ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಆರಂಭ
ಬೆಂಗಳೂರು, ಮೇ. 6 : ವೃತ್ತಿ ಶಿಕ್ಷಣ ಸೀಟು ಆಯ್ಕೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ 2009ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಬುಧವಾರದಿಂದ ಆರಂಭವಾಗಿದೆ. ಬೆಂಗಳೂರಿನ 59 ಕೇಂದ್ರಗಳು ಸೇರಿ ರಾಜ್ಯಾದ್ಯಂತ 227 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ.
ಇಂಜನಿಯರಿಂಗ್, ವೈದ್ಯ, ದಂತ ವೈದ್ಯ. ಐಎಸ್ ಎಂ, ಹೋಮಿಯೋಪತಿ ಸೀಟು ಆಯ್ಕೆಗೆ ಈ ಬಾರಿ 1,20,373 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 32,513 ವಿದ್ಯಾರ್ಥಿಗಳು ಬೆಂಗಳೂರಿನ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಲಿದ್ದಾರೆ. ಕಳೆದ ಬಾರಿಗಿಂತ 4 ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ.
ಒಂದೇ ದಿನದಲ್ಲಿ ನಡೆಯುತ್ತಿದ್ದ ಸಿಇಟಿಯನ್ನು ಈ ಸಾಲಿನಿಂದ ಎರಡು ದಿನಕ್ಕೆ ವಿಸ್ತರಿಸಲಾಗಿದೆ. ಹೀಗಾಗಿ ಬುಧವಾರ ಮತ್ತು ಗುರುವಾರ ಒಟ್ಟು 4 ಅವಧಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಮೇ 6ಕ್ಕೆ ಜೀವಶಾಸ್ತ್ರ (ಬೆಳಗ್ಗೆ 10.30ರಿಂದ 11.50), ಗಣಿತ (ಮಧ್ಯಾಹ್ನ 2.30 ರಿಂದ 3.50) ಹಾಗೂ ಮೇ 7 ರಂದು ಭೌತಶಾಸ್ತ್ರ (ಬೆಳಗ್ಗೆ 10.30ರಿಂದ 11.50), ರಸಾಯನ ಶಾಸ್ತ್ರ (ಮಧ್ಯಾಹ್ನ 2.30 ರಿಂದ 3.50) ನಡೆಯಲಿದೆ ಎಂದು ಪ್ರಾಧಿಕಾರ ತಿಳಿಸಿದೆ. ಮೇ 8 ರಂದು ಗಡಿನಾಡು ಅಭ್ಯರ್ಥಿಗಳಿಗೆ ಬೆಳಗ್ಗೆ 11ಕ್ಕೆ ಹಾಗೂ ಹೊರನಾಡು ಕನ್ನಡಿಗರಿಗೆ ಮಧ್ಯಾಹ್ನ 1 ಪರೀಕ್ಷೆ ನಡೆಯಲಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications