ಶಿವಮೊಗ್ಗ ರೆವಿನ್ಯೂ ಇನ್ಸ್‌ಪೆಕ್ಟರ್ ಲೋಕಾಯುಕ್ತರ ಬಲೆಗೆ

25 ಸಾವಿರ ರು. ಲಂಚ ಕೊಟ್ಟರೆ ಮಾತ್ರ ಖಾತಾ ಎಕ್ಸ್ ಟ್ರಾಕ್ಟ್ ಕೊಡುವುದಾಗಿ ಬಲವಂತ ಮಾಡಿದ್ದ ರೆವಿನ್ಯೂ ಇನ್ಸ್‌ಪೆಕ್ಟರ್ ಆರ್.ಮಂಜುನಾಥ್ ವಿರುದ್ಧ ಬುಧವಾರದಂದು ಸಂಜೆ 4ಕ್ಕೆ ಅಣ್ಣಾನಗರದ ಮುಸ್ತಾಕ್ ಅಹಮ್ಮದ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ದೂರು ಪಡೆದ ಲೋಕಾಯುಕ್ತ ಡಿವೈಎಸ್‌ಪಿಯಾಗಿರುವ ಗಂಗಾಧರಪ್ಪ ಮತ್ತು ತನಿಖಾಧಿಕಾರಿ ಎಂ.ಎನ್.ಕರಿಬಸವನ ಗೌಡರವರು ಬಲೆಯನ್ನು ಸಿದ್ಧ ಪಡಿಸಿದರು. ಎಫ್.ಐ.ಆರ್. ದಾಖಲಿಸಿಕೊಂಡ ನಂತರ ದೂರು ನೀಡಿದ ಮುಸ್ತಾಕ್ ಅಹಮ್ಮದ್ ಕೈಗೆ 25 ಸಾವಿರ ರೂ. ನಗದನ್ನು ನೀಡಿ ಬುಧವಾರ ರಾತ್ರಿ 8 ಗಂಟೆಗೆ ನಗರಸಭೆ ಕಂದಾಯ ವಿಭಾಗಕ್ಕೆ ಕಳುಹಿಸಿದರು. ಅಲ್ಲಿ ಮುಸ್ತಾಕ್ ಅಹಮ್ಮದ್‌ರನ್ನು ಕಾಯುತ್ತಾ ಕುಳಿತಿದ್ದ ಮಂಜುನಾಥ್ ಹಣ ಪಡೆದುಕೊಂಡವನೇ ತನ್ನ ಪ್ಯಾಂಟಿನ ಜೇಬಿನಲ್ಲಿ ತೂರಿಸಿಕೊಂಡ. ಅಲ್ಲಿಯೇ ಕಾಯುತ್ತಾ ನಿಂತಿದ್ದ ಡಿ.ವೈ.ಎಸ್.ಪಿ. ಗಂಗಾಧರಪ್ಪ ಹಾಗೂ ತನಿಖಾಧಿಕಾರಿ ಎಂ.ಎನ್. ಕರಿಬಸವನಗೌಡ ಮತ್ತು ಸಿಬ್ಬಂದಿಗಳು ರೆವಿನ್ಯೂ ಇನ್ಸ್‌ಪೆಕ್ಟರ್ ಮಂಜುನಾಥ್‌ನನ್ನು ಬಂಧಿಸಿ ಆತನ ಬಳಿ ಇದ್ದ ಲಂಚದ ಹಣವನ್ನು ವಶಕ್ಕೆ ತೆಗೆದುಕೊಂಡರು.
ಘಟನೆಯ ವಿವರ:
ಮುಸ್ತಾಕ್ ಅಹಮ್ಮದ್ ಅಣ್ಣಾನಗರದಲ್ಲಿ 162 ಮತ್ತು 163 ಸರ್ವೆ ನಂಬರಿನಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದು, 163ರ ಸರ್ವೆ ನಂಬರಿನಲ್ಲಿರುವ ಮನೆಯನ್ನು 2004ರಲ್ಲಿ ನಿರ್ಮಿಸಿದ್ದರು. 162 ಸರ್ವೆ ನಂಬರಿನ ಮನೆಯನ್ನು 1993ರಲ್ಲಿ ಕಟ್ಟಿಕೊಂಡಿದ್ದರು. ಈ ಸಂಬಂಧ 163 ಸರ್ವೆ ನಂಬರಿನಲ್ಲಿರುವ ಮನೆಯನ್ನು ಮಾರಾಟ ಮಾಡುವ ಉದ್ದೇಶದಿಂದ ಖಾತಾ ಎಕ್ಸ್ ಟ್ರಾಕ್ಟ್ ಪಡೆಯಲು ಅಣ್ಣಾನಗರ ಬಡಾವಣೆಯ ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿರುವ ಮಂಜುನಾಥ್‌ರವರನ್ನು ಸಂಪರ್ಕಿಸಿ ಅರ್ಜಿ ನೀಡಿದ್ದರು.
ಕಂದಾಯ ಬಾಕಿ ಇಲ್ಲದಿದ್ದರೂ 25 ಸಾವಿರ ರು. ಲಂಚ ನೀಡಿದರೆ ಮಾತ್ರ ಖಾತಾ ಎಕ್ಸ್ ಟ್ರಾಕ್ಟ್ ನೀಡುವುದಾಗಿ ಮಂಜುನಾಥ್ ಪಟ್ಟುಹಿಡಿದಿದ್ದ. ಮಂಜುನಾಥ್ ವರ್ತನೆಯಿಂದ ಬೇಸತ್ತ ಮುಸ್ತಾಕ್ ಅಹಮ್ಮದ್ ಬುಧವಾರದಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.












Click it and Unblock the Notifications