ಶಿವಮೊಗ್ಗ : ಗೋಪಾಲಗೌಡ ಬಡಾವಣೆಯಲ್ಲಿ ದರೋಡೆ

ಮಾರುತಿ ಸ್ವಿಫ್ಟ್ ಕಾರಲ್ಲಿ ಬಂದ ಐದು ಜನ ಮುಸುಕುಧಾರಿಗಳು ನೇರವಾಗಿ ಗೋಪಾಲಗೌಡ ಬಡಾವಣೆಯಲ್ಲಿ ವಾಸವಾಗಿರುವ ಬಿ.ಆರ್.ಪಿ.ಯ ಶ್ರೀರಂಭಾಪುರಿ ಕಾಲೇಜಿನ ಉಪನ್ಯಾಸಕ ಲೋಕೇಶಪ್ಪ(51)ರವರ ಮನೆಗೆ ನುಗ್ಗಿದರು. ನಂತರ, ರಿವಾಲ್ವರ್, ಲಾಂಗು ಮತ್ತು ಮಚ್ಚುಗಳನ್ನು ತೋರಿಸಿ ಲೋಕೇಶಪ್ಪ ಮತ್ತು ಅವರ ಹೆಂಡತಿ ಲತಾ ಹಾಗೂ ಇಬ್ಬರು ಮಕ್ಕಳನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿದರು. ಮನೆಯಲ್ಲಿದ್ದ 49,500ರೂ. ನಗದು ಹಣ ಹಾಗೂ 143 ಗ್ರಾಂ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾದರು.
ಲೋಕೇಶಪ್ಪ ತಮ್ಮ ದೂರಿನಲ್ಲಿ, ಮುಸುಕುಧಾರಿಗಳು ಮಾರುತಿ ಸ್ವಿಫ್ಟ್ ಸಿಲ್ವರ್ ಕಾರಿನಲ್ಲಿ ಮನೆಯ ಬಳಿ ಇಳಿದರು. ಅದರ ನಂ.ಪ್ಲೇಟ್ ಕನ್ನಡ ಅಂಕೆಗಳಲ್ಲಿ ಬರೆಯಲಾಗಿತ್ತು. ಕೆಎ12 ಮಾತ್ರ ನಾನು ನೋಡಿದ್ದು, ದರೋಡೆಕೋರರು ಒಟ್ಟು 5 ಜನರಿದ್ದರು ಎಂದು ವಿವರಿಸಿದ್ದಾರೆ. ಲೋಕೇಶಪ್ಪರವರ ಪತ್ನಿ ಲತಾರವರು ಸಹ ಸಾಗರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ತುಂಗಾನಗರ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಸಬ್‌ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್ ಮತ್ತು ಅಪರಾಧ ವಿಭಾಗದ ಸಬ್‌ಇನ್ಸ್‌ಪೆಕ್ಟರ್ ಬಿ.ನರಸಯ್ಯ ತನಿಖೆ ಕೈಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ದರೋಡೆಕೋರರ ತಲೆನೋವು ಇತ್ತೀಚೆಗೆ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಈ ದರೋಡೆಕೋರರ ಸಮೀಪಕ್ಕೂ ತಲುಪಲು ಸಾಧ್ಯವಾಗುತ್ತಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಪೊಲೀಸ್ ಇಲಾಖೆ ಬಿಗಿ ಕಳೆದುಕೊಂಡಿದೆಯಾ? ಸ್ವತಃ ಪೊಲೀಸ್ ಇಲಾಖೆಯೇ ಉತ್ತರಿಸಬೇಕಿದೆ.











Click it and Unblock the Notifications