ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಕಾಶದ ಬಾಗಿಲು ಮುಚ್ಚುತ್ತಿರುವ ವಿಶ್ವವಿದ್ಯಾಲಯ

By Staff
|
Google Oneindia Kannada News

Doors closed in Mysore opoen university
ಪಿಯುಸಿ ನಂತರ ಇಂಜಿನಿಯರಿಂಗ್, ಎಂಬಿಬಿಎಸ್ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳತ್ತ ವಿದ್ಯಾರ್ಥಿಗಳ ವಿಪರೀತ ಆಕರ್ಷಣೆಯಿಂದಾಗಿ ಅಪಾರ ಉದ್ಯೋಗಾವಕಾಶ ಕಲ್ಪಿಸುವ ಮೂಲವಿಜ್ಞಾನ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮೈಸೂರು ವಿಶ್ವವಿದ್ಯಾಲಯ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮಾಸಿಕ ಶಿಷ್ಯವೇತನವಿರುವ ಈ ಕೋರ್ಸ್ ಗಳತ್ತ ವಿದ್ಯಾರ್ಥಿಗಳನ್ನು ಆಕರ್ಷಿಸಲು ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಸಾಲದೆಂಬಂತೆ, ವಿದ್ಯಾರ್ಥಿಗಳು ಈ ಕೋರ್ಸುಗಳಿಗೆ ಸೇರಿಕೊಳ್ಳುತ್ತಿಲ್ಲವೆಂಬ ಕಾರಣವೊಡ್ಡಿ ಈ ಕೋರ್ಸುಗಳನ್ನೇ ರದ್ದುಮಾಡಲು ಮೈಸೂರು ವಿಶ್ವವಿದ್ಯಾಲಯ ತಯಾರಾಗಿ ನಿಂತಿದೆ.

ಮೈಸೂರು ವಿಶ್ವವಿದ್ಯಾಲಯ ಮೂಲವಿಜ್ಞಾನದ ಕೋರ್ಸುಗಳ ಅಧ್ಯಯನಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ನಂತರವೇ ಪ್ರಕಟಣೆ ನೀಡಬೇಕಾಗಿತ್ತು. ವಿದ್ಯಾರ್ಥಿಗಳು ಈ ಕೋರ್ಸುಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಕಾರಣ ನೀಡಿ ಪ್ರಕಟಣೆಯನ್ನು ನೀಡುವ ಗೋಜಿಗೂ ವಿಶ್ವವಿದ್ಯಾಲಯ ಹೋಗಿಲ್ಲ. ಭೌತವಿಜ್ಞಾನ ಕಂಬೈನ್ಡ್ ಪಿಜಿ ಕೋರ್ಸ್ ಬಗ್ಗೆ ವಿವರ ಕೇಳಿ ಹೋದ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟವರು ಗದರಿಸಿ ಕಳುಹಿಸಿದ್ದಾರೆ. ಹೊಸ ಅವಕಾಶಗಳ ಬಾಗಿಲು ತೆರೆದಿದ್ದರೂ ವಿಶ್ವವಿದ್ಯಾಲಯವೇ ಆಸಕ್ತ ವಿದ್ಯಾರ್ಥಿಗಳಿಗೆ ಬಾಗಿಲು ಮುಚ್ಚಿತ್ತಿದೆ.

ಒಂದೆಡೆ ಪ್ರಶ್ನೆಪತ್ರಿಕೆಗಳ ಬಹಿರಂಗವಾಗುವಿಕೆ, ಇನ್ನೊಂದೆಡೆ ಬಹಿರಂಗವಾಗಿಯೇ ಸಾಮೂಹಿಕ ನಕಲು ಮಾಡಲು ಅವಕಾಶ ಮಾಡಿಕೊಡುತ್ತಿರುವುದು ಶಿಕ್ಷಣದ ಪಾವಿತ್ರ್ಯತೆಗೆ ಭಾರೀ ಹೊಡೆತ ನೀಡುತ್ತಿದೆ. ಸರಕಾರ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಉನ್ನತ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಕಪ್ಪುಚುಕ್ಕೆ ಮೂಡುವುದು ಖಂಡಿತ. ಉನ್ನತ ಶಿಕ್ಷಣ ಸಚಿವರಾದ ಅರವಿಂದ ಲಿಂಬಾವಳಿ ಇತ್ತಕಡೆ ಗಮನ ಹರಿಸಿ ಮೂಲವಿಜ್ಞಾನ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರೆಯುವಂತಾಗಲು ಕಾರ್ಯತತ್ಪರರಾಗಬೇಕು.

ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ನಾಲ್ಕು ಕೋರ್ಸುಗಳ ಸಂಕ್ಷಿಪ್ತ ವಿವರ ಇಲ್ಲಿ ನೀಡಲಾಗಿದೆ.

ಭೌತವಿಜ್ಞಾನದ ಇಂಟಿಗ್ರೇಟೆಡ್ ಎಂ.ಎಸ್‌ಸಿ. ಕೋರ್ಸ್

ಶತಮಾನೋತ್ಸವದ ಸಂಭ್ರಮದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಯೋಜಕತ್ವ ಮತ್ತು ಮಾಸಿಕ ರೂ.1000/- ಶಿಷ್ಯವೇತನದ ಅಡಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ 5 ವರ್ಷಗಳ ಭೌತವಿಜ್ಞಾನದ ಇಂಟಿಗ್ರೇಟೆಡ್ ಎಂ.ಎಸ್‌ಸಿ. ತರಬೇತಿ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ನಿವೃತ್ತ ಕುಲಪತಿಗಳು, ವಿಜ್ಞಾನದ ಪರಿಣತರು, ವಿಜ್ಞಾನಿಗಳು, ವಿಶೇಷವಾಗಿ ಚೆನ್ನೈನ ಇನ್ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್‌ನ ಪ್ರೊ. ಜಿ. ರಾಜಶೇಖರನ್, ಪ್ರೊ. ಹೆಚ್.ಎಸ್. ಮಣಿ, ಪ್ರೊ. ಎಂ.ವಿ.ಎನ್. ಮೂರ್ತಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಎಸ್.ವಿ. ಸುಬ್ರಹ್ಮಣ್ಯಂ, ಪ್ರೊ. ಎಚ್.ಎಲ್. ಭಟ್, ಪ್ರೊ. ಹರಿದಾಸ್, ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಪ್ರೊ. ಆರ್. ಶ್ರೀನಿವಾಸನ್ ಈ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದು ಎರಡನೇ ವರ್ಷದಿಂದಲೇ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಇಲ್ಲಿ ತರಬೇತಿ ಪಡೆದವರಿಗೆ ಮುಂದೆ ಡಿ.ಆರ್.ಡಿ.ಒ.ದಂತಹ ಉನ್ನತ ವಿಜ್ಞಾನ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಉದ್ಯೋಗ ಅವಕಾಶ ಗ್ಯಾರಂಟಿ. ಕೇವಲ 18 ಮಂದಿಗೆ ಮಾತ್ರ ಅವಕಾಶ ಇರುವ ಈ ಕೋರ್ಸ್ ಒಟ್ಟು 10 ಸೆಮಿಸ್ಟರ್‌ಗಳದ್ದಾಗಿದ್ದು ಪ್ರತಿ ಸೆಮಿಸ್ಟರ್‌ನಲ್ಲಿ ಥಿಯರಿ, ಪ್ರಾಕ್ಟಿಕಲ್ ಮತ್ತು ಇಂಟರ್‌ನಲ್ ಅಸೆಸ್‌ಮೆಂಟ್ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಭೌತವಿಜ್ಞಾನ ಮತ್ತು ಗಣಿತದ ಇಂಟಿಗ್ರೇಟೆಡ್ ಬಿ.ಎಸ್‌ಸಿ.ಎಡ್. ಕೋರ್ಸ್

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಬಳಿಯಲ್ಲಿರುವ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್‌ನಲ್ಲಿ 4 ವರ್ಷಗಳ ಭೌತವಿಜ್ಞಾನ ಮತ್ತು ಗಣಿತದ ಇಂಟಿಗ್ರೇಟೆಡ್ ಬಿ.ಎಸ್‌ಸಿ.ಎಡ್ ತರಬೇತಿ ಹಲವು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ. ದ್ವಿತೀಯ ಪಿ.ಯು.ಸಿ. ವಿಜ್ಞಾನದ ವಿದ್ಯಾಥಿಗಳಿಗೆ ಇಲ್ಲಿಯೂ ಶಿಷ್ಯವೇತನ ಲಭ್ಯವಿದೆ. ಎಂಟು ಸೆಮಿಸ್ಟರ್ ಇರುವ ಈ ಕೋರ್ಸ್‌ನಲ್ಲಿ ಶಿಕ್ಷಣ ಕ್ಷೇತ್ರದ ಹೊಸ ಸಾಧ್ಯತೆಗಳ ಬಗ್ಗೆ ಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದ್ದು ಇಲ್ಲಿ ಪದವಿ ಪಡೆದವರು ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲಯಗಳಲ್ಲಿ, ಐ.ಸಿ.ಎಸ್.ಸಿ. ಮತ್ತು ಸಿ.ಬಿ.ಎಸ್.ಸಿ. ಪಠ್ಯಕ್ರಮದ ಶಾಲೆಗಳಲ್ಲಿ ಟ್ರೈನ್ಡ್ ಗ್ರಾಜ್ಯುಯೆಟ್ ಟೀಚರ್ ಆಗಿ ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಓದಿಗಾಗಿ ಎಂ.ಎಸ್‌ಸಿ. ಅಥವಾ ಎಂ.ಎಡ್. ಸೇರಲು ಅವಕಾಶ ಇದ್ದು ಇವರನ್ನು ಪೋಸ್ಟ್ ಗ್ರಾಜ್ಯುಯೇಟ್ ಟ್ರೈನ್ಡ್ ಟೀಚರ್ ಆಗಿ ನೇಮಕ ಮಾಡಿಕೊಳ್ಳಲಾಗುವುದು.

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯಲ್ಲಿ ವಿವಿಧ ಕೋರ್ಸ್‌ಗಳು

ಮೈಸೂರಿನ ಹೆಮ್ಮೆಯ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೇ ವಿವಿಧ ಅವಧಿಗಳ ವಿಶೇಷ ತರಬೇತಿಗಳನ್ನು ನಡೆಸಲಾಗುತ್ತಿದೆ. ಆಹಾರ ಸಂಸ್ಕರಣೆ, ತಯಾರಿ, ಶೇಖರಣೆ, ತಂತ್ರಜ್ಞಾನ ಇತ್ಯಾದಿ ವಿಷಯಗಳಲ್ಲಿ ಮೂರು ದಿನಗಳಿಂದ ಹಿಡಿದು ವಾರಗಳ ಕಾಲ ನಡೆಯುವ ಈ ಕ್ರಾಷ್ ಕೋರ್ಸುಗಳು ಅಪಾರ ಜನಪ್ರಿಯತೆ ಗಳಿಸಿವೆ. 2009-10ರಲ್ಲಿ ನಡೆಸಲಾಗುವ ಸುಮಾರು 40 ಕೋರ್ಸ್‌ಗಳ ಪಟ್ಟಿಯನ್ನು ಸಿ.ಎಫ್.ಟಿ.ಆರ್.ಐ. ತನ್ನ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಿದೆ.

ಚಿತ್ರಕಲೆ, ಫೋಟೊ-ಜರ್ನಲಿಸಂ ಕೋರ್ಸ್

ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಮಹಾವಿದ್ಯಾಲಯ (ಕಾವಾ)ದಲ್ಲಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅಪ್ಲೈಡ್ ಆರ್ಟ್ಸ್ ಮತ್ತು ಕಲಾ ಇತಿಹಾಸ, ಫೋಟೋಗ್ರಫಿ, ಫೋಟೋ-ಜರ್ನಲಿಸಂ ವಿಭಾಗಗಳಿದ್ದು, ಬ್ಯಾಚುಲರ್ ಮತ್ತು ಮಾಸ್ಟರ್ ಆಫ್ ವಿಜುಅಲ್ ಆರ್ಟ್ಸ್, ಸ್ನಾತಕೋತ್ತರ ಡಿಪ್ಲೊಮ ಕೋರ್ಸುಗಳನ್ನು ನಡೆಸಲಾಗುತ್ತಿದೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವ, ಈಗಾಗಲೇ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಿಕೊಂಡಿರುವ ಕಲಾವಿದರು, ಕಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿದವರು: ಸುಧಾ ಆರ್.
ವಿಳಾಸ: ಅಧೀಕ್ಷಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಹೊಳಲ್ಕೆರೆ - 577526

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X