ಸಿದ್ದರಾಮಯ್ಯ ವಿರೋಧಿ ಪಕ್ಷದ ನಾಯಕ ಸಾಧ್ಯತೆ
ಬೆಂಗಳೂರು, ಫೆ. 16 : ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ಎನಿಸಿರುವ ಸಿದ್ದರಾಮಯ್ಯ ಅವರಿಗೆ ಸೂಕ್ತ ಸ್ಥಾನಮಾನ ನೀಡಲು ಹೈಕಮಾಂಡ್ ಆಸಕ್ತಿ ವಹಿಸಿದೆ. ಪ್ರತಿಪಕ್ಷದ ನಾಯಕವಾಗಿರುವ ಮಲ್ಲಿಕಾರ್ಜುನ ಖರ್ಗೆ ಜಾಗದಲ್ಲಿ ಸಿದ್ದು ಕೂರಿಸಲು ಸೋನಿಯಾ ಗಾಂಧಿ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಹಾಗೂ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ದೆಹಲಿಗೆ ಬರಲು ಸೂಚನೆ ಬಂದಿದ್ದು, ಅವರು ದೆಹಲಿಗೆ ತೆರಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂದು ಹಠ ತೊಟ್ಟಂತಿರುವ ಕಾಂಗ್ರೆಸ್ ಪಕ್ಷ ತನ್ನ ಹಿರಿಯ ಮುಖಂಡರನ್ನು ಅಖಾಡಕ್ಕಿಳಿಸಲು ಸಿದ್ದತೆ ಮಾಡಿಕೊಳ್ಳತೊಡಗಿದೆ. ಒಂದು ಮೂಲದ ಪ್ರಕಾರ ಖರ್ಗೆ ಅವರನ್ನು ಗುಲ್ಬರ್ಗಾ ಕ್ಷೇತ್ರ ಹಾಗೂ ಧರ್ಮಸಿಂಗ್ ಅವರನ್ನು ಬೀದರ್ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಆದೆರ ಈ ಇಬ್ಬರೂ ನಾಯಕರಿಗೂ ದೆಹಲಿ ರಾಜಕಾರಣ ಅಷ್ಟಕಷ್ಟೆ. ಅದರೆ, ಹೈಕಮಾಂಡ್ ಅನುಮತಿ ನೀಡಿದರೆ ಸ್ಪರ್ಧೆ ಮಾಡಲೆಬೇಕಾಗುತ್ತದೆ.
ಖರ್ಗೆ ಅವರಿಗೆ ಲೋಕಸಭೆ ಸ್ಪರ್ಧೆ ಎಳ್ಳಷ್ಟು ಮನಸ್ಸಿಲ್ಲ. ಆದರೂ ಸೋನಿಯಾ ಗಾಂಧಿ ಆದೇಶ ಮೀರಲು ಅವರು ತಯಾರಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸ್ಥಾನ ಹಾಗೂ ಖರ್ಗೆ ಪುತ್ರನಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ನೀಡುವುದಾಗಿ ಹೈಕಮಾಂಡ್ ಆಮಿಷ ಒಡ್ಡಿದೆ ಎನ್ನಲಾಗಿದೆ. ಇದಕ್ಕೆ ಖರ್ಗೆ ತೆಲೆಯಾಡಿಸಿರುವ ಸುದ್ದಿಯೂ ದಟ್ಟವಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಬಿಡಾರ ಹೂಡಿದ್ದು, ಮೂರು ವಿಷಯಗಳು ಕುರಿತು ಗಂಭೀರ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮುಖ್ಯವಾಗಿ ಸಿದ್ದು ಅವರಿಗೆ ಪಕ್ಷದಲ್ಲಿ ಪ್ರತಿಪಕ್ಷ ಸ್ಥಾನ ನೀಡುವಲ್ಲಿ ಇರುವ ಗೊಂದಲ ನಿವಾರಣೆ. ರಾಜ್ಯ ಕಾಂಗ್ರೆಸ್ ಪುನಾರಚನೆ ಮಾಡುವುದು. ಸಿದ್ದರಾಮಯ್ಯ ಬೆಂಬಲಿಗರಿಗೆ ಬಳಿಸಿಕೊಳ್ಳುವುದರ ಜೊತೆಗೆ ಪಕ್ಷದಲ್ಲಿರುವ ಯುವಕರಿಗೆ ಹೆಚ್ಚಿನೆ ಜವಾಬ್ದಾರಿ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದು ದೆಹಲಿ ಮೂಲಗಳಿಂದ ತಿಳಿದು ಬಂದಿದೆ.
(ದಟ್ಸ್ ಕನ್ನಡ ವಾರ್ತೆ)
ರಾಜಕೀಯದಲ್ಲಿ ಭಾರಿ ಬದಲಾವಣೆ, ಭವಿಷ್ಯ











Click it and Unblock the Notifications