ರಾಜ್ಯದಲ್ಲಿ ಮೇತಾಸ್ ತಲೆ ಹಾಕುವಂತಿಲ್ಲ
ಬೆಂಗಳೂರು, ಜ. 30: ಶಿವಮೊಗ್ಗ ಹಾಗೂ ಗುಲ್ಭರ್ಗಾ ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ರಾಜ್ಯದಲ್ಲಿ ಮೇತಾಸ್ ನ ಎಲ್ಲಾ ಯೋಜನೆಗಳನ್ನು ನಿಲ್ಲಿಸಲು ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುದ್ದಿಗಾರರಿಗೆ ತಿಳಿಸಿದರು. ಸತ್ಯಂ ಕಂಪ್ಯೂಟರ್ ಹಗರಣ ಆರೋಪಿ ಸಂಸ್ಥೆಯ ಮಾಜಿ ಸಿಇಒ ರಾಮಲಿಂಗರಾಜು ಅವರ ಮಗ ತೇಜ ರಾಜು ಅವರು ಮೇತಾಸ್ ಸಂಸ್ಥೆಯ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜು ಸೇರಿದಂತೆ ಆರೋಪ ಹೊತ್ತಿರುವ ಅವರ ಕುಟುಂಬದ ಸದಸ್ಯರ ಜಾಮೀನು ಅರ್ಜಿ ವಿಚಾರಣೆ ಇನ್ನೂ ಬಾಕಿಯಿದೆ.
ಸತ್ಯಂ ಕಂಪ್ಯೂಟರ್ಸ್ ನ ಸಹ ಸಂಸ್ಥೆಯಾದ ಮೇತಾಸ್ ಕೂಡ ಹಗರಣದಲ್ಲಿ ಪಾಲ್ಗೊಂಡಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇತಾಸ್ ಸಂಸ್ಥೆಗೆ ನೀಡಿದ್ದ ಎಲ್ಲಾ ಗುತ್ತಿಗೆ ಕಾರ್ಯವನ್ನು ನಿಲ್ಲಿಸಲು ಸೂಚಿಸಲಾಗಿದೆ. ಮೇತಾಸ್ ಜೊತೆ ಗುತ್ತಿಗೆ ಪಡೆದ ಇತರ ಸಂಸ್ಥೆಗಳು ಸದ್ಯಕ್ಕೆ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ ಪುನಃ ಟೆಂಡರ್ ಕರೆದು ಮೇತಾಸ್ ಗೆ ನೀಡಿದ್ದ ಗುತ್ತಿಗೆ ಯಾವ ಸಂಸ್ಥೆಗೆ ನೀಡಲಾಗುವುದು ಎಂಬುದರ ಬಗ್ಗೆ ಗೃಹ ಕಾರ್ಯದರ್ಶಿಗಳು ವಿವರ ನೀಡಲಿದ್ದಾರೆ ಎಂದು ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹೇಳಿದರು.
ಮೇತಾಸ್ ಗೆ ನೀಡಿದ್ದ ವಿಜಯನಗರ ಟೌನ್ ಶಿಪ್ ಯೋಜನೆಯನ್ನು ಮುಂಬೈ ಮೂಲದ ಜೆಎಸ್ ಡಬ್ಲ್ಯು ಸ್ಟೀಲ್ ಸಂಸ್ಥೆ ಮುಂದುವರಿಸಿಕೊಂಡು ಹೋಗುವ ಸಾಧ್ಯತೆಯಿದೆ. ರಸ್ತೆ ನವೀಕರಣ ಹಾಗೂ ದುರಸ್ತಿ ಯೋಜನೆಗಳನ್ನು ನಾಗಾರ್ಜುನ ಸಮೂಹ ಸಂಸ್ಥೆ ಪೂರೈಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
(ದಟ್ಸ್ ಕನ್ನಡವಾರ್ತೆ)
ಪೂರಕ ಓದಿಗೆ:
15 ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರದ ಅಸ್ತು
ಬೆಂಗಳೂರು ಸಾರಿಗೆ ಸಂಚಾರದ ಅಧ್ಯಯನ
ರಾಜು ಪಂಗಡಕ್ಕೆ ಜಾಮೀನು ಸಾಧ್ಯವಿಲ್ಲ ;ಕೋರ್ಟ್











Click it and Unblock the Notifications