ಯಡಿಯೂರಪ್ಪ ರಾಜೀನಾಮೆಗೆ ಜೆಡಿಎಸ್ ಆಗ್ರಹ

ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಜೆಡಿಎಸ್ ಶಾಸಕಾಂಗ ನಾಯಕ ಎಚ್ ಡಿ ರೇವಣ್ಣ ಕಲ್ಲಿದ್ದಲು ಖರೀದಿ ಅವ್ಯವಹಾರದ ಬಗ್ಗೆ ಪೂರ್ವಭಾವಿ ಪ್ರಸ್ತಾಪ ಮಾಡಿದರು. ರೇವಣ್ಣ ಅವರ ಪೂರ್ವಭಾವಿ ಪ್ರಸ್ತಾಪ ಮುಗಿಸುವ ಮುನ್ನವೇ ಆಡಳಿತ ಪಕ್ಷದಿಂದ ಅಡ್ಡಿ ಎದುರಾಯಿತು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾರ ವಿವಾದವಾಗಿ ಸದನದಲ್ಲಿ ಗದ್ದಲ ಉಂಟಾಯಿತು. ಆಗ ಸಭಾಧ್ಯಕ್ಷರು ನಿಲುವಳಿ ಸೂಚನೆ ಪ್ರಸ್ತಾವನೆಯನ್ನು ನಿಯಮ 69ಕ್ಕೆ ವರ್ಗಾಯಿಸಿ ಭೋಜನ ವಿರಾಮದ ನಂತರ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರು.
ಪೂರ್ವಭಾವಿ ಪ್ರಸ್ತಾಪ ಇನ್ನು ಮುಗಿದಿಲ್ಲ. ಅವಕಾಶ ನೀಡಬೇಕು ಎಂದು ಜೆಡಿಎಸ್ ಸದಸ್ಯರು ರೇವಣ್ಣ ನೇತೃತ್ವದಲ್ಲಿ ಸಭಾಧ್ಯಕ್ಷರ ಪೀಠದ ಬಾವಿಗಿಳಿದು ಧರಣಿ ನಡೆಸಿದರು. ಈ ಹಂತದಲ್ಲಿ ಆಡಳಿತ ಮತ್ತು ಜೆಡಿಎಸ್ ಸದಸ್ಯರ ನಡುವೆ ಪರಸ್ಪರ ಘೋಷಣೆ, ಆರೋಪ ಪ್ರತ್ಯಾರೋಪ ನಡೆದವು. ಆಗ ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಸದನವನ್ನು ಕೆಲ ಕಾಲ ಮುಂದೂಡಿದರು.
ವಿಷಯ ಪ್ರಸ್ತಾಪಿಸಿದ ರೇವಣ್ಣ, ಬಾಟಿಯಾ ಕಂಪನಿ ಕಾನೂನು ಬಾಹಿರವಾಗಿ ಟೆಂಡರ್ ನೀಡಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿದೆ. ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ಆಮದು ಕಲ್ಲಿದ್ದಲು ಸರಿ ಹೊಂದುವುದಿಲ್ಲ. ಹೀಗಿದ್ದರೂ 12 ಲಕ್ಷ ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗಿದೆ. ಪ್ರತಿ ಟನ್ ಕಲ್ಲಿದ್ದಲು ದರ 5 ಸಾವಿರ ರುಪಾಯಿ ಇಳಿದಿದ್ದರೂ ಬಾಟಿಯಾ ಕಂಪನಿಗೆ ಅಗತ್ಯಕ್ಕಿಂತ ಹೆಚ್ಚು ಕಲ್ಲಿದ್ದಲು ಪೂರೈಸಲು ಪ್ರತಿ ಟನ್ ಗೆ 7,899 ರುಪಾಯಿ ಟೆಂಡರ್ ನೀಡಲಾಗಿದೆ. ಇದರಿಂದ ಪ್ರತಿ ಟನ್ ಕಲ್ಲಿದ್ದಲುಗೆ 899 ರುಪಾಯಿ ಹೆಚ್ಚುವರಿ ಪಾವತಿಸಿದ್ದು, ವಿದ್ಯುತ್ ನಿಗಮಕ್ಕೆ ಭಾರಿ ನಷ್ಟವಾಗಿದೆ.
ಸೋಮವಾರ ನಿಲುವಳಿ ಸೂಚನೆ ಪ್ರಸ್ತಾವ ಮಾಡುವ ಮುನ್ನವೇ 2002-09ರ ವರೆಗೆ ಕಲ್ಲಿದ್ದಲು ಹರಗಣದ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಮಾಡಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ, ಎಂಎಂಟಿಸಿಯಿಂದ ಕಲ್ಲಿದ್ದಲು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಏಕ ಸದಸ್ಯಪೀಠ ತೀರ್ಪು ನೀಡಿದ್ದು, ಕಾನೂನು ಬಾಹಿರವಾಗಿ ಅಗತ್ಯಕ್ಕಿಂತ ಹೆಚ್ಚು ಕಲ್ಲಿದ್ದಲು ಖರೀದಿ ಮಾಡಿರುವುದನ್ನು ಉಲ್ಲೇಖಿಸಿದೆ. ಕಲ್ಲಿದ್ದಲು ಖರೀದಿಗೆ ಮುಖ್ಯಮಂತ್ರಿಯವರ ಪತ್ರದ ಹೊರತಾಗಿ ಬೇರೆ ಕಾರಣಗಳಿಲ್ಲ. ಇದರಿಂದ ಖರೀದಿ ವ್ಯವಹಾರ ತಪ್ಪು ಎಂಬ ತೀರ್ಪು ನೀಡಿದೆ. ಹೀಗಿದ್ದಾಗ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸುವ ಅಗತ್ಯವಿದೆಯೇ ಎಂದು ರೇವಣ್ಣ ಪ್ರಶ್ನಿಸಿದರು. ನೂರಾರು ಕೋಟಿ ರುಪಾಯಿಗಳ ಕಲ್ಲಿದ್ದಲು ಹಗರಣದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಅವರು ಪಟ್ಟಪ ಹಿಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications