ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂದಿಗೆ ಹಂದಿಜ್ವರ, ಹಂದಿ ಉದ್ಯಮಕ್ಕೆ ಬರೆ!

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

Pig industry in Ramanagar district
ರಾಮನಗರ, ಸೆ. 15 : ಎಚ್1ಎನ್1 ಸೋಂಕು ರಾಜ್ಯವ್ಯಾಪಿ ಹರಡಿ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿಗಿಂತ ರೋಗ ಕುರಿತ ಹೆದರಿಕೆಯೇ ಜನರನ್ನು ಮತ್ತಷ್ಟು ಹಣ್ಣುನೀರು ಮಾಡಿದೆ. ಸೋಂಕಿನಿಂದ ಜನ ಬಲಿಯಾಗುತ್ತಿರುವುದು ಒಂದೆಡೆಯಾದರೆ ಈ ರೋಗವನ್ನು ಹಂದಿಜ್ವರ ಎಂದು ಹೆಸರಿರುವುದರಿಂದ ಹಂದಿ(ವರಾಹ) ಉದ್ಯಮಕ್ಕೆ ಬೇಡಿಕೆ ಇಲ್ಲದೇ ಬಾರೀ ಹೊಡೆತ ಬಿದ್ದಿದೆ.

ಎಚ್1ಎನ್1 ರೋಗಕ್ಕೂ ಹಂದಿಗೂ ಯಾವ ಸಂಬಂಧವಿಲ್ಲದಿದ್ದರೂ ಜನರಿಗೆ ತಿಳಿವಳಿಕೆ ಹೇಳದ್ದರಿಂದ ಹಂದಿ ವ್ಯಾಪಾರಿಗಳು ತತ್ತರಿಸುತ್ತಿದ್ದಾರೆ. ಪೂರ್ವಿಕರ ಕಾಲದಿಂದಲೂ ಹಂದಿ ಸಾಕಾಣಿಕೆ ಮಾರಾಟವನ್ನೇ ಅವಲಂಬಿಸಿರುವ ಹಂದಿಜೋಗ ಜನಾಂಗ ಹಂದಿ ಕೊಳ್ಳುವವರಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಂದಿ ಸಾಕಾಣಿಕೆಯನ್ನ ಉದ್ಯಮವನ್ನಾಗಿಸಿಕೊಂಡು ಲಕ್ಷಾಂತರ ಬಂಡವಾಳ ಹೂಡಿರುವವರು ಕೂಡ ಬೇಡಿಕೆಯಿಲ್ಲದೇ ಕೊರಗುತ್ತಿದ್ದಾರೆ. ಬದುಕಿಗೆ ಆಧಾರವಾಗಿದ್ದ ಹಂದಿ ಸಾಕಾಣಿಕೆ ಉದ್ಯಮದ ಮಂದಿಯ ಮೇಲೆ ಕರಿನೆರಳು ಆವರಿಸಿದೆ.

ರಾಮನಗರ ಜಿಲ್ಲೆಯ ಬಿಡದಿಯ ಜೋಗಿದೊಡ್ಡಿ, ಹಾರೋಹಳ್ಳಿ ಮತ್ತಿತರೆಡೆಗಳಲ್ಲಿ ಪೂರ್ವಿಕರ ಕಾಲದಿಂದಲೂ ಹಂದಿ ಸಾಕಾಣಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿರುವ ಹಲವಾರು ಕುಟುಂಬಗಳಿವೆ. ಮತ್ತು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಬಾಂಧವರು ಕೂಡ ಹಂದಿ ಸಾಕಾಣಿಕೆಯನ್ನ ಉದ್ಯಮವನ್ನಾಗಿಸಿಕೊಂಡು ಬದುಕಿಗೆ ಆಧಾರ ಮಾಡಿಕೊಂಡಿರುವ ಕೆಲವು ಮಂದಿ ಇದ್ದಾರೆ. ಎಚ್1ಎನ್1ಗೆ ಹಂದಿಜ್ವರ ಎಂಬ ಹೆಸರಿನಿಂದ ಕರೆಯುತ್ತಿರುವುದರಿಂದ ಹಂದಿಮಾಂಸಾಹಾರ ಸೇವನೆಯಿಂದ ಹಂದಿಜ್ವರದ ಸೋಂಕು ತಗುಲಬಹುದೆಂಬ ತಪ್ಪುಗ್ರಹಿಕೆಯಿಂದ ಹಂದಿಯನ್ನ ಕೊಳ್ಳುವವರೇ ಇಲ್ಲದಂತಾಗಿದೆ.

ಮೊದಲಿಗೆ ದಿನಪ್ರತಿ ಸಾವಿರಾರು ಹಂದಿಗಳು ಹೊರರಾಜ್ಯಗಳಿಗೆ ರಫ್ತಾಗುತ್ತಿದ್ದವು ಮತ್ತು ಮಳಿಗೆಗಳಲ್ಲಿ ಮಾರಾಟವಾಗುತ್ತಿದ್ದವು. ಆದರೆ ಹಂದಿಜ್ವರದ ಸೋಂಕು ತಗುಲಿದ ನಂತರ ಹಂದಿಗಳಿಗೆ ಬೇಡಿಕೆಯಿಲ್ಲದಂತಾಗಿ ಸಾಲಸೋಲ ಮಾಡಿ ಹಂದಿಮಾರಾಟ ಮತ್ತು ಸಾಕಾಣಿಕೆಯನ್ನ ಬದುಕಾಗಿಸಿಕೊಂಡಿದ್ದ ಮಂದಿಗೆ ಸಾಲಕಟ್ಟಲಾಗದ ಪರಿಸ್ಥಿತಿ ಎದುರಾಗಿದೆ. ಎತ್ತಿಗೆ ಜ್ವರಬಂದರೆ ಎಮ್ಮೆಗೆ ಬರೆಹಾಕಿದರೆಂಬಂತೆ ಹಂದಿಜ್ವರ ಬಂದಿದ್ದಕ್ಕೆ ಹಂದಿಯನ್ನ ಕೊಳ್ಳುವವರೇ ಇಲ್ಲದಂತಾಗಿದೆ ಎಂದು ವರಾಹ ಕೋ-ಆಪ್‌ರೇಟಿವ್ ಸೊಸೈಟಿಯ ಅಧ್ಯಕ್ಷ ರಾಮಕೃಷ್ಣಯ್ಯ ಹೇಳುತ್ತಾರೆ.

ಆದಾಯದ ದೃಷ್ಟಿಯಿಂದ ಹಂದಿ ಸಾಕಾಣಿಕೆಯನ್ನೇ ಉದ್ಯಮವನ್ನಾಗಿಸಿಕೊಂಡಿದ್ದ ಹಲವಾರು ಮಂದಿ ಅಮೇರಿಕಾ ಮತ್ತು ಇಂಗ್ಲೆಂಡ್ ದೇಶದ ತಳಿಗಳಾದ ಯಾರ್ಕ್‌ಶೈರ್ ಮತ್ತು ಜಿರಾಕ್ ತಳಿಗಳ ಹಂದಿಯನ್ನ ಹೆಚ್ಚಾಗಿ ಸಾಕಾಣಿಕೆ ಮಾಡುತ್ತಿದ್ದರು. ತಲಾ ಒಂದು ಹಂದಿ ಕನಿಷ್ಠ 120 ಕೆ.ಜಿ.ಯಿಂದ 500 ಕಿಲೋಗ್ರಾಂವರೆಗೆ ತೂಗುತ್ತದೆ.

ಸುಮಾರು 2 ಸಾವಿರ ಹಂದಿಗಳ ಸಾಕಾಣಿಕೆ ಮಾಡಲು ಬ್ಯಾಂಕ್‌ನಿಂದ ಸಾಲ ಪಡೆದು ದೊಡ್ಡಫಾರಂಹೌಸ್ ನಿರ್ಮಾಣ ಮಾಡಿ ದಿನವೊಂದಕ್ಕೆ 10 ಸಾವಿರ ರೂಪಾಯಿ ಹಣ ವೆಚ್ಚ ಮಾಡಿ ಹಂದಿಗಳ ಸಾಕಾಣಿಕೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಹೊರರಾಜ್ಯಗಳಿಗೆಲ್ಲ ದಷ್ಟಪುಷ್ಟವಾಗಿ ಬೆಳೆದ ಹಂದಿಗಳನ್ನ ರಫ್ತು ಮಾಡಿ ಲಾಭಪಡೆದುಕೊಳ್ಳುತ್ತಿದ್ದರು. ಆದರೆ ಈಗ ಎಚ್1ಎನ್1 ಹೆಮ್ಮಾರಿಯಿಂದ ಹಂದಿ ಸಾಕಾಣಿಕೆ ಉದ್ಯಮದ ಮೇಲೆ ದೊಡ್ಡಹೊಡೆತ ಬಿದ್ದಿದೆ. ಕಡಿಮೆ ವೆಚ್ಚಕ್ಕೆ ಹಂದಿಗಳನ್ನ ನೀಡಲು ಹಂದಿಸಾಕಾಣಿಕೆದಾರರು ಮುಂದಾದರೂ ಕೊಳ್ಳುವವರು ಮುಂದೆಬರದಂತಾಗಿದೆ ಎಂದು ಮೆಟ್ರೋಫಾರಂ ಹೌಸ್‌ನ ಮಾಲೀಕ ಮೆಲ್ವಿನ್ ಲೂಯಿಸ್ ಹೇಳುತ್ತಾರೆ.

ಹಂದಿ ಸಾಕಾಣಿಕೆ ಫಾರಂಗಳಲ್ಲಿ ಮುಸಲ್ಮಾನ್ ಕುಟುಂಬಗಳು ಕೂಡ ಕಾರ್ಯನಿರ್ವಹಿಸುತ್ತಾ ಬದುಕಿನ ಬಂಡಿತಳ್ಳುತ್ತಿದ್ದಾರೆ. ಹಲವಾರು ವರ್ಷಗಳಿಂದ ಹಂದಿ ಸಾಕಾಣಿಕೆಯನ್ನೇ ಕಾಯಕ ಮಾಡಿಕೊಂಡಿರುವ ಇವರುಗಳ ಕುಟುಂಬದ ಸದಸ್ಯರಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಸೋಂಕುರೋಗಗಳು ತಗುಲದೇ ಆರೋಗ್ಯಕರವಾಗಿದ್ದಾರೆ. ಮಾಲೀಕರು ನೀಡುವ ಕೂಲಿಗೆ ಪ್ರಾಮಾಣಿಕವಾಗಿ ಹಂದಿಗಳ ಕುಶಲೋಪರಿಯನ್ನ ನೋಡಿಕೊಳ್ಳುವುದರಲ್ಲೇ ಮುಸಲ್ಮಾನ್‌ಯುವಕ ಸಯ್ಯದ್ ಮತ್ತು ಕುಟುಂಬ ಕಾಲತಳ್ಳುತ್ತಿದೆ.

ಪೂರ್ವಿಕರ ಕಾಲದಿಂದಲೂ ಹಂದಿಜೋಗರ ಸಮುದಾಯ ಹಂದಿ ಸಾಕಾಣಿಕೆಯನ್ನೇ ಅವಲಂಬಿಸಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಇಂದಿಗೂ ಕೂಡ ಹಂದಿಜೋಗಿ ಜನಾಂಗ ಹಂದಿ ಸಾಕಾಣಿಕೆ ಮತ್ತು ಮಾರಾಟವನ್ನೇ ಅವಲಂಬಿಸಿದ್ದಾರೆ. ಹಂದಿಜೋಗಿ ಸಮುದಾಯದ ಮಂದಿ ರಾಜ್ಯಾದ್ಯಾಂತ ಸುಮಾರು 10 ಲಕ್ಷಮಂದಿ ಇದ್ದಾರೆ, ಹೆಚ್ಚಾಗಿ ಇವರೆಲ್ಲರೂ ವರಾಹವನ್ನೇ ನಂಬಿದ್ದಾರೆ. ಉದ್ಯಮಕ್ಕೆ ಹೊಡೆತ ಬಿದ್ದಿರುವುದರಿಂದ ಹಂದಿಜೋಗಿ ಮಂದಿಯ ಜೋಳಿಗೆಗೇ ತೂತು ಬಿದ್ದಂತಾಗಿದೆ. ಈ ಜನಾಂಗದವರು ಆರ್ಥಿಕವಾಗಿಯೂ ಹಿಂದುಳಿದವರಾಗಿದ್ದಾರೆ.

ಹಂದಿಯಿಂದಲೇ ಹಂದಿಜ್ವರ ಬರುತ್ತಿದೆ ಎಂಬ ತಪ್ಪುಗ್ರಹಿಕೆಯಿಂದ ಹಂದಿಗೆ ವಿಷವುಣಿಸಿ ಸಾಯಿಸುತ್ತಿರುವುದರಿಂದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದಂತಾಗಿದೆ. ಹಂದಿಯಿಂದ ಹಂದಿಜ್ವರ ಬರುವುದಿಲ್ಲವೆಂದು ವಿಶ್ವಸಂಸ್ಥೆಯೇ ಹೇಳಿದ್ದರೂ ನಮ್ಮಲ್ಲಿ ಮಾತ್ರ ತಿಳಿವಳಿಕೆ ಮೂಡಿಲ್ಲದಿರುವುದರಿಂದ ಹಂದಿಗಳ ಬೇಡಿಕೆ ಕಡಿಮೆಯಾಗಿದೆ ಎಂಬುದು ಅಖಿಲ ಕರ್ನಾಟಕ ಹಂದಿಜೋಗರ ಸಂಘದ ರಾಜ್ಯಾಧ್ಯಕ್ಷ ಪಾಪಣ್ಣನವರು ಹೇಳುತ್ತಾರೆ.

ಒಟ್ಟಾರೆ ಹಂದಿಜ್ವರದಿಂದ ದೇಶಾದ್ಯಾಂತ ಜನತೆಯ ನೆಮ್ಮದಿ ಕೆಡಿಸಿದೆ ಇನ್ನೊಂದೆಡೆ ಹಂದಿಜೋಗರ ಬದುಕಿಗೆ ಮಾರ್ಗವಾಗಿದ್ದ ಹಂದಿ ಮಾರಾಟ ಮತ್ತು ಸಾಕಾಣಿಕೆ ಉದ್ಯಮದ ಮೇಲೂ ಹಂದಿಜ್ವರ ತನ್ನ ಪ್ರಭಾವ ಬೀರಿದೆ. ಮುಖ್ಯಮಂತ್ರಿಗಳಿಗೆ ಸಂಬಂಧಪಟ್ಟ ಇಲಾಖೆಗೆ ಈಗಾಗಲೇ ಹಂದಿಜೋಗರ ಸಂಘ ಹಂದಿಜ್ವರದ ಬಗ್ಗೆ ಇರುವ ತಪ್ಪುತಿಳಿವಳಿಕೆಯ ಹೋಗಲಾಡಿಸಿ ಹಂದಿ ಉದ್ಯಮಕ್ಕೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದ್ದಾರೆ. ಕೂರೆಗೆ ಹೆದರಿ ಕಂಬಳಿ ಬಿಸಾಕಿದ ಹಾಗೇ ಹಂದಿಜ್ವರಕ್ಕೆ ಹೆದರಿ ಹಂದಿ ಕೊಳ್ಳುವವರಿಲ್ಲದಂತಾಗಿದೆ ಎಂಬಂತಾಗಿದೆ. ಇದರಿಂದ ಇದನ್ನೇ ನಂಬಿ ಜೀವನದೂಡುತ್ತಿದ್ದ ಮಂದಿ ಕಂಗಾಲಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X