ಸ್ಪೀಕರತ್ತ ಫೋನ್ ಎಸೆದ ಮೆಹಬೂಬಾ ಮುಫ್ತಿ
ಶ್ರೀನಗರ, ಜು. 27 : ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಕಲಾಪದಲ್ಲಿಂದು ಶೋಪಿಯಾನಾ ಘಟನೆಗೆ ಸಂಬಂಧಿಸಿದ೦ತೆ ವಿರೋಧ ಪಕ್ಷವಾದ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಮೆಹಬೂಬಾ ಮಫ್ತಿ ತಾಳ್ಮೆ ಕಳೆದುಕೊಂಡು ಸ್ಪೀಕರ್ ಮಹಮ್ಮದ್ ಅಕ್ಬರ್ ಲೋನ್ ಅವರ ಮೇಲೆ ಮೈಕ್ರೋಫೋನ್ ಎಸೆದ ಘಟನೆ ನಡೆದಿದೆ.
ಕಳೆದ ಮೇ ತಿಂಗಳಲ್ಲಿ ಗರ್ಭಿಣಿ ಹೆಂಗಸು ಸೇರಿದಂತೆ ಇಬ್ಬರು ಹೆಂಗಸರ ಕೊಲೆ ಮತ್ತು ಅತ್ಯಾಚಾರ ಘಟನೆಗೆ ಕಾರಣರಾದ ಆರೋಪಿಗಳ ವಿರುದ್ದ ಸರಕಾರ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ ಎಂದು ಪಿಡಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಚರ್ಚೆಗೆ ಸ್ಪೀಕರ್ ಅನುಮತಿ ನೀಡಲಿಲ್ಲ. ಸ್ಪೀಕರ್ ಅವರು ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾರೆಂದು ಆರೋಪಿಸಿದ ಮುಫ್ತಿ ಆವೇಶದಿಂದ ಮೈಕ್ರೋಫೋನ್ ಅನ್ನು ಕಿತ್ತು ಸ್ಪೀಕರ್ ಅವರತ್ತ ಎಸೆದರು.
ವಿರೋಧ ಪಕ್ಷಗಳ ವರ್ತನೆಯಿಂದ ಬೇಸತ್ತ ಸ್ಪೀಕರ್ ಎಲ್ಲಾ ಪಿಡಿಪಿ ಶಾಸಕರನ್ನು ಸದನದಿಂದ ಹೊರಹಾಕಲು ಆದೇಶಿಸಿ ಸದನವನ್ನು ತಾತ್ಕಾಲಿಕವಾಗಿ ಮುಂದೂಡಿದರು. ಸ್ಪೀಕರ್ ಅವರ ದ್ವಂದ್ವ ನೀತಿಯನ್ನು ಖಂಡಿಸಿ ಮುಫ್ತಿ ಅವರ ನೇತೃತ್ವದಲ್ಲಿ ಪಿಡಿಪಿ ಸದಸ್ಯರು ಸದನದ ಹೊರಗೆ ಧರಣಿ ನಡೆಸುತ್ತಿದ್ದಾರೆ. ಮಹಿಳೆಯರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಜಮ್ಮು ಕಾಶ್ಮೀರ ಪೋಲಿಸ್ ಅಧಿಕಾರಿಗಳ ಬೇಲ್ ಅರ್ಜಿಯನ್ನು ಜುಲೈ 24ರಂದು ಸುಪ್ರಿಂ ಕೋರ್ಟ್ ಸ್ಥಳೀಯ ಕೋರ್ಟ್ ಗೆ ವರ್ಗಾಯಿಸಿತ್ತು.
(ಏಜನ್ಸೀಸ್)












Click it and Unblock the Notifications