ಸದ್ಯಕ್ಕೆ ಇಲಾಖೆ ಮತ್ತು ಮಂಡಳಿಗಳ ವಿಲೀನ ಇಲ್ಲ
ಬೆಂಗಳೂರು, ಡಿ.24: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆಯಿಂದ ಕರ್ನಾಟಕ ಸರ್ಕಾರ ಹಿಂದೆ ಸರಿದಿದೆ. ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣ ಸರ್ಕಾರ ವಿಲೀನ ಪ್ರಕ್ರಿಯೆಯನ್ನು ಕೈಬಿಟ್ಟಿದೆ.
ನವೆಂಬರ್ 11ರಂದು ಜಾರಿಗೊಳಿಸಲಾಗಿದ್ದ ವಿಲೀನದ ಆದೇಶವನ್ನು ಇಂದಿನಿಂದಲೇ ವಾಪಸ್ಸು ಪಡೆಯುತ್ತಿರುವುದಾಗಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ವಿರೋಧ ಪಕ್ಷಗಳಿಂದ ಮಂಡಳಿ ಮತ್ತು ಇಲಾಖೆಗಳ ವಿಲೀನಕ್ಕೆ ತೀವ್ರವಾದ ವಿರೋಧ ವ್ಯಕ್ತವಾಗಿತ್ತು.
ಸರ್ಕಾರ ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಠ ಜಾತಿಗಳ ಕಲ್ಯಾಣ ಇಲಾಖೆ, ಅಂಬೇಡ್ಕರ್ ಅಭಿವೃದ್ಧಿ ಮಂಡಳಿ ಮತ್ತು ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ಮಂಡಳಿ ಸೇರಿದಂತೆ ಹಲವಾರು ಇಲಾಖೆ ಮತ್ತು ಮಂಡಳಿಗಳನ್ನು ವಿಲೀನಗೊಳಿಸಿ ದಕ್ಷತೆ ಹೆಚ್ಚಿಸಲು ನಿರ್ಧರಿಸಲಾಗಿತ್ತು.
ಮಂಡಳಿ ಮತ್ತು ಇಲಾಖೆಗಳನ್ನು ವೀಲೀನ ಪ್ರಕ್ರಿಯೆಗೆ ದೇವೇಗೌಡರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿಯೇ ಈ ಮಂಡಳಿ ಮತ್ತು ಇಲಾಖೆಗಳನ್ನು ಸ್ಥಾಪಿಸಲಾಗಿದೆ. ಈಗ ಇವನ್ನು ವಿಲೀನಗೊಳಿಸುವುದರಿಂದ ಇಲಾಖೆ ಮತ್ತು ಮಂಡಳಿಗಳ ಸ್ಥಾಪನೆಯ ಹಿಂದಿದ್ದ ಉದ್ದೇಶವೇ ಬದಲಾಗುತ್ತದೆ ಎಂದು ದೇವೇಗೌಡ ವಾದಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications