ಗುಜರಾತ್ ಎನ್ ಕೌಂಟರ್ ಅಮಾನವೀಯ ಕೃತ್ಯ
ನವದೆಹಲಿ, ಸೆ. 9 : ಇಶ್ರತ್ ಜಹಾನ್ ಹಾಗೂ ಆಕೆಯ ಮೂವರು ಸ್ನೇಹಿತೆಯರ ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಕೇಂದ್ರದ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ತೀವ್ರ ಆಕ್ರೋಶ ಪಡಿಸಿದ್ದಾರೆ. ಇಂತಹ ಅಮಾನವೀಯ ಕೃತ್ಯ ಬೇರೆ ಯಾವುದೇ ದೇಶದಲ್ಲಿ ನಡೆದಿದ್ದರೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇಷ್ಟು ಹೊತ್ತಿಗಾಗಲೇ ಜೈಲುಕಂಬಿ ಎಣಿಸಬೇಕಾಗುತ್ತಿತ್ತು ಎಂದು ಅವರು ಕಿಡಿಕಾರಿದ್ದಾರೆ.
ಈಗಷ್ಟೇ ಬೆಳಕಿಗೆ ಬರುತ್ತಿರುವ ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಲ್ಲಿ ಮೋದಿ ಭಾರೀ ಸಂಕಷ್ಟಕ್ಕೆ ಒಳಗಾಗುವುದಂತೂ ಖಚಿತ ಮತ್ತು ಇನ್ನಷ್ಟು ಅಸ್ಥಿಪಂಜರಗಳು ಹೊರಬರುತ್ತವೆ. ಕಾನೂನು ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದೊಂದು ಗಂಭೀರ ಪ್ರಕರಣ ಮತ್ತು ದುರದೃಷ್ಟಕರ ಸಂಗತಿ. ಗುಜರಾತ್ ಸರಕಾರ ಅಮಾನವೀಯ ಮತ್ತು ನಿರ್ಲಜ್ಜ ರೀತಿಯಲ್ಲಿ ವರ್ತಿಸಿದೆ ಎಂದು ಮೊಯ್ಲಿ ಕಿಡಿಕಾರಿದ್ದಾರೆ.
2004 ರಲ್ಲಿ ಇಶ್ರತ್ ಜಹಾನ್ ಮತ್ತು ಇತರ ಮೂವರನ್ನು ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಹತ್ಯೆ ಮಾಡಲಾಗಿದೆ ಎಂಬ ಎಸ್ ಪಿ ತಮಾಂಗ್ ನೇತೃತ್ವದ ನ್ಯಾಯಾಂಗ ಸಮಿತಿಯ ತನಿಖಾ ವರದಿ ನೀಡಿದೆ. ಇದನ್ನು ಗುಜರಾತ್ ಸರಕಾರ ಸ್ಪಷ್ಟವಾಗಿ ತಿರಸ್ಕರಿಸಿದೆ. ನ್ಯಾಯಾಂಗ ವರದಿ ವಿರುದ್ಧ ಗುಜರಾತ್ ಸುಪ್ರಿಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿದೆ.
(ಏಜನ್ಸೀಸ್)












Click it and Unblock the Notifications