ದಂಡಾವತಿ ಯೋಜನೆ ಕೈಬಿಡಿ : ಬಂಗಾರಪ್ಪ
ಬೆಂಗಳೂರು, ಜ. 15 : ದಂಡಾವತಿ ಯೋಜನೆ ಕಾಮಗಾರಿ ಆರಂಭಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಅಗತ್ಯ ಬಿದ್ದರೆ ಸಿಂಗೂರು ಮಾದರಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಎಚ್ಚರಿಕೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಲಾಭವಿಲ್ಲದ ದಂಡಾವತಿ ಯೋಜನೆಯನ್ನು ಸರ್ಕಾರ ಕೈಬಿಡದಿದ್ದರೆ ಭಾರಿ ಹೋರಾಟ ನಡೆಸಲಾಗುವುದು ಎಂದರು. ದಂಡಾವತಿ ಯೋಜನೆಗೆ ಶಂಕು ಸ್ಥಾಪನೆ ನೇರವೇರಿಸಲು ಕಳೆದ ಮಂಗಳವಾರ ಶಿವಮೂಗ್ಗದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಯನ್ನು ವಿರೋಧಿಸುವವರನ್ನು ಊರಿಂದ ಹೊರದಬ್ಬಿ ಎಂಬ ಹೇಳಿಕೆ ನೀಡಿದ್ದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿ ಬಂಗಾರಪ್ಪ, ಯಡಿಯೂರಪ್ಪ ಒಬ್ಬ ಮೂರನೇ ದರ್ಜೆ ಮುಖ್ಯಮಂತ್ರಿ ಎಂದು ನಿಂದಿಸಿದರು. ಈ ಥರ್ಡ್ ಕ್ಲಾಸ್ ಸಿಎಂ ಗೆ ಏನಾದರೂ ಮಾನ, ಮರ್ಯಾದೆ, ನಾಚಿಕೆ ಎಂಬುದೆನಾದರೂ ಇದೆಯಾ, ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬುದು ಗೊತ್ತಿದೆಯಾ ಎಂದು ಪ್ರಶ್ನಿಸಿದರು. ಯೋಜನೆಯ ಕಾಮಗಾರಿಯನ್ನು ಹೇಗೆ ಆರಂಭಿಸುತ್ತಾರೆ ನಾವು ನೋಡುತ್ತೇವೆ ಎಂದು ಸರ್ಕಾರಕ್ಕೆ ನೇರ ಸವಾಲು ಎಸೆದರು.
ದಂಡಾವತಿ ಯೋಜನೆಯಿಂದ ಯಾರಿಗೂ ಲಾಭವಿಲ್ಲ. ಯೋಜನೆ ಜಾರಿಯಾಗಲಿದೆ ಎಂದು ಕೇಳಿದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಷ್ಟಾದರೂ ಸರ್ಕಾರದ ಅರಿವಿಗೆ ಬಂದಿಲ್ಲ. ಅಲ್ಲದೇ ಮೃತ ರೈತನ ಕುರಿತು ಲಘುವಾಗಿ ಮಾತನಾಡಿರುವುದು ಅಕ್ಷಮ್ಯ ಎಂದು ಬಂಗಾರಪ್ಪ ಕಿಡಿಕಾರಿದರು.
(ದಟ್ಸ್ ಕನ್ನಡ ವಾರ್ತೆ)
ಕಗ್ಗಂಟಾದ ದಂಡಾವತಿ ಯೋಜನೆ ಶಂಕುಸ್ಥಾಪನೆ
ಒಂದು ಮುಳುಗಿದ ಸಂಸ್ಕೃತಿಯ ನೆನೆದು..












Click it and Unblock the Notifications