9,237 ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ
ಬೆಂಗಳೂರು, ಮೇ. 21 : ರಾಜಧಾನಿಯ ಕೊಳಗೇರಿ ನಿವಾಸಿಗಳಿಗೆ ಕೊನೆಗೂ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆಗೆ ರಾಜ್ಯ ಸರಕಾರ ಚಾಲನೆ ನೀಡಿದೆ. ಮಾಜಿ ಪ್ರಧಾನಿ ದೇವೇಗೌಡರ ದರಿದ್ರ ನಾರಾಯಣ ಕಾರ್ಯಕ್ರಮಕ್ಕೆ ಪ್ರತಿಯಾಗಿ ರೂಪಿಸಿರುವ ನೆಮ್ಮದಿ ನಾರಾಯಣ ಯೋಜನೆಯಡಿ ನಗರದ ಒಟ್ಟು 9,237 ಕೊಳಗೇರಿ ನಿವಾಸಿಗಳಿಗೆ ಬಿಜೆಪಿ ಸರಕಾರ ಹಕ್ಕುಪತ್ರ ನೀಡಲಿದೆ.
ಎರಡು ಹಂತದಲ್ಲಿ ಬಿಡಿಎ ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಂಡಿರುವ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು. ಈಗಾಗಲೇ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಗುರುತು ಪತ್ರ ನೀಡಲಾಗಿದೆ. 4,437 ಕುಟುಂಬಗಳು ಬಿಡಿಎ ವ್ಯಾಪ್ತಿ ಮತ್ತು 4,800 ಕುಟುಂಬಗಳು ಬಿಬಿಎಂಪಿ ವ್ಯಾಪ್ತಿಗೆ ಸೇರಿವೆ. ಸಂಬಂಧಿಸಿದ ಕ್ರಯಪತ್ರ ಮತ್ತು ಹಕ್ಕುಪತ್ರ ನೀಡಲು ಸಿದ್ಧತೆ ನಡೆಸಿವೆ. ಜೂನ್ 3ರಂದು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications