ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರಾದ ನಾವಾದರೂ ಎಂಥವರು?

By Staff
|
Google Oneindia Kannada News

Every citizen should vote
ಪ್ರಜಾತಂತ್ರವೆಂಬುದು ಯಾವುದೋ ಒಬ್ಬ ಪ್ರತಿನಿಧಿಯನ್ನು ಸಂಸತ್ತಿಗೆ ಆರಿಸಿ ಕಳುಹಿಸಿ ಅಧಿಕಾರ ಚುಕ್ಕಾಣಿ ಆತನ ಕೈಗೆ ಕೊಟ್ಟು ಸುಮ್ಮನೆ ನೋಡುತ್ತ ಕುಳಿತುಕೊಳ್ಳುವುದಲ್ಲ. ಮತದಾರರಾದ ನಮ್ಮ ಜವಾಬ್ದಾರಿಯನ್ನು ಅರಿತು ಪ್ರಜ್ಞಾವಂತಿಕೆಯಿಂದ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. 'ಅಯ್ಯೋ...' ಎಂದು ರಾಗ ಎಳೆಯದೆ, ಸಿನಕತನ ತೋರದೆ ಜಾಗೃತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಯೋಗ್ಯ ಅಭ್ಯರ್ಥಿಯನ್ನು ಆರಿಸುವ ಜವಾಬ್ದಾರಿ ನಮ್ಮದೇ ಎಂದು ಪ್ರತಿಯೊಬ್ಬರೂ ಅರಿಯಬೇಕು.

* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ನಮ್ಮ ರಾಜಕಾರಣಿಗಳ ಗೋಸುಂಬೆತನವನ್ನು ಕಂಡಾಗ ನಮಗೆ ಅಸಹ್ಯವೆನ್ನಿಸುತ್ತದೆ; ಅವರ ಗೋಮುಖವ್ಯಾಘ್ರರೂಪವನ್ನು ಅರಿತಾಗ ನಮಗೆ ಕೋಪ ಉಕ್ಕಿಬರುತ್ತದೆ. ಚುನಾವಣೆಯ ಸಮಯದಲ್ಲಿ ಅವರು, 'ಕಲ್ಲುಸಕ್ಕರೆ ಕೊಳ್ಳಿರೋ', ಎಂದು ಸಿಹಿಮಾತಿನ ಕಲ್ಲುಸಕ್ಕರೆ ಕೊಡಲು ನಮ್ಮ ಬಳಿ ಬಂದಾಗ, ಅವರನ್ನು ಹೊಡೆದಟ್ಟಲು 'ಕಲ್ಲು ಸಿಕ್ಕರೆ ಕೊಳ್ಳಿರೋ', ಎಂದೆನ್ನಬೇಕೆನ್ನಿಸುತ್ತದೆ ನಮಗೆ. ಸರಿಯೇ. ಆದರೆ ಮತದಾರರಾದ ನಾವೆಂಥವರು?

ಚುನಾವಣೆಯ ದಿನ ಮತದಾನ ಮಾಡಬೇಕಾದ ಕರ್ತವ್ಯವನ್ನು ನಾವು ಅದೆಷ್ಟು ಮಂದಿ ತಪ್ಪದೇ ಪಾಲಿಸುತ್ತೇವೆ? ಅರ್ಧಕ್ಕೂ ಹೆಚ್ಚು ಜನ ಆ ದಿನ ಮತದಾನ ಮಾಡದೆ ಮನೆಯಲ್ಲೇ ಕುಳಿತುಕೊಳ್ಳುತ್ತೇವಲ್ಲಾ, ರಾಜಕಾರಣಿಗಳು ಮಾತ್ರವಲ್ಲ, ನಾವೂ ಸರಿಯಾಗಬೇಕಲ್ಲವೆ?

ಮತದಾನ ಮಾಡದಿರುವವರಲ್ಲಿ ಸುಶಿಕ್ಷಿತರದೇ ಸಿಂಹಪಾಲು ಎಂಬುದು ನಾಚಿಕೆಗೇಡಿನ ವಿಷಯವಲ್ಲವೆ? ಅಕ್ಷರಜ್ಞಾನವಿಲ್ಲದವರು ಮತಗಟ್ಟೆಗೆ ಹೋಗಿ ಮತ ನೀಡುವಾಗ ಸುಶಿಕ್ಷಿತರಾದ ನಾವು ಮನೆಯಲ್ಲೇ ಉಳಿದರೆ ನಮಗೆ ಒಳ್ಳೆಯ ಆಡಳಿತ ದೊರೆಯುವುದಾದರೂ ಹೇಗೆ? ಅಶಿಕ್ಷಿತ ಮತದಾರರನ್ನು ಓಲೈಸಿ, ಹಣ-ಹೆಂಡ-ಉಡುಗೊರೆಗಳ ಆಮಿಷಕ್ಕೊಳಪಡಿಸಿ ಈ ನಮ್ಮ ರಾಜಕಾರಣಿಗಳು ದಾರಿ ತಪ್ಪಿಸಲೆತ್ನಿಸುವಾಗ ವಿದ್ಯಾವಂತ ನಾಗರಿಕರಾದ ನಾವು ಸ್ವಯಂ ಮತ ನೀಡುವುದಷ್ಟೇ ಅಲ್ಲ, ತಿಳಿವಳಿಕೆಯಿಲ್ಲದ ಮುಗ್ಧರಿಗೆ ಸೂಕ್ತ ಮಾರ್ಗದರ್ಶನವನ್ನೂ ಮಾಡಬೇಕಲ್ಲವೆ? ಹಾಗಿರುವಾಗ ನಾವೇ ಮತ ನೀಡದೆ ಮನೆಯಲ್ಲಿ ಕುಳಿತರೆ ಒಳ್ಳೆಯ ಆಡಳಿತ ಬರುವುದಾದರೂ ಹೇಗೆ? ಆಮೇಲೆ ಸರ್ಕಾರವನ್ನು ದೂರುವವರೂ ನಾವೇ ಅಲ್ಲವೆ?

'ಎಲ್ಲ ಪಕ್ಷಗಳವರೂ ಅಯೋಗ್ಯರೇ; ಹಾಗಿರುವಾಗ ಮತದಾನ ಮಾಡಿದರೆಷ್ಟು ಬಿಟ್ಟರೆಷ್ಟು', ಎಂದು ಸಿನಿಕರಂತೆ ಮಾತನಾಡುವ ವಿದ್ಯಾವಂತರಿಗೆ ನನ್ನ ಪ್ರಶ್ನೆ ಇಷ್ಟೆ, ನೀವು ಹೋಗಿ ಇದ್ದುದರಲ್ಲೇ ಯೋಗ್ಯರಿಗೆ ಮತ ನೀಡಿದರೆ ಫಲಿತಾಂಶ ಬೇರೆಯೇ ಆಗಬಹುದಲ್ಲವೆ? ಇದ್ದುದರಲ್ಲೇ ಉತ್ತಮವಾಗಬಹುದಲ್ಲವೆ? ಯೋಗ್ಯನಾದ ಪಕ್ಷೇತರ ಅಭ್ಯರ್ಥಿಗೂ ನೀವು ಮತ ನೀಡಿ ಪ್ರೋತ್ಸಾಹಿಸಬಹುದಲ್ಲವೆ? ಅಂಥ ಅಭ್ಯರ್ಥಿಯನ್ನು ಆರಿಸಬಹುದಲ್ಲವೆ? ಮುಂದಿನ ಆಮೂಲಾಗ್ರ ಬದಲಾವಣೆಗೆ ಈ ನಿಮ್ಮ ಕ್ರಮವು ನಾಂದಿಯಾಗಬಹುದಲ್ಲವೆ? ವಿವಿಧ ಪಕ್ಷಗಳಿಗೆ ನೀವು ಚುರುಕು ಮುಟ್ಟಿಸಿದಂತಾಗಿ, ಮುಂದಿನ ಸಲ ಆ ಪಕ್ಷಗಳು ಬೆಟರ್ ಕ್ಯಾಂಡಿಡೇಟನ್ನು ಚುನಾವಣೆಗೆ ನಿಲ್ಲಿಸಿಯಾವಲ್ಲವೆ? ಹೀಗೆ ಆರಂಭವಾದ ಸಕರಾತ್ಮಕ ಬದಲಾವಣೆಯು ಕಾಲಕ್ರಮದಲ್ಲಿ ಪರಿಪೂರ್ಣತೆಯ ಹಂತವನ್ನು ತಲುಪುವುದು ನಿಶ್ಚಿತ ತಾನೆ?

ಸುಶಿಕ್ಷಿತರಾದ ನಾವು ಮತದಾನ ಮಾಡದಿರುವುದರಿಂದ, ಮತ್ತು, ಮತದಾನ ಮಾಡುವವರಲ್ಲಿ ಬಹುತೇಕರು ಸ್ವಜಾತಿ, ಸ್ವಮತ ಹಾಗೂ ನಿರ್ದಿಷ್ಟ ಪಕ್ಷದ ಒಲವಿನಿಂದ ಮತದಾನ ಮಾಡುವುದರಿಂದ ಎಷ್ಟೋ ಕ್ಷೇತ್ರಗಳಲ್ಲಿ 'ಅತಿ ಹೆಚ್ಚು ಅಯೋಗ್ಯ' ಅಭ್ಯರ್ಥಿಯೇ ಆಯ್ಕೆಯಾಗಿರುತ್ತಾನೆ. ನಮ್ಮ ಯೋಗ್ಯತೆಗೆ ತಕ್ಕ ಸರ್ಕಾರ! ಏನಂತೀರಿ?

'ಮೂರ್ಖರಾದರು ಜನರು ಲೋಕದೊಳಗೆ, ಏಕದೈವವ ಬಿಟ್ಟು ಕಾಕುದೈವವ ಭಜಿಸಿ', ಎಂಬ ದಾಸವಾಣಿಯಂತೆ, 'ಮೂರ್ಖರಾದೆವು ನಾವು ದೇಶದೊಳಗೆ, ಯೋಗ್ಯ ಮನುಜನ ಬಿಟ್ಟಯೋಗ್ಯನನು ನಾವ್ ಗೆಲಿಸಿ', ಎಂಬಂತಾಗುತ್ತದೆ ಆಗ ನಮ್ಮ ಕಥೆ. ಆಮೇಲೆ ನಾವು, 'ಮೋಸಹೋದೆವಲ್ಲ, ತಿಳಿಯದೆ ಮೋಸಹೋದೆವಲ್ಲ, ಕ್ಲೇಶನಾಶವನು ಮಾಡುವ ಶ್ರೀ ಸುಯೋಗ್ಯನನು ಲೇಸಾಗಿ ಆರಿಸದೆ!' ಎಂದು ಧನ್ಯಾಸಿ ರಾಗದಲ್ಲಿ ಅಲವತ್ತುಕೊಂಡರೆ ಏನು ಪ್ರಯೋಜನ? 'ಏಕೆ ಮೂರ್ಖನಾದ್ಯೋ, ಮನವೇ, ಏಕೆ ಮೂರ್ಖನಾದ್ಯೋ?' ಎಂದು ಆಗ ನಾವು ಕಾಂಭೋದಿ ರಾಗದಲ್ಲಿ ನಮ್ಮನ್ನೇ ಹಳಿದುಕೊಳ್ಳಬೇಕಾಗುತ್ತದೆ. ಕೊನೆಗೆ ನಾವು ಹತಾಶರಾಗಿ, 'ಲೊಳಲೊಟ್ಟೆ, ಎಲ್ಲಾ ಲೊಳಲೊಟ್ಟೆ', ಎಂದು ಶಂಕರಾಭರಣ ರಾಗದಲ್ಲಿ ಹಾಡತೊಡಗುತ್ತೇವೆ. ಹೀಗೆ 'ಧನ್ಯಾಸಿ-ಸನ್ಯಾಸಿ'ಗಳಾಗುವ ಬದಲು ನಾವು ಮತಗಟ್ಟೆಗೆ ಬಿಜಯಂಗೈದು ಮತದಾನ ಮಾಡುವ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಯತ್ನಿಸಬಹುದಲ್ಲ? ಬದಲಾವಣೆಯೆಂಬುದು ನಮ್ಮಿಂದಲೇ ಆರಂಭವಾಗಬೇಕೇ ಹೊರತು ಇನ್ನ್ಯಾರೋ ಬದಲಾಯಿಸುತ್ತಾರೆಂದು ಕೂರುವುದು ತರವಲ್ಲ ತಾನೆ?

ವ್ಯವಸ್ಥೆಯಲ್ಲಿ ಬದಲಾವಣೆಯೆಂಬುದು ತಂತಾನೇ ಆಗುವಂಥದೂ ಅಲ್ಲ; ನಾವೇ ಪ್ರಯತ್ನಪೂರ್ವಕವಾಗಿ ಮಾಡಬೇಕಾದುದು ಅದು. ಅದು ದಿಢೀರನೆ ಆಗುವಂಥದೂ ಅಲ್ಲ. ಹಾಕಿಕೊಂಡ ಶರ್ಟ್ ಬದಲಾಯಿಸಲೂ ನಮಗೆ ನಿಮಿಷಗಳ ಸಮಯ ಬೇಕಾಗುತ್ತದೆ. ಸುಶಿಕ್ಷಿತರ ಮತದಾನದ ಮೂಲಕ, ಎಲ್ಲರೂ ತಪ್ಪದೇ ಮತದಾನ ಮಾಡುವ ಮೂಲಕ ಮತ್ತು ಜಾತಿ, ಮತ, ಪಕ್ಷಗಳ ಒಲವನ್ನು ಮೀರಿ (ಇದ್ದುದರಲ್ಲಿಯೇ) ಉತ್ತಮ ಅಭ್ಯರ್ಥಿಗೆ ಮತ ನೀಡುವ ಮೂಲಕ ಕಾಲಕ್ರಮದಲ್ಲಿ ವ್ಯವಸ್ಥೆಯಲ್ಲಿ ಇತ್ಯಾತ್ಮಕ ಬದಲಾವಣೆಯನ್ನು ನಾವೇ ತರಬೇಕು ಮತ್ತು ಇದು ನಮ್ಮಿಂದ ಖಂಡಿತ ಸಾಧ್ಯ. ಮತದಾರರಾದ ನಮಗೆ ನಂಬಿಕೆ ಬೇಕು, ತಾಳ್ಮೆ ಬೇಕು ಮತ್ತು ಕರ್ತವ್ಯಪ್ರಜ್ಞೆ ಬೇಕು ಅಷ್ಟೆ.

ಈ ಸಲದ ಚುನಾವಣೆಯಲ್ಲಿ ನಾವೆಲ್ಲ ಈ ಕರ್ತವ್ಯಪ್ರಜ್ಞೆ ಮೆರೆಯೋಣ. ತಪ್ಪದೇ ಮತಗಟ್ಟೆಗೆ ಹೋಗಿ ಮತದಾನ ಮಾಡೋಣ. ಇದ್ದುದರಲ್ಲಿಯೇ ಯೋಗ್ಯ ಅಭ್ಯರ್ಥಿಗೆ ಮತ ನೀಡೋಣ. ತನ್ಮೂಲಕ ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡೋಣ.

ಓದಿ : ನಮ್ಮ ರಾಜಕಾರಣಿಗಳು ಎಂಥವರೆಂದರೆ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X