ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಜಿಲ್ಲೆಗಳು ಬರಪೀಡಿತ ಪ್ರದೇಶಗಳು : ರೆಡ್ಡಿ

By Staff
|
Google Oneindia Kannada News

Karunakar reddy
ಬೆಂಗಳೂರು, ಚಿತ್ತಾಪುರ, ಆ. 11 : ರಾಜ್ಯದಲ್ಲಿ ಮುಂಗಾರುಮಳೆ ಕೊರತೆಯ ಹಿನ್ನೆಲೆಯಲ್ಲಿ 20 ಜಿಲ್ಲೆಗಳ 86 ತಾಲ್ಲೂಕುಗಳು ಹಾಗೂ 308 ಹೋಬಳಿಗಳನ್ನು ಬರಪೀಡಿತ ಪ್ರದೇಶಗಳು ಎಂದು ಕಂದಾಯ ಸಚಿವ ಕರುಣಾಕರರೆಡ್ಡಿ ಘೋಷಣೆ ಮಾಡಿದ್ದಾರೆ. ಆದರೆ, ಬರಪೀಡಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಬುಧವಾರ ಬರಪ್ರದೇಶಗಳನ್ನು ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಅದಕ್ಕೂ ಮುಂಚೆ ಕರುಣಾಕರರೆಡ್ಡಿ ಘೋಷಣೆ ಮಾಡಿರುವುದು ತೀವ್ರ ಕುತೂಹಲ ಹಾಗೂ ಅಚ್ಚರಿಗೆ ಕಾರಣವಾಗಿದೆ.

ಮಂಗಳವಾರ ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಕರುಣಾಕರರೆಡ್ಡಿ, ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ತುಂಬಾ ಸಮಸ್ಯೆ ಉಂಟಾಗಿದೆ. ರಾಜ್ಯ 20 ಜಿಲ್ಲೆಗಳು, 86 ತಾಲ್ಲೂಕುಗಳು ಮತ್ತು 308 ಹೋಬಳಿಗಳು ಬರಪೀಡಿತ ಪ್ರದೇಶಗಳಾಗಿವೆ ಎಂದರು.

ಗುಲ್ಬರ್ಗಾ, ಗದಗ, ಮಂಡ್ಯ, ಚಾಮರಾಜನಗರ, ಮೈಸೂರು, ಬೀದರ್, ಬಾಗಲಕೋಟೆ, ಬಿಜಾಪುರ, ಬೆಳಗಾವಿ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ಕೊಪ್ಪಳ, ಬಳ್ಳಾರಿ, ರಾಯಚೂರು, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆಗಳು ಬರಪೀಡಿತ ಜಿಲ್ಲೆಗಳಾಗಿವೆ. ಈ ಜಿಲ್ಲೆಗಳಲ್ಲಿ ಬರುವ 86 ತಾಲ್ಲೂಕು ಹಾಗೂ 308 ಹೋಬಳಿಗಳು ತೀವ್ರ ಬರದಿಂದ ನರಳುತ್ತಿರುವುದನ್ನು ಗುರುತಿಸಲಾಗಿದೆ ಎಂದು ಕರುಣಾಕರರೆಡ್ಡಿ ವಿವರಿಸಿದರು.

ಸರಕಾರ ಗುರುತಿಸಿರುವ 20 ಬರಪೀಡಿತ ಜಿಲ್ಲೆಗಳಲ್ಲಿ ರಾಯಚೂರು ಅತ್ಯಂತ ಬರಪೀಡಿತ ಜಿಲ್ಲೆಯಾಗಿದ್ದು, ಪ್ರಥಮ ಸ್ಥಾನ ಪಡೆದುಕೊಂಡಿದೆ. ಎರಡನೇಯ ಸ್ಥಾನವನ್ನು ಗುಲ್ಬರ್ಗಾ, ಬಿಜಾಪುರ ಹಾಗೂ ಕೊಪ್ಪಳ ಜಿಲ್ಲೆಗಳ ಪಡೆದುಕೊಂಡಿವೆ. ಮೂರನೇ ಸ್ಥಾನ ಬೀದರ್ ಪಾಲಾಗಿದೆ. ರಾಜ್ಯ ಸರಕಾರ ಬರಪೀಡಿತ ಜಿಲ್ಲೆಗಳಿಗೆ ತಕ್ಷಣವೇ 16 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಹೆಚ್ಚಿನ ಅನುದಾನ ಬಿಡುಗಡೆ ಕೋರಿ ಕೇಂದ್ರ ಸರಕಾರಕ್ಕೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಹೇಳಿದರು. ಬರಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಉಪಸಮಿತಿ ರಚಿಸಿ ಶೀಘ್ರ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ರೆಡ್ಡಿ ಹೇಳಿದರು.

ನನ್ನ ಪೂರ್ವಾನುಮತಿ ಪಡೆದುಕೊಂಡಿದ್ದರು : ಯಡಿಯೂರಪ್ಪ

ಅತ್ತ ಚಿತ್ತಾಪುರ ಮೀಸಲು ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಬರಪೀಡಿತ ಜಿಲ್ಲೆಗಳ ಘೋಷಣೆ ಮಾಡಲು ಕಂದಾಯ ಸಚಿವ ಕರುಣಾಕರರೆಡ್ಡಿ ನನ್ನ ಜೊತೆಗೆ ಚರ್ಚಿಸಿ ಅನುಮತಿ ಪಡೆದು ಘೋಷಣೆ ಮಾಡಿದ್ದಾರೆ. ಅಲ್ಲದೇ ಬರಕ್ಕೆ ಸಂಬಂಧಿಸಿದ ವಿಚಾರ ಕಂದಾಯ ಸಚಿವರಿಗೆ ಸೇರಿದೆ. ನನ್ನ ಸಚಿವ ಸಂಪುಟದ ಪ್ರತಿ ಸಚಿವರಿಗೂ ಸಂಪೂರ್ಣ ಸ್ವಾತಂತ್ರ ನೀಡಿರುವುದಾಗಿ ಹೇಳಿ ನುಣುಚಿಕೊಂಡರು. ಹಾಗಾದರೆ ಬುಧವಾರ ಬರಪೀಡಿತ ಜಿಲ್ಲೆಗಳು ಘೋಷಣೆ ಮಾಡುವೆ ಎಂದು ಏಕೆ ಹೇಳಿದರು ಎಂಬುದನ್ನು ಪ್ರತಿಪಕ್ಷಗಳ ಪ್ರಶ್ನಿಸಬಹುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X