ಧಾರವಾಡ : 5.25 ಕೋಟಿ ರುಪಾಯಿ ನಷ್ಟ
ಧಾರವಾಡ, ಅ. 5 : ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 7836 ಮನೆಗಳು ಬಿದ್ದಿದ್ದು, ಆ ಪೈಕಿ 233 ಮನೆಗಳು ಸಂಪೂರ್ಣವಾಗಿ ನಾಶಗೊಂಡಿವೆ. ಇದರಿಂದಾಗಿ ಅಂದಾಜು 5.25 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ಹೇಳಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿ, ಈ ಧಾರವಾಡ ತಾಲೂಕಿನಲ್ಲಿ 664, ಹುಬ್ಬಳ್ಳಿ ತಾಲ್ಲೂಕಿನಲ್ಲಿ 1174, ಕಲಘಟಗಿ ತಾಲ್ಲೂಕಿನಲ್ಲಿ 210, ನವಲಗುಂದ ತಾಲ್ಲೂಕಿನಲ್ಲಿ 4879 ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ 908 ಮನೆಗಳು ಕುಸಿತಕ್ಕೊಳಗಾಗಿವೆ ಎಂದರು.
ಧಾರವಾಡ ಜಿಲ್ಲೆಯಲ್ಲಿ ಸುರಿತ ಧಾರಾಕಾರ ಮಳೆಯಿಂದಾಗಿ ಈ ಪ್ರದೇಶದ ಮುಖ್ಯ ತೋಟಗಾರಿಕಾ ಬೆಳೆಗಳಾದ ಮೆಣಸಿನಕಾಯಿ 9800 ಹೆಕ್ಟೇರ್ ಹಾಗೂ ಈರುಳ್ಳಿ 15000 ಹೆ. ಗಳಷ್ಟು ಹಾನಿಗೊಳಗಾಗಿದ್ದು, ಸುಮಾರು 23 ಕೋಟಿಗಳಷ್ಟು ಅಂದಾಜು ಮೊತ್ತದ ಬೆಳೆ ನಾಶಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಲ್ಲದೆ ಸುಮಾರು 7 ಕೋಟಿ ರೂ.ಗಳಷ್ಟು ಕೆರೆ, ಸೇತುವೆ ಮತ್ತು ರಸ್ತೆ ಸೇರಿದಂತೆ ಸಾರ್ವಜನಿಕ ಆಸ್ತಿ ಹಾನಿಯಾಗಿದೆ ಎಂದು ಹೇಳಿದರು. ಸತತ ಮಳೆಯಿಂದಾಗಿ ಕುಂದಗೋಳ ತಾಲ್ಲೂಕಿನಲ್ಲಿ 40 ದನ- ಕರುಗಳು ಹಾಗೂ ನವಲಗುಂದ ತಾಲ್ಲೂಕಿನಲ್ಲಿ 33 ಕುರಿಗಳು, 1 ಎತ್ತು ಮತ್ತು 2 ಎಮ್ಮೆ ಅಸು ನೀಗಿವೆ ಎಂದು ಹೇಳಿದ ಅವರು ಧಾರವಾಡ ತಾಲ್ಲೂಕಿನ ಪಡಕೋಡ ಹಾಗೂ ಕಲಘಟಗಿ ತಾಲ್ಲೂಕಿನ ಬಿಸರುವಳ್ಳಿ ಗ್ರಾಮದ ಕೆರೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಕೆರೆಯ ಹೆಚ್ಚುವರಿ ನೀರನ್ನು ಬಿಡಲಾಗಿದ್ದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ನವಲಗುಂದ ತಾಲ್ಲೂಕಿನ ಬಾಧಿತ ಗ್ರಾಮಗಳ ಸಂತ್ರಸ್ತರಿಗೆ ಜಿಲ್ಲಾಡಳಿತ ನಿನ್ನೆ ಮತ್ತು ಇಂದು ಬಿಸಿಯೂಟದ ಸರಬರಾಜು ಮಾಡಿದ್ದು ಸುಮಾರು 10,000 ಜನರು ಇದರ ಪ್ರಯೋಜನ ಪಡೆದಿದ್ದಾರೆ. ಇಂದು ಹೆಚ್ಚಿನ ಬೇಡಿಕೆಯನುಸಾರ 3500 ಜನರಿಗೆ ಊಟ ಒದಗಿಸಲಾಗುತ್ತಿದೆ ಎಂದರು. ಈ ಊಟವನ್ನು ವ್ಯವಸ್ಥಿತವಾಗಿ ವಿತರಿಸಲು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಮಳೆಯಿಂದ ಬಿದ್ದ ಮನೆಗಳ ಸಮೀಕ್ಷೆಗಾಗಿ ಆಯಾ ತಾಲ್ಲೂಕುಗಳಲ್ಲಿ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications