ಪ್ರೇಮಿಗಳ ದಿನಾಚರಣೆಗೆ ಶ್ರೀರಾಮಸೇನೆ ವಿರೋಧ
ಬೆಂಗಳೂರು, ಫೆ. 6 : ತಾಳಿ ಕಟ್ಟಿ, ಇಲ್ಲ ರಾಖಿ ಕಟ್ಟಿ, ಇದು ಶ್ರೀರಾಮ ಸೇನೆ ನೀಡಿರುವ ಎಚ್ಚರಿಕೆ. ಫೆ 14 ರಂದು ಪ್ರೇಮಿಗಳ ದಿನ ಆಚರಿಸುವ ಯುವ ಜನತೆಯನ್ನು ವಿವಾಹ ಬಂಧನಕ್ಕೆ ಒಳಪಡಿಸಲು, ಇಲ್ಲವಾದಲ್ಲಿ ರಾಖಿ ಕಟ್ಟಿಸುವ ಮೂಲಕ ಸಹೋದರತ್ವ ಮೂಡಿಸಲು ಅದು ಮುಂದಾಗಿದೆ.
ಪ್ರೇಮಿಗಳ ದಿನಾಚರಣೆ ನಿಷೇಧಿಸಬೇಕು. ಈ ಆಚರಣೆ ನಮ್ಮ ಸಂಸ್ಕೃತಿಯ ವಿರುದ್ಧವಾದುದು. ಆ ದಿನ ಪ್ರೇಮಿಗಳು ಸಾರ್ವಜನಕಿ ಸ್ಥಳಗಳಲ್ಲಿ ಸಭ್ಯತೆಯ ಎಲ್ಲೆಯನ್ನು ಮೀರಿರುವುದು ಕಂಡು ಬಂದರೆ, ಸ್ಥಳದಲ್ಲೇ ವಿವಾಹ ಬಂಧನಕ್ಕೆ ಒಳಪಡಿಸಲಾಗುವುದು, ಮಾಂಗಲ್ಯ, ಪುರೋಹಿತರನ್ನು ಜೊತೆಗೆ ಕರೆದೊಯ್ಯಲಾಗುವುದು ಎಂದು ಶ್ರೀರಾಮಸೇನೆ ಸಂಚಾಲಕ ಪ್ರಮೋದ್ ಮುತಾಲಿಕ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ಪ್ರೇಮಿಗಳ ದಿನದಂದು ಮುಂಬೈ, ದಿಲ್ಲಿ ಹಾಗೂ ಕೊಲ್ಕತ್ತಾ ನಗರಗಳಲ್ಲಿ 38 ಯುವತಿಯರ ಮಾನಭಂಗ ನಡೆದಿದೆ, ಆತ್ಮಹತ್ಯೆಗಳಾಗಿವೆ. ಕೇಂದ್ರ ಸಚಿವೆ ರೇಣುಕಾ ಚೌಧರಿ ಈ ಬಗ್ಗೆ ನೀಡಿರುವ ಹೇಳಿಕೆ ಸರಿಯಲ್ಲ. ಜವಾಬ್ದಾರಿ ಸ್ಥಾನದಲ್ಲಿರುವವರು ಎಚ್ಚರಿಕೆ ಮಾತುಗಳನ್ನಾಡಬೇಕು ಎಂದು ಮುತಾಲಿಕ್ ಹೇಳಿದ್ದಾರೆ. ಕ್ರಿಶ್ಚಿಯನ್ ಸಂಸ್ಕೃತಿಯಾಗಿರುವ ವ್ಯಾಲೆಂಟೈನ್ ಡೇ ಹಿಂದು ಸಂಸ್ಕೃತಿಯನ್ನು ಹಾಳು ಮಾಡತೊಡಗಿದೆ. ಅದನ್ನು ತಡೆಯುವ ಏಕೈಕ ಉದ್ದೇಶದಿಂದ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ವಿ ಎಸ್ ಆಚಾರ್ಯ, ಪ್ರೇಮಿಸುವುದು ತಪ್ಪಲ್ಲ. ಆದರೆ ಎಲ್ಲೆ ಮೀರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರೇಮಿಗಳ ದಿನಾಚರಣೆ ವಿರೋಧಿಸುತ್ತಿರುವ ಶ್ರೀರಾಮಸೇನೆ ಕಾರ್ಯಕರ್ತರು ಪ್ರತಿಭಟನೆಯ ಭರದಲ್ಲಿ ಕಾನೂನು ಕೈಗೆತ್ತಿಕೊಂಡರೆ ತಕ್ಕ ಶಾಸ್ತಿ ಕಾದಿದೆ ಎಂದು ಅವರು ಎಚ್ಚರಿಕೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications