ಅಪಘಾತ: ವಿದ್ಯಾರ್ಥಿ ಸಾವು, ಬಿಎಂಟಿಸಿ ಬಸ್ ಗೆ ಬೆಂಕಿ
ಬೆಂಗಳೂರು, ಮಾ. 17 : ಬೈಕ್ ಸವಾರನೊಬ್ಬ ಬಿಎಂಟಿಸಿ ಬಸ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಮೃತಪಟ್ಟ ಹಿನ್ನೆಲೆಯಲ್ಲಿ ಉದ್ರಿಕ್ತಗೊಂಡ ಆತನ ಸಂಬಂಧಿಕರು ಮತ್ತು ಸ್ನೇಹಿತರು ಬಸ್ ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಮಹದೇವಪುರ ರಿಂಗ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.
ಮಹದೇವಪುರ ಬಳಿಯ ಸರಸ್ವತಿನಗರ ನಿವಾಸಿ ರಾಮಚಂದ್ರರೆಡ್ಡಿ ಎಂಬುವರ ಮಗ ಮಧು (22) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಮಾರತ್ ಹಳ್ಳಿಯಿಂದ ಕೆ ಆರ್ ಪುರಕ್ಕೆ ಹೋಗುತ್ತಿದ್ದ ಬಸ್ ಮಹದೇವಪುರ ರಸ್ತೆಯ ಎಂಟಿಬಿ ಕಲ್ಯಾಣ ಮಂಟಪದ ಬಳಿ ಬರುತ್ತಿದ್ದಂತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಲುವಾಗಿ ಅದರ ಚಾಲಕ ಬ್ರೇಕ್ ಹಾಕಿದ, ಇದೇ ವೇಳೆ ಹಿಂಬದಿಯಲ್ಲಿ ಬೈಕ್ ನಲ್ಲಿ ವೇಗವಾಗಿ ಬರುತ್ತಿದ್ದ ಮಧು ಬಸ್ ಗೆ ಡಿಕ್ಕಿ ಹೊಡೆದ. ಪರಿಣಾಮ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications