾನದ ಜಗುಲಿಯಲ್ಲಿ ಜೀವನ ಸವೆಸುತ್ತಿರುವ ಚನ್ನಪಟ್ಟಣ ತಾಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದ ವಯೋವೃದ್ಧ ದಂಪತಿಗಳ ದಾರುಣ ಕಥೆ.
ಕಾಡುಮಲ್ಲಯ್ಯ ಮತ್ತು ಪುಟ್ಟಮ್ಮ ದಂಪತಿಗಳೇ ಈಗ ಮನೆಯಿಂದ ಹೊರಹಾಕಲ್ಪಟ್ಟಿರುವ ನತದೃಷ್ಟರಾಗಿದ್ದಾರೆ. ರೆಕ್ಕೆ ಬಲಿತ ಹಕ್ಕಿಯಾದರೂ ಜೀವನ ಅರಸುತ್ತ ತಾನೇ ಗೂಡು ಬಿಟ್ಟು ಹಾರಿ ಹೋದೀತು. ಆದರೆ, ಕಾಡುಮಲ್ಲಯ್ಯ ದಂಪತಿಗಳ ಮಕ್ಕಳು ರೆಕ್ಕೆ ಬಲಿತ ಮೇಲೆ ತಾವೇ ಕೈಯಾರೆ ಹೆತ್ತ ತಂದೆತಾಯಿಯರನ್ನು ಅಮಾನವೀಯವಾಗಿ ದಬ್ಬಿದ್ದಾರೆ. ಯಾರೂ ಕೈಹಿಡಿಯದಿದ್ದಾಗ ದೇವರೇ ಆಶ್ರಯ ನೀಡುತ್ತಾನಂತೆ. ಈಗ ಬದುಕಿನ ಕೊನೆಯ ದಿನಗಳನ್ನು ಕಾಣುತ್ತಿರುವ ವೃದ್ಧ ದಂಪತಿಗಳಿಗೆ ಆಶ್ರಯ ನೀಡಿದ್ದು ಊರಿನ ಮಾರಮ್ಮ ದೇವಸ್ಥಾನ!
ಹಾಗಂತ ಕಾಡುಮಲ್ಲಯ್ಯ ಕುಟುಂಬ ಬಡಕುಟುಂಬವೇನಲ್ಲ. ಈ ಹಿಂದೆ ಕಾಡುಮಲ್ಲಯ್ಯ ಪಟ್ಟಣದ ಸ್ಪನ್‌ಸಿಲ್ಕ್ ಮಿಲ್‌ನಲ್ಲಿ ನೌಕರರಾಗಿ ಕಾರ್ಯನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದುಕೊಂಡಿದ್ದವರು. ಊರಿನಲ್ಲಿ ತಮ್ಮ ಮಕ್ಕಳಿಗಾಗಿ ನಾಲ್ಕು ಮನೆಗಳನ್ನು ಸಹ ನಿರ್ಮಿಸಿಕೊಟ್ಟಿದ್ದರು. ಜೊತೆಗೆ ಸ್ವಲ್ಪ ಜಮೀನು ಸಹ ಈತನಿಗೆ ಇದ್ದು, ಸುಖಮಯವಾಗಿಯೇ ಜೀವನ ಸಾಗಿಸಿದ್ದರು. ಆದರೆ ಇದೇ ಆಸ್ತಿಯೇ ತಮ್ಮನ್ನು ಇಂಥ ಹೀನಾಯ ಸ್ಥಿತಿಗೆ ತಲುಪಿಸುತ್ತದೆಂದು ಮನಗಂಡಿದ್ದರೆ ಬಹುಶಃ ಮಕ್ಕಳಿಗಾಗಿ ಆಸ್ತಿಯನ್ನೇ ಮಾಡುತ್ತಿರಲಿಲ್ಲವೇನೋ?
ಒಬ್ಬ ವಂಚಕ ಮಗ ಹಾಗೂ ಸೊಸೆ ಸೇರಿ, ಜಮೀನಿನ ಮೇಲೆ ಯಾವುದೋ ಬ್ಯಾಂಕಿನಿಂದ ಸಾಲ ತರುವುದಾಗಿ ಕಾಡುಮಲ್ಲಯ್ಯನ ಮನವೊಲಿಸಿ, ಈತನ ಕೈಯಲ್ಲಿ ಪತ್ರವೊಂದಕ್ಕೆ ಸಹಿ ಹಾಕಿಸಿಕೊಂಡರಂತೆ. ಅಮಾಯಕನಾದ ಈತ ಸಾಲಕ್ಕಾಗಿ ತನ್ನ ಹಸ್ತಾಕ್ಷರ ಹಾಕಿದರೆ, ಆ ವಂಚಕರು ಆತನ ಆಸ್ತಿಯನ್ನೇ ತಮ್ಮ ಹೆಸರಿಗೆ ದಾನವಾಗಿ ಕೊಟ್ಟ ಪತ್ರಕ್ಕೆ ಸಹಿ ಹಾಕಿಸಿಕೊಂಡದ್ದು ಕಾಡುಮಲ್ಲಯ್ಯನಿಗೆ ಆನಂತರವಷ್ಟೇ ತಿಳಿದಿದೆ.
ಇತ್ತ ಆಸ್ತಿ ಒಬ್ಬ ಮಗನಿಗೆ ದಾನವಾಗಿರುವ ವಿಷಯ ತಿಳಿದದ್ದೇ ತಡ ಕಾಡುಮಲ್ಲಯ್ಯನ ಇನ್ನಿಬ್ಬರು ಮಕ್ಕಳು ವೃದ್ದ ದಂಪತಿಗಳಿಬ್ಬರನ್ನು ಬೀದಿಗೆ ತಳ್ಳಿದ್ದಾರೆ. ತಾವೇ ಕಟ್ಟಿಸಿದ ಮನೆಯಲ್ಲಿ ತನಗೇ ಜಾಗ ನೀಡದೆ ಮನೆಯಿಂದ ಹೊರಹಾಕಿರುವ ದಂಪತಿಗಳಿಗೆ ಈಗ ಮಾರಮ್ಮನ ಗುಡಿಯೇ ಸೂರು ನೀಡಿದೆ.
ಅತ್ತ ಆಸ್ತಿ ಬರೆಸಿಕೊಂಡ ಮಗ ತಮಗೆ ಕೈಕೊಟ್ಟರೆ, ಇತ್ತ ಆಸ್ತಿ ಸಿಗದ ಇನ್ನಿಬ್ಬರು ಮಕ್ಕಳು ನಮ್ಮ ಕೈಬಿಟ್ಟಿದ್ದಾರೆ ಎಂದು ಹೇಳುವಾಗ ಕಾಡುಮಲ್ಲಯ್ಯ, ಪುಟ್ಟಮ್ಮ ದಂಪತಿಗಳ ಕಣ್ಣುಗಳು ತೇವವಾಗುತ್ತವೆ. ಕಾಡುಮಲ್ಲಯ್ಯ ಕಣ್ಣು ಕಾಣದೆ ವೇದನೆ ಅನುಭವಿಸುತ್ತಿದ್ದರೆ, ಪುಟ್ಟಮ್ಮಗೆ ಯಾವುದೇ ಆಟೋ ಡಿಕ್ಕಿ ಹೊಡೆದ ಪರಿಣಾಮ ಒಂದು ಕೈ ಮುರಿದಿದೆ. ಇಂಥಹ ದಯನೀಯ ಸ್ಥಿತಿಯಲ್ಲಿ ಕಾಲದೂಡುತ್ತಿರುವ ಆ ವೃದ್ದ ದಂಪತಿಗಳನ್ನು ಸಲಹಬೇಕಾದ ಮಕ್ಕಳು, ತಮಗೂ ಅವರಿಗೂ ಯಾವುದೇ ಸಂಬಂಧವಿಲ್ಲದಂತೆ ಇದ್ದು, ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ್ದಾರೆ. ಮುಂದಾದರೂ ಈ ಮಕ್ಕಳು ತಮ್ಮ ತಪ್ಪನ್ನು ಮನಗಂಡು, ಜೀವನದ ಸೂರ್ಯಾಸ್ತದಲ್ಲಿರುವ ಆ ವೃದ್ದ ದಂಪತಿಗಳ ಆರೈಕೆ ಮಾಡಲಿ.












Click it and Unblock the Notifications