ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ ಮಾಡುವುದು ಕಡ್ಡಾಯ ಆಗಬೇಕು

By Staff
|
Google Oneindia Kannada News

Voting in elections should be made mandatory
ಬಡ ಬೋರೇಗೌಡ, ಯಾವುದೋ ಗುಡಿಸಲಲ್ಲಿ ಕಾಲ ಕಳೆಯುತ್ತಿರುವ ಹಳ್ಳಿ ಮನುಷ್ಯ ನೋಟಿನ ಆಸೆಗೋ, ಹೆಂಡಕ್ಕೋ ಮತ ಮಾರಿಕೊಳ್ಳುತ್ತಿದ್ದಾನೆ ಅಂದರೆ ಅಪಾಯಕಾರಿ ಸಂಗತಿ, ಹಾಗೆಯೇ ಹೀಗೆನ್ನುವವರು ತಮಗೇನೂ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮತದಾನದಿಂದ ದೂರ ಉಳಿಯುವುದು ಅಪಾಯಕಾರಿ ಮಾತ್ರವಲ್ಲ ಆತ್ಮವಂಚನೆ ಕೂಡಾ. ಕೆಟ್ಟ ರಾಜಕಾರಣಿಗಳನ್ನು ಪ್ರಶ್ನಿಸುವಂತೆ ಮತದಾನ ಮಾಡದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸುವ ಮಂದಿಯನ್ನೂ ಪ್ರಶ್ನಿಸಬೇಕು, ಇದಕ್ಕೆ ಅವರು ಅರ್ಹರು ಕೂಡಾ.

* ಚಿದಂಬರ ಬೈಕಂಪಾಡಿ, ಮಂಗಳೂರು

ಎರಡನೇ ಹಂತದಲ್ಲಿ ಮತದಾರರು ಮತಗಟ್ಟೆಯತ್ತ ಹೆಜ್ಜೆ ಹಾಕಲು ಕೆಲವೇ ದಿನಗಳು ಉಳಿದಿವೆ. ರಾಜಕೀಯ ಪಕ್ಷಗಳು ತಮಗೇ ಜಯ ಕಟ್ಟಿಟ್ಟಬುತ್ತಿಯೆಂದು ಭ್ರಮಿಸಿ ಸಂಭ್ರಮಿಸುತ್ತಿದ್ದಾರೆ. ಹಣ, ಹೆಂಡಕ್ಕೆ ಕಡಿವಾಣ ಹಾಕಬೇಕೆಂದು ಎಷ್ಟೇ ಗಟ್ಟಿಯಾಗಿ ಹೇಳಿದರೂ ಪ್ರಾಕ್ಟಿಕಲ್ಲಾಗಿ ಅದು ಅಸಾಧ್ಯವೆಂದು ವಶಪಡಿಸಿಕೊಂಡಿರುವ ಹಣ ಮತ್ತು ಹೆಂಡವೇ ಹೇಳುತ್ತಿವೆ. ಆದರೂ ಮತದಾನ ಮಾಡುವ ಹಾಗೂ ಆಮೂಲಕ ಪ್ರಭುಗಳನ್ನು ಆಯ್ಕೆಮಾಡುವ ಅಧಿಕಾರವನ್ನು ಕೈಯಲ್ಲಿಟ್ಟುಕೊಂಡಿರುವಷ್ಟರಮಟ್ಟಿಗೆ ಮತದಾರ ಖುಷಿಯಾಗಿದ್ದಾನೆ.

ಮೊದಲ ಹಂತದಲ್ಲಿ ಚುನಾವಣೆ ಆಗಿರುವ ಕ್ಷೇತ್ರಗಳಲ್ಲಿ ಯಾಕೆ ಕಡಿಮೆ ಮತದಾನ ಆಗಿದೆ ಎನ್ನುವುದು ಕೇವಲ ಪ್ರಶ್ನೆ ಮಾತ್ರವಲ್ಲ, ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒದಗುತ್ತಿರುವ ಅಪಾಯದ ಸಂಕೇತ ಕೂಡ. ಜನರು ಓಟು, ಅಧಿಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ಎನ್ನುವ ಸಂಶಯ ಕಾಡುತ್ತಿದೆ. ಪತ್ರಿಕೆ, ಇಲೆಕ್ಟ್ರಾನಿಕ್ ಮಾಧ್ಯಮಗಳು ನೀಡುತ್ತಿರುವ ಅಬ್ಬರದ ಪ್ರಚಾರದ ಹೊರತಾಗಿಯೂ ಮತದಾನದ ಪ್ರಮಾಣ ಗಣನೀಯವಾಗಿ ತಗ್ಗುತ್ತಿರುವುದು ನಿಜಕ್ಕೂ ಆತಂಕಪಡುವ ಸಂಗತಿ. ಯಾವುದೋ ಬೆಟ್ಟಗುಡ್ಡಗಳ ನಾಡಲ್ಲಿ ಅಥವಾ ಜಮ್ಮು ಕಾಶ್ಮೀರದಂಥ ಭಯಭೀತ ಪ್ರದೇಶದಲ್ಲಿ ಜನರು ಮತದಾನಕ್ಕೆ ಬರಲು ಹೆದರಿರಬೇಕು ಅಂದುಕೊಳ್ಳಬಹುದಿತ್ತು. ಆದರೆ ಕರ್ನಾಟಕದಲ್ಲಿ, ಅದರಲ್ಲೂ ಪಟ್ಟಣಪ್ರದೇಶಗಳಲ್ಲಿ ಶೇ.50ರಿಂದ 55ರ ನಡುವೆ ಮತದಾನ ಆಗಿದೆ ಅಂದರೆ ಭವಿಷ್ಯದ ಬಗ್ಗೆ ಕಳವಳಪಡದೆ ಇರಲು ಸಾಧ್ಯವೇ?

ಅವಿದ್ಯಾವಂತರು ಮತ್ತು ಹಳ್ಳಿಗಾಡಿನ ಮಂದಿ ಮತದಾನ ಮಾಡಿದ್ದಾರೆ, ಬಹುತೇಕ ಮಧ್ಯಮ ಮತ್ತು ಅದಕ್ಕೂ ಮೇಲ್ಪಟ್ಟವರು ಮತದಾನ ಮಾಡಿಲ್ಲ ಎನ್ನುವುದು ವಾಸ್ತವ ಸತ್ಯ. ತಿಳಿವಳಿಕೆ ಉಳ್ಳವರೇ ಮತಗಟ್ಟೆಗೆ ತೆರಳದೆ ದೂರ ಉಳಿದಿರುವುದಕ್ಕೆ ಕಾರಣ ಹುಡುಕಿದರೆ ಯಾರು ಆರಿಸಿ ಬಂದರೂ ಯಾವ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವ ಪೂರ್ವನಿರ್ಧಾರಿತ ನಿಲುವು ತಳೆದಿರುವುದು. ಮತದಾನದ ದಿನ ಸಾರ್ವತ್ರಿಕ ರಜೆ ಕೊಡುವುದು ಹಾಯಾಗಿ ದಿನ ಕಳೆಯಲು ಎಂದುಕೊಂಡಿದ್ದಾರೆ ಅಕ್ಷರದ ಅರಿವಿರುವ ಬುದ್ದಿವಂಥ ಮಂದಿ. ಮನೆ ಮಂದಿ ಜೊತೆ ರಜೆ ಮಜಾ ಕಳೆದು ನಕ್ಕು ಹಗುರಾಗುವುದು ಅವರ ಜೀವನಶೈಲಿ ಇರಬಹುದು, ಅದನ್ನು ಖಂಡಿತಕ್ಕೂ ಪ್ರಶ್ನೆ ಮಾಡುವುದಿಲ್ಲ, ಆದು ಅವರ ಸ್ವಾತಂತ್ರ್ಯ. ಆದರೆ ಪ್ರಜಾಪ್ರಭುತ್ವದಲ್ಲಿ ಸಿಕ್ಕಿರುವ ಮತದಾನದ ಹಕ್ಕನ್ನು ಚಲಾಯಿಸದಿರುವುದು ಪ್ರಶ್ನಾರ್ಹ. ಬಡ ಬೋರೇಗೌಡ, ಯಾವುದೋ ಗುಡಿಸಲಲ್ಲಿ ಕಾಲ ಕಳೆಯುತ್ತಿರುವ ಹಳ್ಳಿ ಮನುಷ್ಯ ನೋಟಿನ ಆಸೆಗೋ, ಹೆಂಡಕ್ಕೋ ಮತ ಮಾರಿಕೊಳ್ಳುತ್ತಿದ್ದಾನೆ ಅಂದರೆ ಅಪಾಯಕಾರಿ ಸಂಗತಿ, ಹಾಗೆಯೇ ಹೀಗೆನ್ನುವವರು ತಮಗೇನೂ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮತದಾನದಿಂದ ದೂರ ಉಳಿಯುವುದು ಅಪಾಯಕಾರಿ ಮಾತ್ರವಲ್ಲ ಆತ್ಮವಂಚನೆ ಕೂಡಾ.

ಮತದಾನದಿಂದ ದೂರ ಉಳಿದ ಮಾತ್ರಕ್ಕೆ ಇಡೀ ವ್ಯವಸ್ಥೆ ಸುಧಾರಿಸುವುದಿಲ್ಲ. ಸುಧಾರಣೆ ಆಗಬೇಕಾದರೆ ಮತಗಟ್ಟೆಗೆ ಬಂದು ಮತ ಚಲಾಯಿಸಿ ತಮಗೆ ಬೇಕಾದವರನ್ನು ಆರಿಸಬೇಕು, ಆಮೂಲಕ ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬಹುದು. ಇದು ಹೊಸ ಥಿಯರಿ ಅಂತೇನೂ ಯಾರೂ ಭಾವಿಸಬಾರದು. ಅದೆಷ್ಟೋ ವರ್ಷಗಳಿಂದ ಈ ಮಾತುಗಳನ್ನು ಹೇಳುತ್ತಲೇ ಬಂದಿದ್ದೇವೆ, ಕೇಳುತ್ತಲೇ ಇದ್ದೇವೆ. ಆದರೂ ಮತದಾನದ ಪ್ರಮಾಣ ಮಾತ್ರ ಹೆಚ್ಚುತ್ತಿಲ್ಲ.

ಬಹುಷಃ ಮುಂದಿನ ದಿನಗಳಲ್ಲಿ ಮತದಾನ ಮಾಡುವುದು ಕಡ್ಡಾಯವೆಂದು ಸರ್ಕಾರ ಘೋಷಣೆ ಮಾಡುವ ಅನಿವಾರ್ಯತೆ ಬಂದರೂ ಆಶ್ಚರ್ಯವಿಲ್ಲ. ಶಾಸನದಲ್ಲೇ ಮತದಾನ ಕಡ್ಡಾಯವಾದರೆ ಮಾತ್ರ ಹೊಸ ಬೆಳವಣಿಗೆ ಕಾಣಲು ಸಾಧ್ಯವಾಗಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಲ ಕಾಲಕ್ಕೆ ನಡೆಯುವ ಚುನಾವಣೆಗಳಲ್ಲಿ ಈತ ಮತಚಲಾಯಿಸಿದ್ದಾನೆ ಎನ್ನುವುದಕ್ಕೆ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾದರೆ ಉದಾಸೀನ ಮಾಡುತ್ತಿರುವವರನ್ನು ನಿಯಂತ್ರಿಸಬಹುದು. ಮತದಾನ ಮಾಡಿದವರಿಗೆ ಇಂತಿಷ್ಟು ಇನ್ಸೆಂಟಿವ್ ಅಂತೇನಾದರೂ ಘೋಷಣೆ ಮಾಡಿದರೆ ಸಾಕು ಸರ್ಕಾರಿ, ಅರೆಸರ್ಕಾರಿ, ಬ್ಯಾಂಕ್ ಸಹಿತ ಮಧ್ಯಮ ಮತ್ತು ಅದಕ್ಕೂ ಮೇಲ್ಪಟ್ಟವರು ಮತಗಟ್ಟೆಗಳ ಮುಂದೆ ಸರತಿಯ ಸಾಲಿನಲ್ಲಿ ನಿಲ್ಲುವುದನ್ನು ನೋಡಲು ಅದೆಷ್ಟು ಸಂತಸ ಆಗಬಹುದು?

ಕೆಟ್ಟ ರಾಜಕಾರಣಿಗಳನ್ನು ಪ್ರಶ್ನಿಸುವಂತೆ ಮತದಾನ ಮಾಡದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧಿಕ್ಕರಿಸುವ ಮಂದಿಯನ್ನೂ ಪ್ರಶ್ನಿಸಬೇಕು, ಇದಕ್ಕೆ ಅವರು ಅರ್ಹರು ಕೂಡಾ.

ಪೂರಕ ಓದಿಗೆ
ಮತದಾರರಾದ ನಾವಾದರೂ ಎಂಥವರು?
ನಮ್ಮ ರಾಜಕಾರಣಿಗಳು ಎಂಥವರೆಂದರೆ...
ಮತದಾರರೇ, ನಿಮ್ಮ ಓಟು ಯಾರಿಗೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X