ಮಾನವೀಯತೆ ಮರೆತ ಶಿವಮೊಗ್ಗ ಪೊಲೀಸರು
ಶಿವಮೊಗ್ಗ, ಮೇ 18 : ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದ ಬೈಕ್ ಸವಾರನ ಮೇಲೆ ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಹೊಯ್ಸಳ-3 ವಾಹನದ ಪೊಲೀಸ್ ಪೇದೆಗಳಾದ ಡಿಸೋಜ ಮತ್ತು ಪರಮೇಶ್ವರಪ್ಪ ಅಮಾನವೀಯವಾಗಿ ನಡೆದುಕೊಂಡ ಘಟನೆ ಭಾನುವಾರದಂದು ರಾತ್ರಿ ನಗರದ ಗೋಪಾಲ ಗೌಡ ಬಡಾವಣೆಯ 100 ಅಡಿ ರಸ್ತೆಯಲ್ಲಿ ನಡೆದಿದೆ.
ಮಂಜುನಾಥ್ ಮತ್ತು ರಾಮಣ್ಣ ಚಲಾಯಿಸುತ್ತಿದ್ದ ಸಿ.ಟಿ. 100 ದ್ವಿಚಕ್ರ ವಾಹನ ಮತ್ತು ಸಂತೋಷ ಎಂಬಾತ ಚಲಾಯಿಸುತ್ತಿದ್ದ ಆರ್‌ಎಕ್ಸ್ ದ್ವಿಚಕ್ರ ವಾಹನ ಪರಸ್ಪರ ಡಿಕ್ಕಿ ಹೊಡೆದ ಕಾರಣ ಮೂವರೂ ಗಾಯಗೊಂಡರು. ಇದೇ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪತ್ರಕರ್ತ ಹಾಗೂ ಶಿವಮೊಗ್ಗ ಸಿಂಹ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಕೂಡಲೇ ತುಂಗಾ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಮಾಹಿತಿ ನೀಡಿದ ಅರ್ಧ ಮುಕ್ಕಾಲು ಗಂಟೆಯ ನಂತರದಲ್ಲಿ ಸ್ಥಳಕ್ಕೆ ಆಗಮಿಸಿದ ಕೆ.ಎ. 14, ಜಿ 456 ನಂಬರಿನ ಹೊಯ್ಸಳ-3 ವಾಹನದಲ್ಲಿ ಡಿಸೋಜ ಮತ್ತು ಪರಮೇಶ್ವರಪ್ಪ ಆಗಮಿಸಿದರು. ತೀವ್ರ ಗಾಯಗಳಾಗಿ ರಕ್ತ ಹರಿಯುತ್ತಿದ್ದ ಸ್ಥಿತಿಯಲ್ಲಿದ್ದ ಮೂವರ ಬಳಿ ನಿಂತು ಇಲ್ಲಸಲ್ಲದ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದ ಡಿಸೋಜ ಮತ್ತು ಪರಮೇಶ್ವರಪ್ಪರವರ ವರ್ತನೆಯಿಂದ ಬೇಸತ್ತ ಗುಂಪುಗೂಡಿದ್ದ ಜನ ತಾವೇ ಇಬ್ಬರು ಸವಾರರನ್ನು ಬೇರೆ ಬೇರೆ ವಾಹನಗಳಲ್ಲಿ ಆಸ್ಪತ್ರೆಗಳಿಗೆ ಕಳಿಸಿಕೊಟ್ಟರು. ಇನ್ನೋರ್ವ ಸವಾರನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಬೇಕೆಂದು ಹೊಯ್ಸಳ-3ರಲ್ಲಿ ಕಳುಹಿಸಿಕೊಟ್ಟರು.
ಹೊಯ್ಸಳ-3 ವಾಹನದಲ್ಲಿ ಮಂಜುನಾಥ್ ಎಂಬ ಗಾಯಾಳುವನ್ನು ಹೊತ್ತೊಯ್ದ ಪರಮೇಶ್ವರಪ್ಪ ಮತ್ತು ಡಿಸೋಜ ಸುರಿಯುತ್ತಿದ್ದ ಮಳೆಯಲ್ಲಿ ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿಕೊಂಡವರು ಗಾಯಾಳುವನ್ನು ಕೆಳಗಿಳಿಸುವ ಹಾಗೂ ಚಿಕಿತ್ಸೆಗೊಳಪಡಿಸುವ ಯಾವುದೇ ಪ್ರಯತ್ನ ಮಾಡದೇ ಮೌನವಾಗಿ ಕುಳಿತುಕೊಂಡಿದ್ದರು. ಈ ವಾಹನವನ್ನು ಹಿಂಬಾಲಿಸಿಕೊಂಡು ಆಸ್ಪತ್ರೆಗೆ ಬಂದ ಚಂದ್ರಶೇಖರ್ ತಾವೇ ಗಾಯಾಳುವನ್ನು ಹೊಯ್ಸಳ-3 ವಾಹನದಿಂದ ಹೊತ್ತು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆ ಒಳಕ್ಕೆ ಕರೆದೊಯ್ದ ಘಟನೆ ನಡೆಯಿತು.
ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಗಾಯಾಳು ಮಂಜುನಾಥ್ ಕುರಿತು ತೀವ್ರ ನಿರ್ಲಕ್ಷ್ಯ ವಹಿಸಿದ ಹೊಯ್ಸಳ-3ರ ಪೊಲೀಸ್ ಪೇದೆಗಳಾದ ಡಿಸೋಜ ಮತ್ತು ಪರಮೇಶ್ವರಪ್ಪ ಇಲ್ಲಸಲ್ಲದ ಮಾತುಗಳನ್ನು ಆಡುತ್ತಲೇ ಕಾಲ ಕಳೆದರೇ ಹೊರತು ಬೇರೇನೂ ಮಾಡದೆ ತಮ್ಮ ಪೊಲೀಸ್ ಬುದ್ಧಿ ತೋರಿಸಿದರು.
ಈ ಅಪಘಾತದಲ್ಲಿ ಮಿಳಘಟ್ಟದ ಗುತ್ತಿಗೆದಾರ ಸ್ವಾಮಿ ಎಂಬುವವರ ಮಗ ಸಂತೋಷನನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಂಜುನಾಥ್‌ನನ್ನು ಮೆಗ್ಗಾನ್ ಆಸ್ಪತ್ರೆ ಹಾಗೂ ರಾಮಣ್ಣನನ್ನು ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ನಡುವೆ ಪೊಲೀಸರು ಮಾತ್ರ ಎರಡೂ ದ್ವಿಚಕ್ರ ವಾಹನಗಳು ಮರಕ್ಕೆ ಡಿಕ್ಕಿ ಹೊಡೆದಿವೆ ಎಂಬ ದೂರನ್ನು ದಾಖಲಿಸಿಕೊಂಡು ಮತ್ತೊಂದು ನಾಟಕ ಮಾಡಲು ಹೊರಟಿದ್ದಾರೆ.
ಜನರಿಗೆ ಅನುಕೂಲವಾಗಲೆಂದು ನಿರ್ಮಾಣಗೊಂಡ ನೂತನ ತುಂಗಾನಗರ ಠಾಣೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವ ಪರಿಸ್ಥಿತಿ ಹೆಚ್ಚಾಗಿ ಕಾಣಬರುತ್ತಿದೆ.












Click it and Unblock the Notifications