ಜಯನಗರ : ಸೌಹಾರ್ದತೆ ಮೂಲಕ ಗಣೇಶ ವಿಸರ್ಜನೆ
ಬೆಂಗಳೂರು, ಸೆ. 1 : ಜಯನಗರದ ವಿನಾಯಕ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಘ್ನ ನಿವಾರಕ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ ಸೌಹಾರ್ದತೆ ಮೆರೆದ ಅಪರೂಪ ಪ್ರಸಂಗ ಸೋಮವಾರ ರಾತ್ರಿ ಜಯನಗರದ 4ನೇ ಬ್ಲಾಕ್ ನಲ್ಲಿ ನಡೆಯಿತು. ಕೋಮುಗಲಭೆಗೆ ಕಾರಣ ಎಂದು ಪೊಲೀಸರಿಂದ ಸೂಕ್ಷ್ಮ ಪ್ರದೇಶ ಎಂದು ಕರೆಯಲ್ಪಡುವ ಜಯನಗರ 4ನೇ ಬ್ಲಾಕ್ ಸುತ್ತಮುತ್ತಲಿನ ಪ್ರದೇಶ ಸೌಹಾರ್ದತೆ ತಾಣವಾಗಿ ಮೆರೆಯಿತು.
ವಿನಾಯಕ ಸೇವಾ ಸಮಿತಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸೋಮವಾರ ರಾತ್ರಿ ವಿಸರ್ಜನೆ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಗಣೇಶನ ಮೆರವಣಿಗೆ ದರಗಾದ ಬಳಿ ಬರುತ್ತಿದ್ದಂತೆಯೇ ಅಲ್ಲಿದ್ದ ಹಲವಾರು ಮುಸ್ಲಿಂ ಬಾಂಧವರು ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆಯನ್ನು ಮೆರೆದಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಮರ ಸಂಗಮದಲ್ಲಿ ಅದ್ಧೂರಿಯಾಗಿ ಗಣೇಶನ ವಿಸರ್ಜನೆ ಮುಕ್ತಾಯ ಕಂಡಿತು.
ಜಯನಗರ ನಿವಾಸಿಗಳ ಸಂಘದ ಅಧ್ಯಕ್ಷ ಎನ್ ಕೇಶವಕುಮಾರ್, ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ್ ಮತ್ತು ಖಜಾಂಚಿ ಉಮೇಶ, ಜಯನಗರ 4ನೇ ಬ್ಲಾಕ್ ನ ನಿವಾಸಿಗಳ ಸಂಘದ ಅಧ್ಯಕ್ಷೆ ಸತ್ಯವತಿ, ಎನ್ಎಸ್ ಯುಐ ಪ್ರಧಾನ ಕಾರ್ಯದರ್ಶಿ ಚೇತನ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications