ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಸು ಇರುವುದೆ ಖಾತ್ರಿ ಇಲ್ಲ, ಭೈರಪ್ಪ

By Staff
|
Google Oneindia Kannada News

ಬೆಂಗಳೂರು, ಜ. 5 : ಇತ್ತೀಚಿನ ದಿನಗಳಲ್ಲಿ ಮತಾಂತರ ಪೆಡಂಭೂತವಾಗಿ ಕಾಡತೊಡಗಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಖ್ಯಾತ ಕಾದಂಬರಿಕಾರ ಡಾ ಎಸ್ ಎಲ್ ಭೈರಪ್ಪ ಹೇಳಿದರು. ಮತಾಂತರ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವೇ ಮತಾಂತರ ನಿಷೇಧ ಕಾನೂನು ರೂಪಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಭಾರತೀಯ ವಿಚಾರವಂತರ ವೇದಿಕೆ ಭಾನುವಾರ ನಗರದ ರವಿಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದ್ದ 'ಮತಾಂತರ ಸತ್ಯದ ಮೇಲೆ ಹಲ್ಲೆ' ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಭಾರತೀಯ ಸಾಹಿತ್ಯ ಸಂಸ್ಕೃತಿಗೆ ರಕ್ಷಣೆಗೆ ಈ ಕ್ರಮ ಅಗತ್ಯ ಎಂದು ಭೈರಪ್ಪ ಪ್ರತಿಪಾದಿಸಿದರು. ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳು ಸಾಧ್ಯವಾದಷ್ಚು ಜನರನ್ನು ಮತಾಂತರಗೊಳಿಸುವ ಯತ್ನ ನಡೆಸಿವೆ. ಸಹಸ್ರಾರು ವರ್ಷಗಳಿಂದ ಪಾಲಿಸಿಕೊಂಡು, ಬರಲಾಗುತ್ತಿರುವ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆ ಉಂಟಾಗಲಿದೆ ಎಂದು ಆರೋಪಿಸಿದರು.

ಇಸ್ಲಾಂ ಹಿಂಸಾ ಮಾರ್ಗ ಅನುಸರಿಸುತ್ತಿದ್ದರೆ, ಕ್ರೈಸ್ತರು ಸೇವೆಯ ನೆಪದಲ್ಲಿ ಮತಾಂತರಕ್ಕೆ ಹೆಚ್ಚಿನ ಅದ್ಯತೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ವೇಳೆ ಭಾರತೀಯರೆಲ್ಲರೂ ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೆ, ಭಾರತೀಯ ಸಾಹಿತ್ಯ ಸಂಸ್ಕೃತಿ, ಸಂಸ್ಕೃತ, ಸಂಗೀತ, ವಿಗ್ರಹ, ದೇವಸ್ಥಾನ ಎಲ್ಲವೂ ನಶಿಸುತ್ತವೆ. ಬೌದ್ಧಿಕ ಸ್ವಾತಂತ್ರ್ಯ ಮತ್ತು ವಿಚಾರಗಳನ್ನು ಮಂಡಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು. ಬೌದ್ಧಿಕ ಸ್ವಾತಂತ್ರ್ಯ, ವಿಚಾರ ಮಂಡನೆ, ಚರ್ಚೆ ಮತ್ತು ಬದಲಾವಣೆಗೆ ಹಿಂದೂ ಧರ್ಮದಲ್ಲಿ ಸದಾ ಅವಕಾಶವಿದೆ. ಇತರ ಧರ್ಮಗಳಲ್ಲಿ ಅದು ಇಲ್ಲ ಎಂದು ಅವರು ಪ್ರತಿಪಾದನೆ ಮಾಡಿದರು.

ಏಸು ಕ್ರಿಸ್ತ ಇದ್ದನೇ, ಇಲ್ಲವೇ ಎಂಬುದೇ ಈಗ ಜಿಜ್ಞಾಸೆಯಾಗಿದೆ. ಏಸು ಎಂಬುವವನು ಇರಲೇ ಇಲ್ಲ ಎಂಬುದಕ್ಕೂ ಹಲವರು ಸಾಕಷ್ಟು ದಾಖಲೆಗಳನ್ನು ಈಗಾಗಲೇ ಕಲೆ ಹಾಕಿದ್ದಾರೆ ಎಂದು ಭೈರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮೂಲಕ ವಿವಾದ ಎಬ್ಬಿಸುವುದು ನನ್ನ ಉದ್ದೇಶ ಅಲ್ಲ ಎಂದ ಭೈರಪ್ಪ ನನ್ನ ಬರವಣಿಗೆಯ ಮೂಲ ಉದ್ದೇಶ ಸತ್ಯವನ್ನು ಹುಡುಕುವುದು. ಇದನ್ನು ಬಿಟ್ಟರೆ, ನನ್ನ ಬರವಣಿಗೆಗೆ ಯಾವ ಗುರಿಯೂ ಇಲ್ಲ ಎಂದರು. ಕೆಲವು ಬುದ್ಧಿಜೀವಿಗಳು, ಸಾಹಿತಿಗಳು, ರಾಜಕಾರಣಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.

ಸರ್ಕಾರದಿಂದ ಕೆಲವು ಸವಲತ್ತು, ಹುದ್ದೆ, ಪ್ರಶಸ್ತಿ, ಅಧಿಕಾರ ಕೈತಪ್ಪಿ ಹೋಗುವ ಭಯದಿಂದ ಪೊಲಿಟಿಕಲಿ ಕರೆಕ್ಟ್ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಒಬ್ಬ ಸಾಹಿತಿ ಎಷ್ಟು ಅಧ್ಯಯನ, ಸಂಶೋಧನೆ ನಡೆಸಿ ಸತ್ಯವನ್ನು ಬರೆದಿದ್ದಾನೆ ಎನ್ನುವುದಷ್ಟೇ ಚಿರಕಾಲ ಉಳಿಯಲಿದೆ. ಈ ಕೆಲಸ ಮಾಡಿರುವ ಚಿದಾನಂದಮೂರ್ತಿ ಅವರಿಗೆ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನ ಕೈತಪ್ಪಿರುವುದಕ್ಕೆ ಖೇದ ವ್ಯಕ್ತಪಡಿಸುವ ಬದಲು, ಅವರ ದಾಖಲಿಸಿರುವ ಸತ್ಯಕ್ಕೆ ಅಭಿನಂದಿಸೋಣ ಎಂದು ಭೈರಪ್ಪ ಮಾರ್ಮಿಕವಾಗಿ ನುಡಿದರು

ಹಿಂದೂ ಧರ್ಮಕ್ಕೆ ಮೀಸಲು

ತಮ್ಮ ಜೀವನ ಹಿಂದೂ ಧರ್ಮ ರಕ್ಷಣೆಗೆ ಮೀಸಲು ಎಂದು ಖ್ಯಾತ ಸಂಶೋಧಕ ಎಂ ಚಿದಾನಂದಮೂರ್ತಿ ಸ್ಪಷ್ಟಪಡಿಸಿದರು. ಮಹಾತ್ಮಗಾಂಧಿ ಕ್ರೈಸ್ತ ಧರ್ಮದ ಕುರಿತು ಒಳ್ಳೆಯ ಭಾವನೆಯನ್ನು ಹೊಂದಿರಲಿಲ್ಲ. ಕ್ರೈಸ್ತರು ಎಂದಿಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ವರ್ಷಗಳು ಕಳೆದಂತೆ ಮುಸ್ಲಿಂ ಮತ್ತು ಕ್ರೈಸ್ತರ ಸಂಖ್ಯೆ ಹೆಚ್ಚುತ್ತಿದೆ. ಭವಿಷ್ಯದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದರು.

ದೇಶದ ಹೆಸರು ಕುರಿತು ತಮ್ಮ ಕೊನೆಯ ಕನಸಿದೆ ಎಂದು ಹೇಳಿದ ಅವರು, ನಾನು ಸಾಯುವುದರೊಳಗೆ ದೇಶವು ವಿಶ್ವಮಟ್ಟದಲ್ಲಿ ಭಾರತ ಎಂದು ಕರೆಸಿಕೊಳ್ಳಬೇಕು. ಇಂಡಿಯಾ ಹೆಸರನ್ನು ಸಂಪೂರ್ಣವಾಗಿ ತೆಗೆದು ಹಾಕಿ ಭಾರತವೆಂದು ನಾಮಕರಣಗೊಳ್ಳಬೇಕು ಎಂದು ಚಿದಾನಂದಮೂರ್ತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)
'ಮತಾಂತರ ಸತ್ಯದ ಮೇಲೆ ಹಲ್ಲೆ' : ಎಸ್ಸೆಲ್ ಭೈರಪ್ಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X