• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುಂಡ್ಯಾ ಜಲ ವಿದ್ಯುತ್ ಬಗ್ಗೆ ಒಂದಿಷ್ಟು

By * ಮಲೆನಾಡಿಗ
|

ಹಾಸನ ಜಿಲ್ಲೆ ,ಸಕಲೇಶಪುರ ತಾಲೂಕಿನಲ್ಲಿ ಗುಂಡ್ಯಾ ಜಲ ವಿದ್ಯುತ್ ಯೋಜನೆ(Gundia Hydro Electric Project-GHEP) ಗೆ ಮೇ 26, 2009 ರಂದು ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಾಂದಿ ಹಾಡಿದರು. ಸ್ಥಳೀಯ ಪರಿಸರ ಕಾಳಜಿ ಸಂಘಟನೆಗಳ ವಿರೋಧಕ್ಕೆ ಸರ್ಕಾರ ಬೆಲೆ ನೀಡಲಿಲ್ಲ. ಇದಲ್ಲದೆ ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯ(MOEF) ಅಂತಿಮ ಅನುಮತಿ ಪಡೆಯುವ ಮುನ್ನ ರಾಜ್ಯ ಸರ್ಕಾರ ಈ ಸಮಾರಂಭವನ್ನು ಹಮ್ಮಿಕೊಂಡಿದ್ದು ವಿಶೇಷ.

ಪಶ್ಚಿಮಘಟ್ಟದ ಕುಮಾರಧಾರಾ ಹಾಗೂ ನೇತ್ರಾವತಿ ನದಿಮುಖಜ ಭೂಮಿಯ ಅಗಾಧ ನೈಸರ್ಗಿಕ ಹಾಗೂ ಜೀವ ವೈವಿಧ್ಯ ಪ್ರದೇಶದಲ್ಲಿ ಕರ್ನಾಟಕ ರಾಜ್ಯ ಶಕ್ತಿ ನಿಗಮ(KPCL) ಉದ್ದೇಶಿತ ಈ ಯೋಜನೆಯನ್ನು ಕಾರ್ಯಗತ ಮಾಡಲಾಗುತ್ತಿದೆ. ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಈ ಯೋಜನೆ ಒಳಪಟ್ಟಿರುತ್ತದೆ. 200MW ಸಾಮರ್ಥ್ಯದ ಈ ಯೋಜನೆಯಿಂದ ಸುಮಾರು 633 ದಶಲಕ್ಷ ಯುನಿಟ್ ಗಳಷ್ಟು ವಿದ್ಯುತ್ಚಕ್ತಿಯನ್ನು ವಾರ್ಷಿಕವಾಗಿ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.

ಈ ಯೋಜನೆಗೆ ಸುಮಾರು 973.27 ಹೆಕ್ಟೇರು ಅರಣ್ಯ ಪ್ರದೇಶ ಬಳಸಲ್ಪಡುತ್ತದೆ. ಇದರಲ್ಲಿ 563.25 ಹೆಕ್ಟೇರು ನಿತ್ಯ ಹರಿದ್ವರ್ಣ ಕಾಡು, 33.24 ಹೆಕ್ಟೇರು ನದಿ ಮುಖಖ ಭೂಮಿ, ಸುಮಾರು 12 ಹಳ್ಳಿಗಳಿಗೆ ಸೇರಿದ 111.78 ಹೆಕ್ಟೇರು ಖಾಸಗಿ ಭೂ ಪ್ರದೇಶ ನೀರಿನಲ್ಲಿ ಮಾಯವಾಗಲಿದೆ.

ದಟ್ಟ ಅರಣ್ಯದ ಮಧ್ಯೆ ಸುಮಾರು 23 ಕಿ.ಮೀ ದೂರಕ್ಕೆ ನಾಲ್ಕು ಕಾಲುವೆಗಳ ನಿರ್ಮಾಣವಾಗಲಿದೆ. ಇದರಿಂದ ಅಲ್ಲಿನ ಪ್ರಾಣಿ ಪಕ್ಷಿಗಳಿಗೆ ನೆಲೆ ಇಲ್ಲದಂತಾಗುತ್ತದೆ. ಇದು ಪ್ರಥಮ ಹಂತದ ಯೋಜನೆಯ ಅಸ್ಪಷ್ಟ ಚಿತ್ರಣವಾಗಿದ್ದು, ಕೆಪಿಸಿಎಲ್ ಮುಂದಿನ ಹಂತದ ಯೋಜನೆಯ ಬಗ್ಗೆ ಯಾವುದೇ ವಿವರಣೆಯನ್ನು ನೀಡಿರುವುದಿಲ್ಲ. ವಿನಾಶದ ಅಂಚಿನಲ್ಲಿರುವ ಅಳಿಲುಗಳು, ಮಂಗಗಳು, ಚಿಟ್ಟೆಗಳು, ಲಕ್ಷಾಂತರ ಕ್ರಿಮಿ ಕೀಟಗಳ ಆವಾಸಸ್ಥಾನಕ್ಕ್ಕೆ ಲಗ್ಗೆ ಇಡಲಾಗುತ್ತದೆ. ಬೆರಳೆಣಿಕೆಯಲ್ಲಿರುವ ಕಾಡುಜನರು ನಾಡಿಗೆ ಬಂದರೆ ಅವರ ಸಂತತಿಯ ನಾಶಕ್ಕೆ ನಾಂದಿ ಹಾಡಿದಂತಾಗುತ್ತದೆ.

ಇನ್ನು ಖಾಸಗಿ ಭೂ ಪ್ರದೇಶದ ಒಡೆಯರಲ್ಲಿ ಬೇಕು ಬೇಡಗಳ ತಿಕ್ಕಾಟ ನಡೆದಿದೆ. ಹೆಚ್ಚು ಜಮೀನುಳ್ಳ ಶ್ರೀಮಂತರು ಯೋಜನೆಯ ಪರವಾಗಿದ್ದರೆ, ಜೀವನೋಪಾಯಕ್ಕೆ ಭೂಮಿಯನ್ನೇ ನಂಬಿರುವವರು ದಿಕ್ಕು ತೋಚದಂತಾಗಿದ್ದಾರೆ. ಅಭಿವೃದ್ಧಿ ಒಂದೇ ಮಂತ್ರ ಎನ್ನುವ ಸರ್ಕಾರ, ಈ ಯೋಜನೆಯ ಪರಿಣಾಮ ಇಂದಿನ ಪೀಳಿಗೆಗೆ ಮಾತ್ರವಲ್ಲ ಮುಂಬರುವ ಪೀಳಿಗೆಗಳಿಗೂ ತಟ್ಟಲಿದೆ ಎಂಬುದರ ಅರಿವು ಮಾಡಿಕೊಂಡರೆ ಒಳ್ಳೆಯದು. ಯೋಜನೆಗಳು ಅವಶ್ಯ ಆದರೆ ಇರುವ ಪರಿಸರವನ್ನು ನಾಶ ಮಾಡಿ ಮತ್ತದೇ ಪರಿಸರ ಸೃಷ್ಟಿಸುವ ಶಕ್ತಿ ಇದ್ದರೆ ಮಾತ್ರ ಈ ಕೆಲಸಕ್ಕೆ ಕೈ ಹಾಕಲಿ. ಪರಿಹಾರ ಧನ, ಜನರ ಪುನರ್ವಸತಿ, ಕೋಟಿ ಸಸಿ ನೆಡುವುದು, ಪ್ರಾಣಿಗಳಿಗೆ ಪರಸ್ಥಳ ತೋರುವುದು ಮಲೆನಾಡಿನಲ್ಲಿ ಮಳೆ ಸುರಿದಂತೆ ಸುಲಭವಲ್ಲ ಎಂಬುದು ಮನಗಾಣಲಿ.

ಗುಂಡ್ಯಾ ಜಲವಿದ್ಯುತ್ ಯೋಜನೆಯ ಪರಿಣಾಮ ಕುರಿತು ಪರಿಸರ ಕಾಳಜಿಯ ಕಿರುಚಿತ್ರವನ್ನು ಕೇಸರಿ ಹರವೂ ಅವರು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದರಿಂದ ಯೋಜನೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅವರ ಉದ್ದೇಶ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X