ತಾಳಿಕೋಟಿ :ವಾಲಿಬಾಲ್ ಟೂರ್ನಿ ಮೈಸೂರು ವಿಜಯ

ಬಾಲಕಿಯರ ಅಂತಿಮ ಪಂದ್ಯದ ಸೆಣಸಾಟದಲ್ಲಿ ಮೈಸೂರು ಜಿಲ್ಲಾ ತಂಡ ಮಂಗಳೂರು ಜಿಲ್ಲಾ ತಂಡವನ್ನು 3-0 ನೇರ ಸೆಟ್ಟುಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಆಯಿತು. ಅದೇ ರೀತಿ ಬೆಂಗಳೂರು ಉತ್ತರ ಜಿಲ್ಲೆಯ ತಂಡ ಬೆಂಗಳೂರು ದಕ್ಷಿಣ ಜಿಲ್ಲಾ ತಂಡವನ್ನು 3-1 ರಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.
ತಾಳಿಕೋಟಿಗೂ ವಾಲಿಬಾಲ್ ಕ್ರೀಡೆಗೂ ಒಂದು ನಿಕಟವಾದ ಸಂಬಂಧವಿದೆ, ಅನುಬಂಧವಿದೆ. 1979 ರಲ್ಲಿಯೇ ಸ್ಥಳಿಯ ಯುತ್ ಸ್ಪೋರ್ಟ್ಸ್ ಕ್ಲಬ್ ರಾಜ್ಯ ಮಟ್ಟದ ಅಂತರ್ ರಾಜ್ಯಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಏರ್ಪಡಿಸಿ ಜನರಲ್ಲಿ ಅಭಿರುಚಿ ಹುಟ್ಟಿಸಿತು, ಯುವಕರ ಉತ್ಸಾಹ ತುಂಬಿತು. ಸತತ ಎಂಟು ವರ್ಷಗಳ ವರೆಗೆ ನಡೆದ ರಾಜ್ಯ ಮಟ್ಟದ ಮುಕ್ತ ವಾಲಿಬಾಲ್ ಪಂದ್ಯಾವಳಿಗಳಲ್ಲಿ ರಾಜ್ಯದ ಪ್ರಮುಖ ತಂಡಗಳೆಲ್ಲ ಭಾಗವಹಿಸುತ್ತಿದ್ದವು. ಒಂದೆರಡು ಸಾರೆ ಹೊನಲು ಬೆಳಕಿನ ಪಂದ್ಯಗಳನ್ನು ಏರ್ಪಡಿಸಲಾಗಿತ್ತು. ಹೈದರಾಬಾದ್ ನಿಂದಲೂ ಆಟಗಾರರು ಬಂದಿದ್ದರು.
ತಾಳಿಕೋಟಿ ಜನರಲ್ಲಿ ಬೆಳೆದ ಅಭಿರುಚಿಯನ್ನು ಮತ್ತಷ್ಟು ತೀಕ್ಷ್ಣಗೊಳಿಸಿದ ಶ್ರೇಯಸ್ಸು ಸ್ಥಳಿಯ ಖಾಸ್ಗತೇಶ ಕಲಾ-ಹಾಗೂ ವಾಣಿಜ್ಯ ಮಹಾವಿದ್ಯಾಲಕ್ಕೆ ಸಲ್ಲುತ್ತದೆ. ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ವಲಯ, ಅಂತರ್ ವಲಯ ಮಟ್ಟದ ಪಂದ್ಯಗಳನ್ನು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ವಾಲಿಬಾಲ್ ತಂಡದ ಆಯ್ಕೆಯನ್ನು ನಡೆಸಿ ಯುವಕರಲ್ಲಿಯ ವಾಲಿಬಾಲ್ ಕ್ರೀಡೆಯ ಅಭಿಮಾನವನ್ನು ವೃದ್ಧಿಸಿತು.
ತಾಲಿಕೋಟಿ ಜನರ ಮನದಿಂಗಿತವನ್ನರಿತ ಖಾಸ್ಗತೇಶ ಪದವಿ ಪೂರ್ವ ಕಾಲೇಜು 2001 ರಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಿತ್ತು. ಅತ್ಯಂತ ಸಮರ್ಪಕ ರೀತಿಯಲ್ಲಿ ಸಂಯೋಜಿಸಲಾಗಿತ್ತು. ಇದನ್ನು ಅರಿತ ವಿಜಾಪುರ ಜಿಲ್ಲಾ ಪ.ಪೂ. ಶಿಕ್ಷಣ ನಿರ್ದೇಶಕರು ಮತ್ತೊಮ್ಮೆ ಕ್ರೀಡೋತ್ಸವ ತಾಳಿಕೋಟಿಯಲ್ಲಿಯೇ ನಡೆಸಲು ಪ್ರೋತ್ಸಾಹಿಸಿದರು. ಅವರ ಆಶಯ ಹಂಬಲಗಳಂತೆ ಈ ಸಾರೆಯೂ ಸಂಘಟಿಸಿ ಕ್ರೀಡಾಪಟುಗಳ, ಕ್ರೀಡಾಭಿಮಾನಿಗಳ ಮನಗೆದ್ದಿತು.
ಪ್ರಥಮ, ದ್ವಿತೀಯ ಸ್ಥಾನ ಪಡೆದ ತಂಡ ಮತ್ತು ಉತ್ತಮ ಹೊಡೆತಗಾರ, ಉತ್ತಮ ತೂರುಗಾರ ಬಹುಮಾನ ಪಡೆದ ಆಟಗಾರರಿಗೆ ಪ್ರೇಕ್ಷಕರು ಮೆಚ್ಚಿ ನೀಡಿದ ನಗದು ಹಣ 15000 ಕ್ಕಿಂತಲೂ ಹೆಚ್ಚಾಗಿತ್ತು ಎಂದರೆ ನೀವೇ ಊಹಿಸಿ. ಬೆಂಗಳೂರು ಉತ್ತರ ತಂಡದ ಶ್ರವಣ್, ಸುನೀಲ್, ಪ್ರಕಾಶ್ ದಕ್ಷಿಣ ತಂಡದ ರೋಹಿತ್, ಸಯ್ಯದ್ ಮತ್ತು ಮೈಸೂರು ಬಾಲಕಿಯರ ತಂಡದ ನಾಯಕಿ ನಿಶಾ ಅವರ ಆಟ ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿತು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications