ಕುಮಾರಸ್ವಾಮಿ ವಿರುದ್ಧ ಸಿಎಂ ಮೊಕದ್ದಮೆ
ಬೆಂಗಳೂರು, ಡಿ. 29 : ನಗರದ ಈಜೀಪುರ ವಸತಿ ಸಂಕೀರ್ಣದ ಕಾಮಗಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಲಂಚ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸೋಮವಾರ ನಗರದ ಪ್ರಧಾನ ಸಿವಿಲ್ ಹಾಗೂ ಸೆಷನ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಸರ್ಕಾರ ಅಧಿಕೃತವಾಗಿ ದಾಖಲಿಸಿತು.
ಸಿವಿಲ್ ಹಾಗೂ ಸೆಷನ್ ನ್ಯಾಯಾಧೀಶ ಎಚ್ ಎಸ್ ಕೆಂಪಣ್ಣ ಅವರು ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಬೆಂಗಳೂರಿನ ಈಜೀಪುರದಲ್ಲಿ ನಿರ್ಮಿಸಲಾಗುತ್ತಿರುವ ವಸತಿ ಸಂಕೀರ್ಣಕ್ಕೆ ಸಂಬಂಧಿಸಿದಂತೆ ಮೇವರಿಕ್ ಹೋಲ್ಡಿಂಗ್ಸ್ ಸಂಸ್ಥೆಯಿಂದ ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಸುಮಾರು 50 ಕೋಟಿ ರುಪಾಯಿಗಳನ್ನು ಲಂಚ ಪಡೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.
ಕುಮಾರಸ್ವಾಮಿ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಯಡಿಯೂರಪ್ಪ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದರು. ಹಾಗೆಯೇ ಲಂಚ ಪ್ರಕರಣವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾಗಿ ರವಿ ಬಿ ನಾಯಕ ವಾದಿಸುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಅಡ್ವಾಣಿ ಪಿಎಂ ಮಾಡುವುದೇ ಏಕೈಕ ಗುರಿ : ಸಿಎಂ
ಮಾನನಷ್ಟ ಮೊಕದ್ದಮೆಗೆ ಭಯವಿಲ್ಲ : ಕುಮಾರಸ್ವಾಮಿ












Click it and Unblock the Notifications