ನಾಲ್ಕು ಕಡೆಗೆ ಮಿನಿ ಲಾಲ್ ಬಾಗ್ : ಸಿಎಂ
ಬೆಂಗಳೂರು, ಮೇ. 26 : ನಗರದ ನಾಲ್ಕು ಕಡೆಗಳಲ್ಲಿ ಮಿನಿ ಲಾಲ್ ಬಾಗ್ ಗಳು ಮತ್ತು ಬಾಲ ಭವನ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು. ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಘೋಷಿಸಿರುವಂತೆ ನಗರದಲ್ಲಿ ನಾಲ್ಕು ದೊಡ್ಡಾಸ್ಪತ್ರೆಗಳನ್ನು ನಿರ್ಮಿಸಲಾಗುವುದು. ಒತ್ತುವರಿ ತೆರವುಗೊಳಿಸುವ ಸರಕಾರಿ ಜಮೀನನ್ನು ಯಾರಿಗೂ ಪರಭಾರೆ ಮಾಡುವುದಿಲ್ಲ. ಅಂತಹ ಜಾಗಗಳನ್ನು ಉದ್ಯಾನ, ಮೈದಾನ, ಶಾಲೆ,ಆಸ್ಪತ್ರೆಯಂತಹ ಜನಪಯೋಗಿ ಉದ್ದೇಶಕ್ಕಾಗಿ ಬಳಸಲಾಗುವುದು ಎಂದು ಅವರು ತಿಳಿಸಿದರು.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲ. ಪಕ್ಷಭೇದ ಮರೆತು ಶ್ರಮಿಸಲಾಗುವುದು. ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ಮತ್ತು ವೀರಪ್ಪ ಮೊಯ್ಲಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಬೆಂಗಳೂರಿನ ಸಮಸ್ಯೆಯ ಬಗ್ಗೆ ಸಂಪೂರ್ಣ ಅರಿವಿದೆ. ಕೇಂದ್ರದಿಂದ ಹೆಚ್ಚು ನೆರವು ಸಿಗಲು ಅವರಿಬ್ಬರು ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications