'ಶಕ್ತಿವಂತ' ಆಯುಕ್ತ ಧರ್ಮಪ್ಪ ಲೋಕಾಯುಕ್ತ ಬಲೆಗೆ

ರಾಜ್ಯ ಇಂಧನ ಸಚಿವ ಕೆ.ಎಸ್. ಈಶ್ವರಪ್ಪನವರ ಸಮೀಪವರ್ತಿಯಾಗಿದ್ದ ಕೆ.ಎಂ. ಧರ್ಮಪ್ಪ ಶಿವಮೊಗ್ಗದ ನಗರಸಭೆಯಲ್ಲಿದ್ದಷ್ಟು ದಿನ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದರು. ಇದೀಗ ಮತ್ತೆ ಧರ್ಮಪ್ಪ ರಾಜ್ಯದಾದ್ಯಂತ ಅಕ್ರಮ ಆಸ್ತಿ ಗಳಿಕೆಯ ಮೂಲಕ ಸುದ್ದಿ ಮಾಡಿದ್ದಾರೆ. ಇಂದು ಬೆಳಿಗಿನ ಜಾವ 4.30ರ ಸುಮಾರಿಗೆ ರಾಜ್ಯ ಲೋಕಾಯುಕ್ತ ತಂಡವೊಂದು ಶಿವಮೊಗ್ಗದ ಬಸವೇಶ್ವರ ನಗರದಲ್ಲಿರುವ ಸುಮಾರು 1.5 ಕೋಟಿ ರೂ. ಮೌಲ್ಯದ ಬಂಗಲೆ, ವಿನೋಬನಗರದಲ್ಲಿರುವ 20 ಲಕ್ಷ ರೂ.ಗಳಿಗಿಂತ ಅಧಿಕ ಮೌಲ್ಯದ ಬಂಗಲೆ, ಸಂತೆಕಡೂರಿನಲ್ಲಿ ಸುಮಾರು 70 ಲಕ್ಷ ರೂ. ಮೌಲ್ಯದ 6 ಎಕರೆ ತೋಟ, ಈ ತೋಟದಿಂದ ಕಳೆದ 4 ವರ್ಷಗಳಲ್ಲಿ ಬಂದ 2800 ಮರಗಳ ಫಸಲು ಮೌಲ್ಯದ ಅಂದಾಜು 25 ಲಕ್ಷಗಳಷ್ಟು ಅಕ್ರಮ ಆಸ್ತಿಯನ್ನು ಲೋಕಾಯುಕ್ತ ಜಪ್ತಿ ಮಾಡಿಕೊಂಡಿದೆ.
ಇಂದು ಬೆಳಿಗ್ಗೆ ಲೋಕಾಯುಕ್ತ ತಂಡವು ಭ್ರಷ್ಟಾಚಾರ ವಿರೋಧಿ ಕಾಯ್ದೆ 1988 ಸೆಕ್ಷನ್ 13(1)(e) ಅಡಿಯಲ್ಲಿ ಕೆ.ಎಂ. ಧರ್ಮಪ್ಪರವರಿಗೆ ಸೇರಿದ ಬಸವೇಶ್ವರ ನಗರದ ಮನೆ, ಸಂತೆಕಡೂರಿನ 6 ಎಕರೆ ಅಡಿಕೆ ತೋಟ, ತೋಟದ ಮನೆ, ವಿನೋಬನಗರದ ಬಂಗಲೆ ಮೇಲೆ ಏಕ ಕಾಲದಲ್ಲಿ ದಾಳಿ ಮಾಡಿತು. ಈ ದಾಳಿಯ ಮುನ್ಸೂಚನೆಯನ್ನು ಪಡೆದಿದ್ದ ಕೆ.ಎಂ. ಧರ್ಮಪ್ಪ ಮನೆಯಲ್ಲಿದ್ದ ಅಮೂಲ್ಯ ದಾಖಲೆಗಳನ್ನು ಹಾಳುಗೆಡವಿದ ಪ್ರಸಂಗವೂ ನಡೆದಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ನಗರಸಭೆಯಲ್ಲಿ;

ಕೆ.ಎಸ್. ಈಶ್ವರಪ್ಪನವರ ಪ್ರಭಾವಳಿ ಇದ್ದುದ್ದರಿಂದ ಹಾಗೂ ಸ್ವತಃ ಕುರುಬ ಜನಾಂಗಕ್ಕೆ ಸೇರಿದ್ದ ಕೆ.ಎಂ. ಧರ್ಮಪ್ಪ ಅಕ್ರಮ ಆಸ್ತಿ ಮಾಡುವುದರಲ್ಲಿ ಶಿವಮೊಗ್ಗ ನಗರಸಭೆಯಲ್ಲಿ ದಾಖಲೆ ಮಾಡಿದ್ದರು. ನಂತರದಲ್ಲಿ ತಮಗೇ ಬೇಸರವಾಗಿ ಕೆ.ಎಸ್. ಈಶ್ವರಪ್ಪನವರ ಯಥಾ ಪ್ರಭಾವಳಿಯನ್ನು ಬಳಸಿ, ಭದ್ರಾವತಿ ನಗರಸಭೆಗೆ ಆಯುಕ್ತರಾಗಿ ವರ್ಗಮಾಡಿಸಿಕೊಂಡಿದ್ದರು.
2001ರ ಅಕ್ಟೋಬರ್ 1ರಿಂದ 2004ರ ಮಾ.3ರವರೆಗೆ ಅಲ್ಲಿ ಆಯುಕ್ತರಾಗಿ ದರ್ಬಾರು ಮಾಡಿದ ಕೆ.ಎಂ. ಧರ್ಮಪ್ಪ, ಸ್ಥಳೀಯ ಶಾಸಕ ಸಂಗಮೇಶ್ ಪ್ರಭಾವಳಿಯನ್ನು ಬಳಸಿಕೊಂಡು 2004ರ ಡಿ.16ರಿಂದ 2006ರ ಜೂನ್ 6ರವರೆಗೆ ಮತ್ತೆ ಆಯುಕ್ತರಾಗಿ ಮುಂದುವರೆದಿದ್ದರು. ಶಿವಮೊಗ್ಗದ ನಂತರದಲ್ಲಿ ಭದ್ರಾವತಿಯನ್ನು ಕೊಳ್ಳೆ ಹೊಡೆದ ಇಬ್ಬರು ಹೆಂಡಿರ ಮುದ್ದಿನ ಗಂಡ ಕೆ.ಎಂ. ಧರ್ಮಪ್ಪ ತಮ್ಮ ಕುಟುಂಬದ ಕಿರಿಕಿರಿಯಿಂದ ಬೇಸತ್ತು ತಮ್ಮ ಆಪ್ತ ಬಳಗದಲ್ಲಿದ್ದ ಶಾಸಕ ಬಿ.ಕೆ. ಸಂಗಮೇಶ್ ಸಹಕಾರದಿಂದ ಹಾಸನ ನಗರಸಭೆಗೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಮತ್ತೆ ಹಳೆಯ ಚಾಳಿಯನ್ನು ಮುಂದುವರೆಸಿದ ಕೆ.ಎಂ.ಧರ್ಮಪ್ಪ, ಮಾತಿನಂತೆ ಬಿ.ಕೆ. ಸಂಗಮೇಶ್ ರವರಿಗೆ ವರ್ಗಾವಣೆ ಹಣ ನೀಡಲಿಲ್ಲವೆಂಬ ಕಾರಣಕ್ಕಾಗಿ ಈಗ ಲೋಕಾಯುಕ್ತ ಬಲೆಗೆ ಬೀಳುವಂತಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಆರಂಭವಾಗಿವೆ.
ಅವತ್ತೇ ಬೀಳಬೇಕಿತ್ತು ಬಲೆಗೆ...
ಶಿವಮೊಗ್ಗದ ನಗರಸಭೆಯಲ್ಲಿ ಕೆ.ಎಂ.ಧರ್ಮಪ್ಪ ಆಯುಕ್ತರಾಗಿದ್ದ ಸಂದರ್ಭ. ಈ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದವರು ಎನ್.ವೆಂಕಟಾಚಲ. ಶಿವಮೊಗ್ಗದ ಹಲವು ಸರ್ಕಾರಿ ಇಲಾಖೆಗಳ ಮೇಲೆ ಇವರ ನೇತೃತ್ವದಲ್ಲಿ ಲೋಕಾಯುಕ್ತ ಭೇಟಿ ನಡೆಯಬೇಕಿತ್ತು. ಈ ಭೇಟಿಗಳಲ್ಲಿ ಮುಖ್ಯವಾಗಿ ಕೇಳಿಬಂದ ಹೆಸರು ಶಿವಮೊಗ್ಗ ನಗರಸಭೆ.
ಆದರೆ, ಶಿವಮೊಗ್ಗ ನಗರಸಭೆಯ ಮೇಲೆ ಯಾವುದೇ ಲೋಕಾಯುಕ್ತರು ಕಣ್ಣೆತ್ತಿಯೂ ನೋಡದಂತಹ ಪರಿಸ್ಥಿತಿ ಬಂದೊದಗಿತು. ನ್ಯಾಯಮೂರ್ತಿ ಎನ್.ವೆಂಕಟಾಚಲರವರ ತಂಡ ಈ ನಗರಸಭೆಯತ್ತ ಮುಖ ಮಾಡದೆ ತಮ್ಮ ದಿಕ್ಕನ್ನು ಮತ್ತೊಂದು ಸರ್ಕಾರಿ ಇಲಾಖೆಯ ಮೇಲೆ ಹಾಕಿತು. ಅಂದು ಏನಾದರೂ ಲೋಕಾಯುಕ್ತ ಮುಖ್ಯಸ್ಥರಾಗಿದ್ದ ವೆಂಕಟಾಚಲರವರು ಶಿವಮೊಗ್ಗ ನಗರಸಭೆಯ ಮೇಲೆ ನುಗ್ಗಿ ಹೋಗಿದ್ದರೆ ಕೆ.ಎಂ.ಧರ್ಮಪ್ಪ ಎಂಬ ಆಯುಕ್ತ ಅಂದಿನ ದಿನವೇ ಬಲೆಗೆ ಬಿದ್ದಿರುತ್ತಿದ್ದ. ಆದರೆ, ಆತನ ಅದೃಷ್ಟ ಇಂದು ಬೆಳಿಗ್ಗೆಯವರೆಗೆ ಕೈಕೊಟ್ಟಿರಲಿಲ್ಲ. ಕೊನೆಗೂ ಕೆ.ಎಂ.ಧರ್ಮಪ್ಪ ಬಲೆಗೆ ಬಿದ್ದಿದ್ದಾರೆ.
ದಾಖಲೆಗಳ ನಾಶಪಡಿಸಿದ ಧರ್ಮಪ್ಪ
ಹಾಸನದ ನಗರಸಭೆಗೆ ಇತ್ತೀಚೆಗಷ್ಟೇ ಆಯುಕ್ತರಾಗಿ ವರ್ಗಾವಣೆಗೊಂಡಿದ್ದ ಕೆ.ಎಂ.ಧರ್ಮಪ್ಪರವರ ಮನೆಗಳ ಹಾಗೂ ತೋಟದ ಮೇಲೆ ಇಂದು ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದರು. ಈ ಸಂದರ್ಭದಲ್ಲಿ ಇದರ ಮುನ್ಸೂಚನೆ ಪಡೆದಿದ್ದ ಧರ್ಮಪ್ಪ, ತಮ್ಮ ಸಂಬಂಧಿಕರ ನೆರವಿನಿಂದ ಸಿಗಬಹುದಾಗಿದ್ದ ದಾಖಲೆಗಳನ್ನು ನಾಶಪಡಿಸಲು ಪ್ರಯತ್ನಿಸಿರುವ ದೃಶ್ಯ ಮನೆಯ ಸುತ್ತಮುತ್ತಲಲ್ಲಿ ಕಂಡುಬರುತ್ತದೆ. ದಾಳಿಗೊಳಗಾದ ಮನೆಯ ಸುತ್ತ ಧರ್ಮಪ್ಪ ತೆಗೆಸಿಕೊಂಡ ಹಲವು ಫೋಟೋಗಳ ತುಂಡುಗಳು, ದಾಖಲೆ ಪತ್ರಗಳ ಚೂರು ಚೂರು, ಮೊಬೈಲ್ ಫೋನ್‌ಗಳನ್ನು ನಾಶಪಡಿಸಲು ಪ್ರಯತ್ನಿಸಿದರೂ ಆ ಫೋನ್‌ಗಳ ಸಿಕ್ಕ ಕೆಲವೊಂದು ಭಾಗಗಳು... ಹೀಗೆ ಹಲವು ವಸ್ತುಗಳನ್ನು ಲೋಕಾಯುಕ್ತ ಪೊಲೀಸರು ಮನೆಗಳ ಸುತ್ತಮುತ್ತಲಿನಿಂದ ಸಂಗ್ರಹಿಸಿದ್ದಾರೆ. ಹಾಸನದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆ.ಎಂ.ಧರ್ಮಪ್ಪರವರ ಉಪಸ್ಥಿತಿಯಲ್ಲಿಯೇ ಬ್ಯಾಂಕ್‌ಗಳಲ್ಲಿರುವ ಲಾಕರ್‌ಗಳನ್ನು ತೆಗೆಯಬೇಕಾಗಿರುವುದರಿಂದ ಲೋಕಾಯುಕ್ತ ಪೊಲೀಸರು ನೇರವಾಗಿ ಧರ್ಮಪ್ಪರವರನ್ನೇ ಬಂಧಿಸಿ, ಶಿವಮೊಗ್ಗಕ್ಕೆ ಕರೆತರುತ್ತಿದ್ದು, ಸಂಜೆಯೊಳಗೆ ಸಂಪೂರ್ಣ ಚಿತ್ರಣ ದೊರೆಯಲಿದೆ.












Click it and Unblock the Notifications