ಕರ್ನಾಟಕಕ್ಕೆ ನಾಲ್ಕು ರಾಷ್ಟ್ರೀಯ ಜಲಪ್ರಶಸ್ತಿಯ ಹಿರಿಮೆ
ಬೆಂಗಳೂರು, ಆ. 15 : ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಂಗಸಂಸ್ಥೆಗಳು ರಾಷ್ಟ್ರೀಯ ಮಟ್ಟದಲ್ಲಿ ನೀಡಲಾಗುವ ಅತ್ಯಂತ ಪ್ರತಿಷ್ಠಿತವಾದ ನಾಲ್ಕು "ರಾಷ್ಟ್ರೀಯ ನಗರ ನೀರು ಪುರಸ್ಕಾರ" ಪ್ರಶಸ್ತಿಗಳನ್ನು ಪಡೆದಿವೆ. ಇದು ಕರ್ನಾಟಕದಲ್ಲಿ ನಗರಾಭಿವೃದ್ಧಿ ಇಲಾಖೆಯ ಸಾಧನೆಗಳು ರಾಷ್ಟ್ರೀಯ ಮಟ್ಟದಲ್ಲಿ ಪಡೆಯುತ್ತಿರುವ ಅಸಾಮಾನ್ಯ ಮನ್ನಣೆಗೆ ಸಾಕ್ಷಿಯಾಗಿದೆ.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆ.ಯು.ಐ.ಡಿ.ಎಫ್.ಸಿ) ಮತ್ತು ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿ.ಡಬ್ಲ್ಯು.ಎಸ್.ಎಸ್.ಬಿ) ಹಾಗೂ ಕುಂದಾಪುರ ಪುರಸಭೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗಳು ತಮ್ಮ ಅಸಾಮಾನ್ಯ ಸಾಧನೆಗಾಗಿ ಈ ಪ್ರಶಸ್ತಿಗಳಿಗೆ ಭಾಜನವಾಗಿವೆ.
2008 ನೇ ಸಾಲಿನಿಂದ ಭಾರತ ಸರ್ಕಾರದ ನಗರಾಭಿವೃದ್ಧಿ ಇಲಾಖೆ, ಭಾರತೀಯ ಆಡಳಿತ ಸಿಬ್ಬಂದಿ ಕಾಲೇಜು, ಹೈದರಾಬಾದ್ ಮತ್ತು ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಇವುಗಳ ಸಹಯೋಗದೊಂದಿಗೆ ರಾಷ್ಟ್ರೀಯ ನಗರ ನೀರು ಪ್ರಶಸ್ತಿಗಳನ್ನು ನೀಡುತ್ತಿದ್ದು, ನಿನ್ನೆ ದೆಹಲಿಯ ವಿಜ್ಞಾನ ಭವನದಲ್ಲಿ 2009 ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿತು. 6 ವಿಭಾಗಗಳಲ್ಲಿ ನೀಡಲಾಗುವ ಈ ಪ್ರಶಸ್ತಿಗಳಲ್ಲಿ 4 ಪ್ರಶಸ್ತಿ ಕರ್ನಾಟಕದ ಪಾಲಾಯಿತು. ವಿವಿಧ ರಾಜ್ಯಗಳ 90 ಸಂಸ್ಥೆಗಳು ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವು. ಇಂತಹ ಅತ್ಯಂತ ಪೈಪೋಟಿಯ ನಡುವೆ ಕರ್ನಾಟಕ ನಾಲ್ಕು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಅಸಾಧಾರಣ ಸಾಧನೆಯಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications