ಸದಾನಂದ ಗೌಡರ ಬಂಧನಕ್ಕೆ ಜೆಡಿಎಸ್ ಆಗ್ರಹ
ಶಿವಮೊಗ್ಗ,ಆ. 18 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ, ಅವಮಾನಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಯುವ ಜಾತ್ಯಾತೀತ ಜನತಾದಳ ಇಂದು ಗೋಪಿವೃತ್ತದಲ್ಲಿ ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿತು.
ದೇಶದ ಉನ್ನತ ಹುದ್ದೆಯಲ್ಲಿದ್ದು, ರೈತರ ದೀನದಲಿತರ, ಬಡವರ, ಮಹಿಳೆಯರ, ಅಲ್ಪಸಂಖ್ಯಾತರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿರುವ ಮಾಜಿ ಪ್ರಧಾನಿ ದೇವೇಗೌಡರನ್ನು ಅವಮಾನಿಸಿದ್ದಾರೆಂದು ಖಂಡಿಸಿದರು.
ಇಂತಹ ಒಬ್ಬ ಕಟ್ಟಾ ಸೇನಾನಿಯ ವಿರುದ್ಧ ಮಾತನಾಡುವ ಹಕ್ಕು ಸದಾನಂದಗೌಡರಿಗೆ ಇಲ್ಲ. ದೇಶದಲ್ಲಿ ಯಾವುದಾದರೂ ಭಯೋತ್ಪಾದನಾ ಸಂಘಟನೆ ಇದ್ದರೆ ಅದು ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳಲ್ಲೇ ಇದೆ. ದೇಶದಲ್ಲಿ ಹಿಂದೂ, ಕ್ರಿಶ್ಚಿಯನ್, ಮುಸ್ಲೀಂ, ದಲಿತರೆಂದು ಒಡೆದು ಆಳುವ ರೀತಿಯಲ್ಲಿ ಅನುಸರಿಸುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳ ಕೆಲಸವಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಪೂರಕವೆಂಬಂತೆ ಚರ್ಚ್‌ಗಳ ಮೇಲೆ ದಾಳಿ, ಮಹಿಳೆಯರ ಮೇಲೆ ದಾಳಿ ನಡೆದಿದೆ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿರುವುದು ಈಗಾಗಲೇ ಸಾಬೀತಾಗಿದೆ. ಇದಕ್ಕೆ ಬಿಜೆಪಿ ಹಾಗೂ ಕೇಂದ್ರ ನಾಯಕರ ಬೆಂಬಲವೂ ಇದೆ ಎಂದರು.
ಬಿಜೆಪಿಯಲ್ಲಿಯೇ ಇಷ್ಟೆಲ್ಲಾ ನಡೆಯುತ್ತಿರುವಾಗ ಸದಾನಂದಗೌಡರು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಅವಹೇಳನಕಾರಿ ಮಾತನಾಡುತ್ತಿದ್ದು, ಕೂಡಲೇ ಅವರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಾತ್ಯಾತೀತ ಯುವಜನತಾದಳದ ಅಧ್ಯಕ್ಷ ಜಿ.ಡಿ.ಮಂಜುನಾಥ್, ಮಾಜಿ ಅಧ್ಯಕ್ಷ ಹೆಚ್.ಪಾಲಾಕ್ಷಿ, ಪ್ರಧಾನ ಕಾರ್ಯದರ್ಶಿ ನಾಗರಾಜ್ ಕಂಕಾರಿ, ವಿ.ಶ್ರೀನಿವಾಸ್, ನಾಸೀರ್, ದಿನೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.












Click it and Unblock the Notifications